ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಉಗ್ರಗಾಮಿ ಚಟುವಟಿಕೆ ಬಯಲು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Madani taken to Hosathota
ಮಡಿಕೇರಿ, ಆ.22: ಕೊಡಗಿನಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ ಎಂಬ ಶಂಕೆ ಹಿಂದಿನಿಂದಲೂ ಇತ್ತು. ಕೇರಳದ ಸಂಘಟನೆಯೊಂದರ ಪ್ರಮುಖರು ಸ್ಥಳೀಯ ಯುವಕರ ಮನವೊಲಿಸಿ ಉಗ್ರಗಾಮಿ ಚಟುವಟಿಕೆ ನಡೆಸಲು ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪವನ್ನು ಹಿಂದುಪರ ಸಂಘಟನೆಗಳು ಮಾಡಿದ್ದವು.

ಈ ಸಂದರ್ಭ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದರೆ, ಬೆಂಗಳೂರು ಸರಣಿ ಸ್ಪೋಟ ಸಂಭವಿಸುತ್ತಿರಲಿಲ್ಲವೆನೋ. ಉಗ್ರ ನಜೀರ್ ಸೆರೆ ಸಿಕ್ಕಿ ಕೊಡಗಿನಲ್ಲಿ ಕಾಫಿತೋಟದ ಮಧ್ಯೆ ಕುಳಿತು ಬೆಂಗಳೂರು ಸರಣಿ ಸ್ಪೋಟದ ಸ್ಕೆಚ್ ತಯಾರಿಸಿದ್ದೆವು ಎಂದು ಬಾಯಿ ಬಿಡುವ ತನಕವೂ ಕೊಡಗು ಉಗ್ರಗಾಮಿಗಳ ಚಟುವಟಿಕೆಗೆ ತಾಣವಾಗಿತ್ತು ಎಂಬ ಅರಿವೇ ಇರಲಿಲ್ಲ.

ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ನಡೆಸಿದಾಗ ಸೋಮವಾರಪೇಟೆಯ ಹೊಸತೋಟದ ಲಕ್ಕೆರೆಯಲ್ಲಿ ನಿರ್ಮಿಸಿದ ಶೆಡ್, ಅಲ್ಲಿ ಸಿಕ್ಕ ಕೆಲವು ದಾಖಲಾತಿಗಳು ನಜೀರ್ ಅಲ್ಲಿ ಕೆಲ ಸಮಯಗಳ ಕಾಲ ವಾಸ್ತವ್ಯ ಹೂಡಿದ್ದನು ಎಂಬುವುದನ್ನು ನಿರೂಪಿಸಿತ್ತು. ಅಲ್ಲದೆ ಆ ಸಂದರ್ಭ ಸ್ಥಳೀಯರನ್ನು ವಿಚಾರಿಸಿದಾಗ ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದುಹೋಗುತ್ತಿದ್ದ ವಿಚಾರವನ್ನು ತಿಳಿಸಿದ್ದರು. ಆದರೆ ಆ ವ್ಯಕ್ತಿ ಯಾರಾಗಿರಬಹುದೆಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದರಲ್ಲದೆ, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದರು. ಆದರೆ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿ ಎಂಬುವುದು ಇದೀಗ ಬಹಿರಂಗಗೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ 5.30ರ ವೇಳೆಗೆ ಮದನಿಯನ್ನು ಕೊಡಗಿನ ಲಕ್ಕೆರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆ ತಂದ ಕ್ರೈಂ ಬ್ರಾಂಚ್ ಪೊಲೀಸರು, ಉಗ್ರ ನಜೀರ್ ನಿರ್ಮಿಸಿಕೊಂಡಿದ್ದ ಶೆಡ್ ಬಳಿಯಲ್ಲಿಯೇ ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಕೆಲವು ಅಗತ್ಯ ಮಾಹಿತಿಗಳನ್ನು ಆತ ಹೇಳಿದ್ದಾನೆ ಎನ್ನಲಾಗಿದೆ. 5.30 ರಿಂದ 6.15 ರವರೆಗೆ ಅಲ್ಲಿ ಸುತ್ತಾಡಿ ಮಾಹಿತಿ ಕಲೆಹಾಕಿದ್ದಾರೆ. ಆದರೆ ಇಲ್ಲಿ ಮಾಧ್ಯಮದವರನ್ನು ಹತ್ತಿರ ಬಿಡದಿದ್ದುದು ಸ್ಥಳೀಯ ಪತ್ರಕರ್ತರ ಅಸಮಾಧಾನಕ್ಕೂ ಕಾರಣವಾಯಿತು.

ಈ ಸಂದರ್ಭ ಮಾತನಾಡಿದ ಡಿಸಿಪಿ ಸಿದ್ದರಾಮಪ್ಪರವರು ವಿಚಾರಣೆಯನ್ನು ನಡೆಸುತ್ತಿದ್ದು ಸಹಕರಿಸುವಂತೆ ಕೋರಿದರಲ್ಲದೆ, ಮದನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದಾಗಿ ಹೇಳಿದರು. ಆದರೆ ಮದನಿ ನನಗೆ ಪ್ರಾರ್ಥನೆ ಮಾಡಲು ಸಮಯವಾಗುತ್ತಿರುವುದರಿಂದ ಬೇಗ ತೆರಳುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದನು ಎಂದು ಹೇಳಲಾಗಿದ್ದು, ಅದರಂತೆ ಸುಂಟಿಕೊಪ್ಪದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ ಬಳಿಕ ರಾತ್ರಿ ಬೆಂಗಳೂರಿಗೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನಿಖಾ ತಂಡದಲ್ಲಿ ಕ್ರೈಂ ಬ್ರಾಂಚ್ ಉಪ ಆಯುಕ್ತ ಓಂಕಾರಯ್ಯ, ಇನ್ಸ್‌ಪೆಕ್ಟರ್ ಬಿದ್ದಪ್ಪ ಮತ್ತಿತರ ಅಧಿಕಾರಿಗಳಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X