• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಗಿಲು ಮುಟ್ಟಿದ ರೆಡ್ಡಿ ಸೋದರರ ಸಂಭ್ರಮ

By * ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಆ. 19: ಸಾಮೂಹಿಕ ವಿವಾಹ ಮತ್ತು ಬಿಜೆಪಿಯ ಸ್ವಾಭಿಮಾನಿ ಸಮಾವೇಶಕ್ಕಾಗಿ ಬಳ್ಳಾರಿಯಲ್ಲಿ ಭರದ ಸಿದ್ಧತೆ ನಡೆದಿದೆ. ಪ್ರತೀ ವರ್ಷದಂತೆ ಶ್ರಾವಣ ಶುಕ್ರವಾರದ ವರಮಹಾಲಕ್ಷ್ಮೀ ಪೂಜೆಯ ಜೊತೆಯಲ್ಲಿ ಬಿಜೆಪಿಯ ಸ್ವಾಭಿಮಾನಿ ಸಮಾವೇಶ ಕೂಡ ನಡೆಯಲಿದೆ. ಈ ಸಮಾವೇಶದಿಂದ ಪಕ್ಷದ ಜನಪರ ಕಾರ್ಯಗಳ ಪ್ರಚಾರ ಹೆಚ್ಚಾಗಲಿದೆ.

ಬಳ್ಳಾರಿ ತುಂಬಾ ಕಟೌಟ್ ಗಳು: ನಗರಾದ್ಯಂತ ಬಿಜೆಪಿಯ ರಾಷ್ಟ್ರೀಯ ನಾಯಕರಾದ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಎಲ್.ಕೆ. ಅಡ್ವಾನಿ, ವೆಂಕಯ್ಯನಾಯ್ಡು, ಅನಂತಕುಮಾರ್, ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ, ಸಚಿವ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ರಾಜನಾಥಸಿಂಗ್. ಜಿ. ಜನಾರ್ದನರೆಡ್ಡಿ, ಜಿ. ಕರುಣಾಕರರೆಡ್ಡಿ, ಬಿ. ಶ್ರೀರಾಮುಲು, ಜಿ. ಸೋಮಶೇಖರರೆಡ್ಡಿ, ಸಂಸದೆ ಜೆ. ಶಾಂತಾ ಅವರ ಕಟೌಟ್‌ಗಳು, ಬ್ಯಾನರ್‌ಗಳು, ಪೋಸ್ಟರ್‌ಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

ವಿವಾಹ ಕಾರ್ಯಕ್ರಮ ದಾಖಲೆ: ಬಳ್ಳಾರಿ ನಗರದ ಎಲ್ಲಾ ರಸ್ತೆಗಳಲ್ಲೂ ಬಿಜೆಪಿಯ ಸಾಮೂಹಿಕ ವಿವಾಹ ಮತ್ತು ಸ್ವಾಭಿಮಾನಿ ಸಮಾವೇಶಕ್ಕೆ ಬರುತ್ತಿರುವವರದ್ದೇ ಕಾರುಬಾರು. ಬಳ್ಳಾರಿ ನಗರವೀಗ ಬಿಜೆಪಿಮಯವಾಗಿದೆ. ಎಲ್ಲೆಲ್ಲೂ ಬಿಜೆಪಿಯದ್ದೇ ಮಾತು, ಚರ್ಚೆ. 1999ರಿಂದ ಪ್ರಾರಂಭವಾದ ಸಾಮೂಹಿಕ ವಿವಾಹ ಕಾರ್ಯಕ್ರಮ ಈಗ ತನ್ನ 11ನೇ ವರ್ಷಕ್ಕೆ ಕಾಲಿರಿಸಿದೆ. ಸುಮಾರು 320ಕ್ಕೂ ಅಧಿಕ ಜೋಡಿಗಳು ಹಸೆಮಣೆ ಏರಲಿದ್ದಾರೆ.

ವಿವಾಹ ಕಾರ್ಯಕ್ರಮಗಳು ಸುಗಮವಾಗಿ ನಡೆಯುವುದಕ್ಕಾಗಿ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಕಾಲೇಜಿನ ಕಾಂಪೌಂಡ್‌ನ ಗೋಡೆಯನ್ನು ದಕ್ಷಿಣ - ಪೂರ್ವಭಾಗದಲ್ಲಿ ಒಡೆದು ಹಾಕಿದ್ದು ಈ ಕಾರ್ಯಕ್ರಮ ಮುಗಿದ ನಂತರ ಪುನಃ ಕಟ್ಟಿಸಿಕೊಡುವುದಾಗಿ ಜಿಲ್ಲಾ ಬಿಜೆಪಿ ತಿಳಿಸಿದೆ.

ರೆಡ್ಡಿಗಳ ತಾಯಿಯ ಆಗಮನ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರು ಮತದಾರರಿಗೆ ಕೊಟ್ಟ ಮಾತಿನ ಪ್ರಕಾರ ಪ್ರತೀ ವರ್ಷಬಳ್ಳಾರಿಗೆ ಆಗಮಿಸಿ (ಒಮ್ಮೆ ಮಾತ್ರ ಆಗಮಿಸಿಲ್ಲ) ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಆಶೀರ್ವದಿಸುತ್ತಾರೆ. ಬಳ್ಳಾರಿಯ ರೆಡ್ಡಿ ಸಹೋದರರ ತಾಯಿಯಾಗಿ ರಾಜಕೀಯವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಐದು ಲಕ್ಷಕ್ಕೂ ಹೆಚ್ಚಿನ ಬಿಜೆಪಿ ಕಾರ್ಯಕರ್ತರು, ನೇತಾರರು ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 2,000 ಬಸ್‌ಗಳಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಬಿಜೆಪಿ ಬುಧವಾರದಿಂದ ಜಿಲ್ಲಾ, ನಗರ ಮಟ್ಟದ ನಿಷ್ಠಾವಂತ ಕಾರ್ಯಕರ್ತರ ಸಭೆಯನ್ನು ನಡೆಸಿ ಸ್ವಯಂಸೇವಕರನ್ನು ನೇಮಿಸುತ್ತಿದೆ.

ಆಗಸ್ಟ್ 9 ರಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಉತ್ತರ ನೀಡಲು ಜಿಲ್ಲಾ ಬಿಜೆಪಿ ಈ ಸಮಾವೇಶವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಚಿವ ಜಿ. ಜನಾರ್ದನರೆಡ್ಡಿ, ಬಿ. ಶ್ರೀರಾಮುಲು ಮತ್ತು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಒಟ್ಟಾಗಿ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.

ವಿವಿಧ ಕಾಮಗಾರಿಗಳಿಗೆ ಚಾಲನೆ : ಬಳ್ಳಾರಿ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಆದಿಶಕ್ತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು 65 ಲಕ್ಷ ರು. ಗಳನ್ನು ವ್ಯಯ ಮಾಡಲಾಗಿದ್ದು ಆಗಸ್ಟ್ 20 ರಂದು ಜನರಿಗೆ ಅರ್ಪಣೆ ಆಗಲಿವೆ. ಅಲ್ಲದೇ, ಟಿಬಿ ಸ್ಯಾನಿಟೋರಿಂ ಬಳಿ 1500 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ.

ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಕಂಚಿನ ಪುತ್ಥಳಿಗಳ ಅನಾವರಣ. 410 ಕೋಟಿ ರು. ವೆಚ್ಚದಲ್ಲಿ ಸಿರವಾರ - ಚಾಗನೂರು ಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಳಗಲ್ ಕ್ರಾಸ್ ಸಮೀಪ 18 ಎಕರೆ ಭೂಮಿಯಲ್ಲಿ 132 ಕೋಟಿ ರುಪಾಯಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 170 ಕೋಟಿ ರುಪಾಯಿ ವೆಚ್ಚದಲ್ಲಿ ಬಳ್ಳಾರಿ - ಮೋಕಾ ರಸ್ತೆ ನಿರ್ಮಾಣ, 65 ಕೋಟಿ ರುಪಾಯಿ ವೆಚ್ಚದಲ್ಲಿ ಮೃಗಾಲಯ ನಿರ್ಮಾಣ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳಿಗೆ ಸುಷ್ಮಾ ಸ್ವರಾಜ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X