ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕ್ಕೋಡ್ಲುವಿನಲ್ಲಿ ಕೊಡವರ 'ಮಳೆನಮ್ಮೆ'

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Mukkodlu Male Habba, Kodagu
ಒಂದೆಡೆ ಜಿಟಿ...ಜಿಟಿ..... ಮಳೆ, ಮತ್ತೊಂದೆಡೆ ಸುಯ್ಯೆಂದು ಬೀಸುವ ಕುಳಿರ್‌ಗಾಳಿ.... ಸಣ್ಣಗೆ ನಡುಕ ಹುಟ್ಟಿಸುವ ಚಳಿ.... ಅಲೆ ಅಲೆಯಾಗಿ ತೇಲಿ ಬರುತಿದ್ದ ಸಾಂಪ್ರದಾಯಿಕ ಕೊಡವ ವಾಲಗದೊಂದಿಗೆ ಆಗೊಮ್ಮೆ ಈಗೊಮ್ಮೆ ಹರಹೊ ಎಂಬ ಗದ್ದೆ ಉಳುಮೆ ಮಾಡುವ ರೈತನ ಸದ್ದು...

ಸೂಟು ಬೂಟು ತೊಟ್ಟು ಸಭೆ, ಸಮಾರಂಭಗಳಲ್ಲಿ ಬಿಜ್ಹಿಯಾಗಿರುತ್ತಿದ್ದ ಜನಪ್ರತಿನಿಧಿಗಳು, ಮುಖಂಡರು ತಮ್ಮ ದೈನಂದಿನ ಬದುಕಿನ ಜಂಜಾಟವನ್ನೆಲ್ಲಾ ಬದಿಗೊತ್ತಿ ಅಪ್ಪಟ ರೈತರಾಗಿ ಬಿಟ್ಟಿದ್ದರು... ಕೆಲವರು ನೇಗಿಲು ಹಿಡಿದು ಉಳುಮೆ ಮಾಡಿದರೆ... ಮತ್ತೆ ಕೆಲವರು ಪೈರು ಹಿಡಿದು ನಾಟಿ ಮಾಡಿದರು... ಮಹಿಳೆಯರು ಕೂಡ ಸುಮ್ಮನೆ ಕೂರದೆ ಪೈರು ಕಿತ್ತು ನಾಟಿ ನೆಟ್ಟರು...

ಕೊಡಗಿನ ಮಡಿಕೇರಿ ಬಳಿಯ ಪುಟ್ಟಗ್ರಾಮ ಮುಕ್ಕೋಡ್ಲುವಿನ ಹೊಟ್ಟೆಯಂಗಡ ಎಸ್. ತಿಮ್ಮಯ್ಯ ಅವರ ಕೆಸರು ಗದ್ದೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ "ಮಳೆನಮ್ಮೆ" (ಮಳೆಹಬ್ಬ) ಇಂತಹ ಸುಂದರ ದೃಶ್ಯಗಳಿಗೆ ಸಾಕ್ಷಿಯಾಯಿತು.

ಹಾಗೆನೋಡಿದರೆ ಒಂದು ಕಾಲದಲ್ಲಿ ಕೊಡಗಿನಲ್ಲಿ ಭತ್ತದ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಆಗ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯೂ ಇರಲಿಲ್ಲ. ಹೀಗಾಗಿ ಭತ್ತದ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅಷ್ಟೇ ಅಲ್ಲ ಭತ್ತದ ಕೃಷಿಯನ್ನು ಆಧಾರವಾಗಿಟ್ಟುಕೊಂಡೇ ಹಬ್ಬ ಹರಿದಿನಗಳನ್ನು ಹುಟ್ಟು ಹಾಕಿದ್ದು ಇಂದಿಗೂ ಕೂಡ ಇಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ನೇಗಿಲು ಹಿಡಿದು ಗದ್ದೆಗಿಳಿಯುತ್ತಿದ್ದ ರೈತ ಉಳುಮೆ, ನಾಟಿ ಹೀಗೆ ಕೃಷಿ ಚಟುವಟಿಕೆಯಲ್ಲಿಯೇ ನಿರತನಾಗುತ್ತಿದ್ದ ತನ್ನ ಕೆಲಸ ಕಾರ್ಯ ಸುಗಮವಾಗಿ ಸಾಗಲು ಹಾಗೂ ಕೆಲಸದ ಬಳಲಿಕೆಯನ್ನು ದೂರಮಾಡಲು ನಾಟಿ ಸಂದರ್ಭ ಒಯ್ಯಹಾಕುತ್ತಿದ್ದ.

ಗದ್ದೆಯಲ್ಲಿ ಒಬ್ಬ ಯಾವುದಾದರು ವಿಷಯದ ಬಗ್ಗೆ ಹಾಡು ಕಟ್ಟಿ ಹೇಳುತ್ತಿದ್ದರೆ ಉಳಿದವರು ಇದಕ್ಕೆ ದನಿಗೂಡಿಸುತ್ತಿದ್ದರು. ಇದು ಹಾಸ್ಯಮಯವಾಗಿರುತ್ತಿತ್ತು. ನಾಟಿ ಮುಗಿದ ನಂತರ ಗದ್ದೆಯಲ್ಲಿ ನಾಟ ಓಟ ಏರ್ಪಡಿಸಿ ಗೆದ್ದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು.

ಭತ್ತದ ಕೃಷಿ ಚಟುವಟಿಕೆ ಮುಗಿಸಿದ ಸಂತೋಷಕ್ಕೆ "ಕೈಲುಮೂಹೂರ್ತ'', ಭತ್ತ ಕೊಯ್ಲುಗೆ ಬಂದಾಗ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭ "ಹುತ್ತರಿ" ಹಬ್ಬವನ್ನು ಆಚರಿಸಲಾಗುತ್ತಿತ್ತು. ಆಗಿನ ದಿನಗಳಲ್ಲಿ ಹೆಚ್ಚು ಗದ್ದೆ ಹೊಂದಿದವರನ್ನು ಶ್ರೀಮಂತನೆಂದೇ ಪರಿಗಣಿಸಲಾಗುತ್ತಿತ್ತು. ಹೆಚ್ಚಿನ ಕುಟುಂಬಗಳು ಒಬ್ಬರಿಗೊಬ್ಬರು ಸಹಕರಿಸುತ್ತಾ ಕೂಡುಆಳುಗಳಾಗಿ ಕೃಷಿ ಚಟುವಟಕೆ ನಡೆಸುತ್ತಿದ್ದರು. ಲಾಭನಷ್ಟದ ಲೆಕ್ಕಚಾರವಿರಲಿಲ್ಲ.

ವರ್ಷಗಳು ಉರುಳಿದಂತೆ ವಾಣಿಜ್ಯ ಬೆಳೆಗಳ ಭರಾಟೆಯಿಂದಾಗಿ ಭತ್ತದ ಕೃಷಿಯತ್ತ ರೈತರಿಗೆ ಆಸಕ್ತಿ ಕಡಿಮೆಯಾಗತೊಡಗಿತು. ಲಾಭ ನಷ್ಟದ ಲೆಕ್ಕಚಾರ ಹಾಕಿದ ಕೆಲವು ರೈತರು ಗದ್ದೆಯನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ ಮತ್ತೆ ಕೆಲವರು ಭತ್ತದ ಬದಲಿಗೆ ಬೇರೆ ಬೆಳೆಗಳನ್ನು ಬೆಳೆಯತೊಡಗಿದರು.

ಹೀಗಾಗಿ ಭತ್ತದ ಬಗೆಗಿನ ಆಸಕ್ತಿಯೇ ಕಡಿಮೆಯಾದ ಮೇಲೆ ಆಚಾರ ವಿಚಾರ, ಪದ್ಧತಿ, ಪರಂಪರೆಯೂ ಕೂಡ ನೇಪಥ್ಯಕ್ಕೆ ಸರಿಯತೊಡಗಿತು ಇದನ್ನು ಅರಿತ ಕೊಡವ ಸಾಹಿತ್ಯ ಅಕಾಡೆಮಿ "ಮಳೆಹಬ್ಬ" ಆಚರಿಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿತು.

ಸಾಂಪ್ರದಾಯಿಕ ಧಿರಿಸಿನಲ್ಲಿ ಮಳೆಹಬ್ಬಕ್ಕೆ ಆಗಮಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತುಗಳಿಂದ ಉಳುಮೆ ಮಾಡಿದರು, ಮಹಿಳೆಯರು ಪೈರು ಕಿತ್ತರೆ, ಪುರುಷರು ನಾಟಿ ನೆಟ್ಟರು, ಬಳಿಕ ಮಹಿಳೆಯರಿಗೆ, ಪುರುಷರಿಗೆ, ಬಾಲಕರಿಗೆ, ಹಗ್ಗಜಗ್ಗಾಟ, ಓಟ, ಶಕ್ತಿಕೋಲ್, ನಾಯಿಯ ರನ್ನಿಂಗ್ ರೇಸ್ ಎಲ್ಲವೂ ನಡೆಯಿತು. ಗ್ರಾಮಸ್ಥರೆಲ್ಲ ತಮ್ಮ ಜಂಜಾಟ ಮರೆತು ಕೆಸರಿನಲ್ಲಿಯೇ ವಾಲಗಕ್ಕೆ ಹೆಜ್ಜೆ ಹಾಕಿದರು. ಮಧ್ಯಾಹ್ನದ ಭೋಜನದ ಬಳಿಕ ಸಭೆ ಸಮಾರಂಭ ನಡೆಯಿತು. ಅಂತು ಮಳೆ ಹಬ್ಬ ಸಂಭ್ರಮದಿಂದಲೇ ಕಳೆದು ಹೋಯಿತು.

ಗ್ಯಾಲರಿ: ಮುಕ್ಕೋಡ್ಲು ಕೊಡವರ ಮಳೆಹಬ್ಬದ ದೃಶ್ಯಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X