ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟ ತಿಂಡಿಗಾಗಿ ಕಾಂಗ್ರೆಸ್ಸಿಗರ ಪಾದಯಾತ್ರೆ : ರೆಡ್ಡಿ

By Prasad
|
Google Oneindia Kannada News

G Janardhana Reddy
ಬಳ್ಳಾರಿ, ಆ. 7 : ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳಿಸದೇ ಹೋದರೆ ನನ್ನ ಹೆಸರು ಜನಾರ್ದನ ರೆಡ್ಡಿಯೇ ಅಲ್ಲ ಎಂದು ಗಣಿಧಣಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಶಪಥ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ಎಲ್ಲರೂ ಕಾಂಗ್ರೆಸ್‌ನವರೇ. ಬಿಜೆಪಿಯ ಯಾರೂ ಅಕ್ರಮ ಗಣಿಗಾರಿಕೆ ಮಾಡುತ್ತಿಲ್ಲ. ಲೋಕಾಯುಕ್ತರಿಂದ ತನಿಖೆ ಸಂಪೂರ್ಣವಾಗಿ ನಡೆದಲ್ಲಿ ಕಾಂಗ್ರೆಸ್ ನ ಸಂತೋಷ್ ಲಾಡ್, ಎಚ್ಆರ್ ಗವಿಯಪ್ಪ ಮುಂತಾದವರು ಜೈಲಿಗೆ ಹೋಗುವುದು ಶತಸಿದ್ಧ ಎಂದು ಜನಾರ್ದನ ರೆಡ್ಡಿ ಗುಡುಗಿದ್ದಾರೆ.

ಸಂಡೂರುನ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ಜಿಲ್ಲಾ ಬಿಜೆಪಿಯ ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ಸಿಗರಿಗೆ ನನ್ನನ್ನು ಕಂಡರೆ ಭಯ, ಅದಕ್ಕೇ ಅವರು ನನ್ನ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.

ಶಾಸಕ ಸಂತೋಷ್ ಲಾಡ್ ವಂಚನೆ ಪ್ರಕರಣದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಬಂಧನಕ್ಕೆ ಒಳಪಟ್ಟಿದ್ದ. ಈಗ, ಗಣಿ ಹಗರಣದ ತನಿಖೆ ನಡೆದಲ್ಲಿ ಎಲ್ಲಿ ಬಂಧಿತನಾಗುತ್ತೇನೋ ಎಂಬ ಭಯದಿಂದ ಸಿದ್ಧರಾಮಯ್ಯನ ಜೊತೆ ಪಾದಯಾತ್ರೆ ಮಾಡುತ್ತಿದ್ದಾನೆ. ಸಂತೋಷ್ ಲಾಡ್‌ನೇ ಮಹಾ ವಂಚಕ. ಇಂಥವನ ಜೊತೆ ಸಿದ್ಧರಾಮಯ್ಯ ಬರುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ರೆಡ್ಡಿ ಟೀಕಿಸಿದರು.

ಊಟ ತಿಂಡಿಗಾಗಿ ಪಾದಯಾತ್ರೆ : ನಿತ್ಯ ಊಟ, ತಿಂಡಿ ಸಿಗುವ ನೆಪದಲ್ಲಿ ಕಾಂಗ್ರೆಸ್ಸಿಗರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಹಂಗಿಸಿದ ರೆಡ್ಡಿ, 60 ವರ್ಷಗಳ ಕಾಲ ಜಿಲ್ಲೆಯ ಅಭಿವೃದ್ಧಿಯನ್ನು ಮಾಡದ ಕಾಂಗ್ರೆಸ್ಸಿಗರು ನಾವು ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸದೇ ಹೊಟ್ಟೆಕಿಚ್ಚುಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯ ಸ್ವಾಭಿಮಾನಕ್ಕೆ, ಜಿಲ್ಲೆಯ ಜನರ ಗೌರವಕ್ಕೆ ಧಕ್ಕೆ ಉಂಟಾದರೆ ನಾನು ಸಹಿಸುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕಲಿಕ್ಕಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಸುರೇಶ್‌ಬಾಬು, ಎಂ.ಎಸ್. ಸೋಮಲಿಂಗಪ್ಪ, ಬಿ. ನಾಗೇಂದ್ರ, ಮೃತ್ಯುಂಜಯ ಜಿನಗಾ ಮತ್ತಿತರರು ಹಾಜರಿದ್ದರು.

ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಳ್ಳಾರಿಯನ್ನು ತಲುಪುತ್ತಿರುವುದರಿಂದ ಬಳ್ಳಾರಿ ನೆಲ ಮತ್ತಷ್ಟು ಕಾವು ಪಡೆಯುತ್ತಿದೆ. ಈ ನಡುವೆ ಕಪ್ಪಡರಿದ ಮೋಡಗಳು ಕೂಡ ಕಾದ ವಾತಾವರಣವನ್ನು ತಂಪಾಗಿಸಲು ಆಗಾಗ ಮಳೆ ಸುರಿಸುತ್ತಿವೆ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X