ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರಲ್ಲಿ ಸತ್ಯಾತ್ಮತೀರ್ಥರ ಚಾತುರ್ಮಾಸ್ಯ ಸಂಕಲ್ಪ

By Prasad
|
Google Oneindia Kannada News

Sri Satyatma Teertharu, Uttaradhimatha
ಸವಣೂರ, ಆ. 6 : ಶ್ರೀಮದ್ ಉತ್ತರಾಧಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹಾಗೂ ಕಾಣಿಯೂರ ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರು ತಮ್ಮ ದಿವ್ಯ ಚಾತುರ್ಮಾಸ್ಯ ಸಂಕಲ್ಪವನ್ನು ಗುರುವಾರ ವಿದ್ಯುಕ್ತವಾಗಿ ಕೈಗೊಂಡರು.

ಶ್ರೀ ಸತ್ಯಬೋಧತೀರ್ಥರ ಜನ್ಮತ್ರಿಶತಮಾನೋತ್ಸವ ಹಾಗೂ ಶ್ರೀ ಸತ್ಯಧ್ಯಾನತೀರ್ಥರ ಪೀಠಾರೋಹಣದ ಶತಮಾನೋತ್ಸವದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿರುವ ಉಭಯ ಶ್ರೀಗಳ ಚಾತುರ್ಮಾಸ್ಯ ಅಭೂತಪೂರ್ವವಾದ ತ್ರಿವೇಣಿ ಸಂಗವಾಗಿದ್ದು, ಸುವರ್ಣಪುರವಾಗಿದ್ದ ಸವಣೂರಿನ ಗತ ವೈಭವ ಮರುಕಳಿಸಿದೆ.

ಶ್ರೀಸತ್ಯಬೋಧರ ಮೂಲವೃಂದಾವನ ಸನ್ನಿಧಿಯಲ್ಲಿ ತಮ್ಮ 15ನೇ ಚಾತುರ್ಮಾಸ್ಯಕ್ಕೆ ಪಾದಾರ್ಪಣೆ ಮಾಡಿದ ಶ್ರೀ ಸತ್ಯಾತ್ಮತೀರ್ಥರು, ಶ್ರೀದಿಗ್ವಿಜಯ ಮೂಲರಾಮಚಂದ್ರ ದೇವರು ಹಾಗೂ ಸೀತಾದೇವಿಯರ ಅರ್ಚನೆ ಕೈಗೊಂಡರು. ಇದಕ್ಕೂ ಮುನ್ನ ಪ್ರತಿನಿತ್ಯದ ಶ್ರೀ ಸುಧಾಪಾಠ, ಸಹಸ್ರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ, ಶ್ರೀಗಳ ಪಾದಪೂಜೆ, ಪಂಡಿತರಿಂದ ಸರ್ವಮೂಲಪಾಠ, ಧನ್ವಂತರಿ ಹೋಮ, ತೀರ್ಥಪ್ರಸಾದ ವಿತರಣೆ, ಭಜನೆ, ಉಪನ್ಯಾಸ ಕಾರ್ಯಕ್ರಮಗಳು ನೆರವೇರಿದವು.

ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ : ಉಡುಪಿ ಕಾಣಿಯೂರ ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರ 19ನೇ ಚಾತುರ್ಮಾಸ್ಯವೂ ಗುರುವಾರದಿಂದ ಆರಂಭಗೊಂಡಿತು. ಸವಣೂರಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೀಠದ ಆರಾಧ್ಯದೈವವಾದ ಯೋಗಾ ನರಸಿಂಹ ದೇವರ ಮಹಾಪೂಜೆಯೊಂದಿಗೆ ತಮ್ಮ ಚಾತುರ್ಮಾಸ್ಯಕ್ಕೆ ಕಾಣಿಯೂರು ಶ್ರೀಗಳು ಚಾಲನೆ ನೀಡಿದರು. ಎರಡು ಶತಮಾನಗಳ ಬಳಿಕ ಯತಿಗಳ ಚಾತುರ್ಮಾಸ್ಯಕ್ಕೆ ಆತಿಥ್ಯ ನೀಡುತ್ತಿರುವ ಸವಣೂರು, ಏಕಕಾಲಕ್ಕೆ ಉಭಯ ಶ್ರೀಗಳ ಚಾತುರ್ಮಾಸ್ಯದ ಸಡಗರ ಸಂಭ್ರಮವನ್ನು ಪಡೆದುಕೊಂಡಿತು. ಸತತ 51 ದಿನಗಳ ಕಾಲ ಜರುಗಲಿರುವ ಉಭಯ ಶ್ರೀಗಳ ಚಾತುರ್ಮಾಸ್ಯದ ಮೊದಲ ದಿನಕ್ಕೆ ಸಹಸ್ರಾರು ಸದ್ಭಕ್ತರು ಸಾಕ್ಷಿಗಳಾದರು.

ಸವಣೂರಿನ ಶ್ರೀ ಸತ್ಯಬೋಧರ ಸನ್ನಿಧಿಯಲ್ಲಿ ಮಹಾಪೂಜೆಯನ್ನು ಕೈಗೊಂಡ ಶ್ರೀ ಸತ್ಯಾತ್ಮತೀರ್ಥರು, ಅಹೋಬಲ ಲಕ್ಷ್ಮಿನರಸಿಂಹ ದೇವರು ಹಾಗೂ ಸತ್ಯಬೋಧರ ಮೂಲ ವೃಂದಾವನಕ್ಕೆ ಕ್ಷೀರಾಭಿಷೇಕ ಕೈಗೊಂಡರು. ಬಳಿಕ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿದ ಶ್ರೀ ಸತ್ಯಾತ್ಮತೀರ್ಥರು ಕಾಣಿಯೂರ ಮಠದ ಯೋಗಾ ನರಸಿಂಹ ದೇವರ ದರ್ಶನ ಪಡೆದುಕೊಂಡರು.

ಅಮೃತೋಪದೇಶ : ಉತ್ತರಾಧಿಮಠ ಚತುರ್ಮುಖ ಬ್ರಹ್ಮದೇವರ ಪೀಠ ಎಂಬುದನ್ನು ಸಾಕ್ಷೀಕರಿಸುವಂತೆ ವೇದಾಂತ ಸಾಮ್ರಾಜ್ಯವನ್ನು ಆಳಿದ ಶ್ರೀ ಸತ್ಯಬೋಧರು ಮುಖ್ಯಪ್ರಾಣದೇವರ ಬೋಧವನ್ನು, ಶಾಸ್ತ್ರ ಪರಂಪರೆಯನ್ನು ಮುಂದುವರೆಸಿದವರು ಎಂದು ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು. ಸವಣೂರಿನ ಶ್ರೀಮಠದಲ್ಲಿ ರಚಿಸಲಾಗಿರುವ ಶ್ರೀಸತ್ಯಬೋಧ ಮಂಟಪದಲ್ಲಿ ಪ್ರಥಮ ಅಮೃತೋಪದೇಶ ನೀಡಿದ ಶ್ರೀಗಳು, ಚಾತುರ್ಮಾಸ್ಯದ ಪ್ರಯುಕ್ತ ಕೈಗೊಳ್ಳಲಾದ ಶೋಭಾಯಾತ್ರೆ ಸೇರಿದಂತೆ ಎಲ್ಲ ವೈಭವಗಳನ್ನೂ ಶ್ರೀಹರಿಗೆ ಸಮರ್ಪಿಸಿ, ತಮ್ಮ ಗುರುಗಳ ಸ್ಮರಣೆ ಕೈಗೊಂಡರು.

ಗ್ಯಾಲರಿ : ಸವಣೂರಿನಲ್ಲಿ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X