ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಕ್ಕಿಗಳೀಗ ಕೊಡಗಿನ ಅತಿಥಿ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Heron Birds in Kodagu
ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಳೆ, ಗಾಳಿಯನ್ನು ಸಹಿಸದ ಕೆಲವು ಹಕ್ಕಿಗಳು ದೂರದ ಸುರಕ್ಷಿತ ತಾಣವನ್ನು ಅರಸುತ್ತಾ ವಲಸೆ ಹೋಗುವುದು ಹಿಂದಿನಿಂದಲೂ ನಡೆದು ಬಂದ ಪ್ರಕೃತಿ ನಿಯಮ. ಆದರೆ ಕಳೆದ ಕೆಲವು ವರ್ಷಗಳಿಂದ ಸ್ವಲ್ಪ ಬದಲಾವಣೆ ಕಂಡು ಬರುತ್ತಿದೆ. ಇಲ್ಲಿ ಮೊದಲಿನಂತೆ ಮಳೆ ಬರುತ್ತಿಲ್ಲ ಹೀಗಾಗಿ ಕೆಲವು ಹಕ್ಕಿಗಳು ಇಲ್ಲಿಯೇ ಉಳಿಯುತ್ತಿವೆ.

ಇದೆಲ್ಲಕ್ಕಿಂತ ವಿಶೇಷವೆನೆಂದರೆ ಪ್ರತಿವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಲ್ಲಿಗೆ ಬೆಳ್ಳಕ್ಕಿಗಳು ಅತಿಥಿಗಳಾಗಿ ಬರುತ್ತಿವೆ. ಹೀಗೆ ಬರುವ ಬೆಳ್ಳಕ್ಕಿಗಳು ಎಲ್ಲೆಂದರಲ್ಲಿ ಬೀಡು ಬಿಡದೆ ಸುರಕ್ಷಿತ ಸ್ಥಳವನ್ನು ಆಯ್ದು ಹೆಮ್ಮರಗಳ ಮೇಲೆ ಗೂಡು ಕಟ್ಟಿ ಮರಿ ಮಾಡಿ ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ಹಿಂತಿರುಗುತ್ತಿವೆ.
ಕೊಡಗಿಗೆ ಬರುವ ಬೆಳ್ಳಕ್ಕಿಗಳಿಗೆ ಪ್ರತಿ ವರ್ಷವೂ ಆಶ್ರಯ ನೀಡುವ ತಾಣಗಳೆಂದರೆ ನಾಪೋಕ್ಲು ಹಾಗೂ ಮೂರ್ನಾಡು.

ಈ ಪಟ್ಟಣಗಳ ನಡುವೆ ಇರುವ ಹೆಮ್ಮರಗಳಲ್ಲಿ ಗುಂಪು ಗುಂಪಾಗಿ ಬೀಡು ಬಿಡುವ ಬೆಳ್ಳಕ್ಕಿಗಳು ಪಟ್ಟಣದ ಜನಜಂಗಳಿಯ ನಡುವೆ ತಮ್ಮ ಕಲರವ ಸದ್ದಿನೊಂದಿಗೆ ಗಮನಸೆಳೆಯುವುದರೊಂದಿಗೆ ನೀಲಾಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ ಗೂಡುಕಟ್ಟುವುದರಲ್ಲಿ, ಮೊಟ್ಟೆಯಿಟ್ಟು, ಮರಿಮಾಡುವುದರಲ್ಲಿ ನಿರತರಾಗಿರುವ ದೃಶ್ಯ ಕಂಡುಬರುತ್ತದೆ. ಹಸಿರ ಹೆಮ್ಮರಗಳಲ್ಲಿ ಬೀಡುಬಿಟ್ಟ ಬೆಳ್ಳಕ್ಕಿಗಳನ್ನು ದೂರದಿಂದ ನೋಡಿದರೆ ಮಂಡ್ಯದ ಕೊಕ್ಕರೆ ಬೆಳ್ಳೂರು ನೆನಪಾಗುತ್ತದೆ.

ಮೊದಲಿಗೆ ಬೆಳ್ಳಕ್ಕಿಗಳು ನಾಪೋಕ್ಲಿನ ಹೆಮ್ಮರಗಳಲ್ಲಿ ಕಂಡು ಬಂದಿದ್ದವು. ಕೆಲವೇ ಕೆಲವು ಬಂದಿದ್ದ ಬೆಳ್ಳಕ್ಕಿಗಳು ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ಹಿಂತಿರುಗಿದ್ದವು. ಇಲ್ಲಿ ಆಹಾರದ ಸಮಸ್ಯೆ, ಜನರಿಂದ ಕಿರುಕುಳ ಇಲ್ಲದ್ದರಿಂದ ಮುಂದಿನ ವರ್ಷಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯೂ ಹೆಚ್ಚಾಯಿತು. ಆ ನಂತರ ನಾಪೋಕ್ಲು ಮಾತ್ರವಲ್ಲದೆ, ಮೂರ್ನಾಡು ಮಡಿಕೇರಿ ರಸ್ತೆಯಲ್ಲಿರುವ ಹಾಕತ್ತೂರಿನ ಹೆಮ್ಮರಗಳಲ್ಲಿ ಬೀಡುಬಿಡತೊಡಗಿದವು. ಕೆಲವು ವರ್ಷಗಳ ಕಾಲ ಇಲ್ಲಿ ಬೆಳ್ಳಕ್ಕಿಗಳ ಕಲರವ ಕೇಳಿಸುತ್ತಿತ್ತಾದರೂ ಇಲ್ಲಿದ್ದ ಮರಗಳನ್ನು ಕಡಿದಿದ್ದರಿಂದ ಮೂರ್ನಾಡಿಗೆ ತಮ್ಮ ವಾಸ್ತವ್ಯ ಬದಲಿಸಿದ ಬೆಳ್ಳಕ್ಕಿಗಳು ಇದೀಗ ಖಾಯಂ ಮಾಡಿಕೊಂಡಿವೆ.

ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಂದರೆ ಮೇ-ಜೂನ್ ತಿಂಗಳಲ್ಲಿ ಹಿಂಡು ಹಿಂಡಾಗಿ ಬರುವ ಬೆಳ್ಳಕ್ಕಿಗಳು ನಾಪೋಕ್ಲು ಹಾಗೂ ಮೂರ್ನಾಡು ಪಟ್ಟಣದ ಹೆಮ್ಮರಗಳಲ್ಲಿ ಬೀಡುಬಿಡುತ್ತವೆ. ಆ ನಂತರ ಸುತ್ತಮುತ್ತಲಿನ ಕಾಫಿ, ಏಲಕ್ಕಿ ತೋಟಗಳಿಂದ ಕಡ್ಡಿಕಸಗಳನ್ನು ಹೆಕ್ಕಿ ತಂದು ಮರಗಳಲ್ಲಿ ಗೂಡುಕಟ್ಟುವುದರಲ್ಲಿ ನಿರತವಾಗುತ್ತವೆ.

ಬಳಿಕ ಮೊಟ್ಟೆಯಿಡುವ ಸಂಭ್ರಮ. ಈ ಸಂದರ್ಭ ಹೆಣ್ಣುಹಕ್ಕಿಗಳು ಮರಗಳಲ್ಲಿಯೇ ಉಳಿದು ಮೊಟ್ಟೆಯಿಡುವುದರಲ್ಲಿ, ಕಾವು ಕೊಡುವುದರಲ್ಲಿ ನಿರತರಾದರೆ, ಗಂಡು ಬೆಳ್ಳಕ್ಕಿಗಳು ದೂರದ ಗದ್ದೆ ಬಯಲಿನಿಂದ ಅಡ್ಡಾಡಿ ಹುಳಹುಪ್ಪಟೆಗಳನ್ನು ತರುತ್ತವೆ. ಮೊಟ್ಟೆಯಿಟ್ಟು ಮರಿ ಮಾಡಿದ ನಂತರ ಮರಿಗಳಿಗೆ ಗುಟುಕು ನೀಡುವ ಕೆಲಸ ತಾಯಿಬೆಳ್ಳಕ್ಕಿಯದು.

ಅಲ್ಲಿ, ಇಲ್ಲಿ ಸುತ್ತಾಡಿ ಆಹಾರವನ್ನು ತಂದು ಮರಿ ಹಕ್ಕಿಗಳಿಗೆ ಗುಟುಕು ನೀಡುವ ದೃಶ್ಯ ಮನಮೋಹಕವಾಗಿರುತ್ತದೆ. ಮೂರ್ನಾಡು ಸುತ್ತಮುತ್ತ ಗದ್ದೆ ಬಯಲುಗಳಿರುವುದರಿಂದ ಉಳುಮೆ ಮಾಡಿದಾಗ ಗದ್ದೆಗಳಲ್ಲಿ ಹುಳಹುಪ್ಪಟೆಗಳು ಹೇರಳವಾಗಿ ಸಿಗುತ್ತವೆ. ಮರಿಗಳು ಬೆಳೆದು ರೆಕ್ಕೆಪುಕ್ಕ ಹುಟ್ಟುತ್ತಿದ್ದಂತೆಯೇ ಹಾರಾಟ ಕಲಿಸುತ್ತವೆ. ಈ ಸಂದರ್ಭ ಹಕ್ಕಿಗಳ ಚೀರಾಟ... ಹಾರಾಟ... ಮುಗಿಲು ಮುಟ್ಟುತ್ತದೆ. ಜನರ ಸದ್ದಿಗೆ, ವಾಹನಗಳ ಓಡಾಟಕ್ಕೆ ಇವು ಕ್ಯಾರೆ ಎನ್ನದೆ ತಮ್ಮ ಕಾರ್ಯಗಳಲ್ಲಿ ನಿರತವಾಗಿ ಬಿಡುತ್ತವೆ. ನವೆಂಬರ್ ತಿಂಗಳ ವೇಳೆಗೆ ತಮ್ಮ ಮರಿಗಳೊಂದಿಗೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ. ಮತ್ತೆ ಇವುಗಳನ್ನು ನೋಡಬೇಕಾದರೆ ಮುಂದಿನ ಮಳೆಗಾಲವೇ ಬರಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X