ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಜಿಲ್ಲೆ ಕ್ರೈಂ ತ್ರೈಮಾಸಿಕ ವರದಿ

By Mahesh
|
Google Oneindia Kannada News

SP Murugan
ಶಿವಮೊಗ್ಗ,ಜು.30: ಜಿಲ್ಲೆಯಲ್ಲಿ 2010ನೇ ಸಾಲಿನ 2ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 160 ಕಳವು ಪ್ರಕರಣ ದಾಖಲಾಗಿದ್ದು, ಅದರಲ್ಲಿ 63 ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 36,97,440 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಈವರೆಗಿನ ಪತ್ತೆ ಕಾರ್ಯ ತೃಪ್ತಿಕರವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್ ತಿಳಿಸಿದರು.

೨ನೇ ತ್ರೈಮಾಸಿಕ ಅವಧಿಯಲ್ಲಿ 72,89,334 ರೂ. ಮೌಲ್ಯದ ಮಾಲು ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಅದರಲ್ಲಿ ಈವರೆಗೆ 36,97,440 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದು, ಶೇ.50ಕ್ಕಿಂತ ಹೆಚ್ಚಿನ ಮೌಲ್ಯದ ಕಳುವಾದ ಸ್ವತ್ತನ್ನು ವಶಪಡಿಸಿ ಕೊಳ್ಳಲಾಗಿದೆ ಎಂದರು.

ಇಲ್ಲಿಯವರೆಗೂ ಒಟ್ಟು 44 ವಾರಸುದಾರರಿಗೆ ಪತ್ತೆಯಾದ ಮಾಲನ್ನು ಹಿಂದಿರುಗಿಸಲಾಗಿದೆ. ಇದರ ಒಟ್ಟು ಮೌಲ್ಯ 33,53,009 ರೂ.ಗಳಾಗಿದ್ದು, ಮೌಲ್ಯವಿರುವ ಸ್ವತ್ತಗಳಲ್ಲಿ ಶೇ.99ರಷ್ಟು ಸ್ವತ್ತನ್ನು ಮಾಲೀಕರಿಗೆ ಹಿಂದಿರುಗಿಸುವುದಾಗಿ ಮಾಹಿತಿ ನೀಡಿದರು.

ಹಾಗೆಯೇ ಜಿಲ್ಲೆಯಲ್ಲಿ 2010ನೇ ಸಾಲಿನ 2ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 1,706 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 1,569 ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಇಲ್ಲಿಯವರೆಗೂ ಪತ್ತೆ ಕಾರ್ಯ ತೃಪ್ತಿಕರವಾಗಿದೆ ಎಂದರು.

2010ನೇ ಸಾಲಿನ ಅಧಿಕಾರಿಗಳು ಸೇರಿದಂತೆ ಒಟ್ಟು169 ಸಿಬ್ಬಂದಿಗಳಿಗೆ ಒಟ್ಟು 20,650 ರೂ. ಬಹುಮಾನ ವನ್ನು ನೀಡಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇದುವವರೆಗೂ ತೃಪ್ತಿಕರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ನಕ್ಸಲ್ ಸಮಸ್ಯೆ ಕುಂಠಿತ: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸಾಕಷ್ಟು ಕುಂಠಿತಗೊಂಡಿದೆ. ಆದರೂ ಸಹ ಪೊಲೀಸರು ನಕ್ಸಲರ ವಿರುದ್ಧ ತಮ್ಮ ಕಾರ್ಯ ಮುಂದುವರೆಸುತ್ತಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಹೊಸ ಟ್ರಾಫಿಕ್ ಠಾಣೆ: ಟ್ರಾಫಿಕ್ ಪೊಲೀಸರ ಸಮಸ್ಯೆ ಇದ್ದು, ಹೀಗಾಗಿ ಹೊಸ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಈಗಿರುವ ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ಪೊಲೀಸ್ ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸಲಾಗಿದ್ದು, ಇದರ ಸದುಪಯೋಗವನ್ನು ಸಿಬ್ಬಂದಿಗಳು ಪಡೆಯಬೇಕು.

ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವರ್ಷಕ್ಕೆ ರು.30,000ವರೆಗೆ ಸಾಲ ನೀಡಲಾಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆ, ಇನ್ನೂ ಮುಂತಾದ ಸಮಸ್ಯೆಗಳಿಗೆ ಸೊಸೈಟಿಯಿಂದ ಸಾಲ ಪಡೆಯಬಹುದಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಎಂ.ವಿ.ಪಾವಿನ್ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X