ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಸಾಬೀತಾದರೆ ಜನರೆದುರೇ ನೇಣು!

By * ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಜು. 29 : ಕೇಶಮುಂಡನ ಮಾಡಿಕೊಂಡು ಕಪ್ಪು ಬಟ್ಟೆ ಧರಿಸಿ ವರಮಹಾಲಕ್ಷ್ಮಿ ಪೂಜಾದಿನದವರೆಗೆ ಕಾಳುಕಡಿಗಳನ್ನಷ್ಟೇ ತಿನ್ನುವ ವ್ರತ ತೊಟ್ಟಿರುವ ಶ್ರೀರಾಮುಲು ಅವರ ಸ್ವಾಭಿಮಾನಿ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಯಾತ್ರೆಯ ಎರಡನೇ ದಿನ ಚೆಳ್ಳಗುರ್ಕಿ ಗ್ರಾಮದ ಆರಾಧ್ಯದೈವ ಶ್ರೀ ಎರ್ರಿತಾತನವರ ಜೀವಸಮಾಧಿ ಕ್ಷೇತ್ರದ ಮುಂಭಾಗದಲ್ಲಿ ಅವರು ಎರಡು ಸಾವಿರ ಅಭಿಮಾನಿಗಳೆದಿರು ಶ್ರೀರಾಮುಲು, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ನಮ್ಮನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರು ತಾಕತ್ತಿದ್ದರೆ ಅಕ್ರಮ ಗಣಿಗಾರಿಕೆಯ ದಾಖಲಾತಿಗಳನ್ನು ಹೊತ್ತು ಬಳ್ಳಾರಿಗೆ ಬರಲಿ. ಅಕ್ರಮ ಗಣಿಗಾರಿಕೆ ನಡೆಸಿದ್ದು ಸಾಬೀತಾದಲ್ಲಿ ಜನರೆದುರಿಗೇ ನೇಣು ಹಾಕಿಕೊಳ್ಳುತ್ತೇನೆ ಎಂದು ಗುಡುಗಿರುವ ಜಿ ಜನಾರ್ದನ ರೆಡ್ಡಿ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಜರಿದಿದರು.

ಏಕವಚನ ಪ್ರಯೋಗ : "ನಮ್ಮ ವಿರುದ್ಧ ಸಿದ್ಧರಾಮಯ್ಯ, ದೇವೇಗೌಡರಂಥಹ ನೂರಾರು ಜನರು ಬಂದರೂ ಕೂಡ ನಮ್ಮನ್ನು ಏನೇನೂಮಾಡಿಕೊಳ್ಳಲು ಸಾಧ್ಯವಿಲ್ಲ. ಸಿದ್ಧರಾಮಯ್ಯಾ ನಿನ್ನ 60 ವರ್ಷ ವಯಸ್ಸಿನಲ್ಲಿ 30 ವರ್ಷ ರಾಜಕೀಯ ಅನುಭವ ಹೊಂದಿದ್ದೀಯ. ಇನ್ನು ನೀನೇ ತೋಳ್ತಟ್ಟಿದಲ್ಲಿ 27 ವರ್ಷದ ಸುರೇಶ್‌ಬಾಬು ಉದ್ವೇಗಕ್ಕೆ ಒಳಗಾಗುವುದರಲ್ಲಿ ತಪ್ಪಿಲ್ಲ" ಎಂದು ಜನಾರ್ದನ ರೆಡ್ಡಿ ಸಿದ್ದರಾಮಯ್ಯನವರನ್ನು ಮೂದಲಿಸಿದರು.

ಜಿಲ್ಲೆಯಲ್ಲಿ ರೆಡ್ಡಿ ಸಹೋದರರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗನ್ನು ನೋಡಿ ಕಾಂಗ್ರೆಸ್ ನಾಯಕರೇ ನೇಣು ಹಾಕಿಕೊಳ್ಳಬೇಕು. ಜಿಲ್ಲೆಯ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಲ ಪದಗಳನ್ನು ಬಳಕೆ ಮಾಡಿದ್ದಾರೆ. ಬಳ್ಳಾರಿ ಜನರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್‌ನ ಈ ವರ್ತನೆಯಿಂದ ಬೇಸತ್ತ ಶ್ರೀರಾಮುಲು ಕಠಿಣವ್ರತವನ್ನು ಪಾಲಿಸುತ್ತಿದ್ದಾರೆ. ನಾವು ಜನಪರರು, ಅಪರಂಜಿಗಳು ಎಂದು ಹೇಳಿದರು.

ಸಿಬಿಐ ಕಾಂಗ್ರೆಸ್ ಏಜೆಂಟ್ : ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ನಮ್ಮನ್ನು ಹಾಳುಮಾಡಲಿಕ್ಕಾಗಿಯೇ ಕಾಂಗ್ರೆಸ್ ಸಾಕಷ್ಟು ಹುನ್ನಾರ ನಡೆಸುತ್ತಿದೆ. ನಮ್ಮನ್ನು ದಿವಾಳಿ ಎಬ್ಬಿಸಲಿಕ್ಕಾಗಿ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್' ತನಿಖೆ ಆಗಬೇಕು ಎಂದು ಕಾಂಗ್ರೆಸ್ಸಿಗರು ಪಟ್ಟುಹಿಡಿದಿದ್ದಾರೆ. ಸಿಬಿಐ ಎಂಬ ತನಿಖಾ ಸಂಸ್ಥೆ ಕೇಂದ್ರದಲ್ಲಿ ಅಧಿಕಾರಕ್ಕೆ ಇರುವ ಪಕ್ಷಗಳ ಏಜೆಂಟರಂತೆ ಕಾರ್ಯನಿರ್ವಹಿಸುತ್ತದೆ. ಈ ದೇಶದ ಜನರು ಬ್ರಿಟೀಷರ ವಿರುದ್ಧ ಹೋರಾಡಿದಂತೆ ನಾನು ಕಾಂಗ್ರೆಸ್ ವಿರುದ್ಧ ಹೋರಾಡುತ್ತೇನೆ ಎಂದರು.

ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರ ಮೇಲೆ ಮತ್ತೊಮ್ಮೆ ಟೀಕಾಪ್ರಹಾರ ಮುಂದುವರೆಸಿದ ಬಿ. ಶ್ರೀರಾಮುಲು, ರಾಜ್ಯಪಾಲರು ಕಾಂಗ್ರೆಸ್‌ನ ಏಜೆಂಟರು. ಅವರು ತಮ್ಮ ಕಾನೂನಿನ ವ್ಯಾಪ್ತಿ - ಮಿತಿಯನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟ ಇಲ್ಲಿಗೇ ಮುಗಿಯುವುದಿಲ್ಲ. ಇದು ಆರಂಭ ಅಷ್ಟೇ ಎಂದು ಹೇಳಿದರು. ಶುಕ್ರವಾರ ಸಿರುಗುಪ್ಪ ಮತ್ತು ತೆಕ್ಕಲಕೋಟೆಯಲ್ಲಿ ಬಹಿರಂಗ ಸಭೆ ನಡೆಯಲಿವೆ.

ಅಭಿಮಾನಿಗಳೂ ಬೋಳು ಬೋಳು : ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಜಿಲ್ಲೆಯಾದ್ಯಂತ ಪಾದಯಾತ್ರೆ ಮಾಡುತ್ತಿರುವ ರೆಡ್ಡಿ ಸಹೋದರರು ಜನರ ಬೆಂಬಲ ಪಡೆಯಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ನಾಯಕ ನಿಷ್ಠೆ ತೋರಿರುವ ಶ್ರೀರಾಮುಲು ಹಿಂಬಾಲಕರು ಕೂಡ ಶ್ರೀರಾಮುಲುವಂತೆ ಕೇಶಮುಂಡನ ಮಾಡಿಕೊಂಡು, ಕಪ್ಪು ಬಟ್ಟೆ ಧರಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಶ್ರೀರಾಮುಲುಗೆ ಹೋದಲ್ಲೆಲ್ಲ ಹೆಂಗಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಕಬ್ಬಿಣ ಅದಿರು ರಫ್ತಿಗೆ ನಿಷೇಧ : ಕರ್ನಾಟಕದ ಬಂದರುಗಳಿಂದ ಕಬ್ಬಿಣ ಅದಿರು ರಫ್ತು ಮಾಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಇರುವುದು ಇದೊಂದೇ ಮಾರ್ಗ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಕೈಗೊಂಡಿರುವ ಈ ದಿಟ್ಟ ಕ್ರಮ ರೆಡ್ಡಿ ಸಹೋದರರಿಗೆ ಇರುಸು ಮುರುಸು ಮಾಡುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಪಾದಯಾತ್ರೆಯ ಪ್ರಹಸನ ಕಾಂಗ್ರೆಸ್ ಮತ್ತು ರೆಡ್ಡಿ ಸಹೋದರರ ನಡುವಿನ ಕದನ ಎಂಬಂತೆ ಕಂಡರೂ, ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪನವರ ನಡುವಿನ ವೈಮನಸ್ಸು ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X