ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಕ್ಯಾರಟ್ ಚಿನ್ನದ ಅಪ್ಪಟ ವಚನ ಭ್ರಷ್ಟತೆ

By Mrutyunjaya Kalmat
|
Google Oneindia Kannada News

Karunakara reddy
ಬೆಂಗಳೂರು, ಜು. 24 : ನೆರೆ ಸಂತ್ರಸ್ಥರಿಗೆ ಗಣಿ ಮಾಲೀಕರು ಸೇರಿ 50 ಸಾವಿರ ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದ ಬಳ್ಳಾರಿಯ ತ್ರಿವಳಿ ಸಚಿವರು ಇದೀಗ ಮಾತು ಬದಲಿಸಿದ್ದಾರೆ. ನಾವು ಮನೆ ಕಟ್ಟಿಸಿಕೊಡುತ್ತೇವೆ ಎಂದು ಎಲ್ಲೆಯೂ ಹೇಳಿಲ್ಲ ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಹೇಳುವ ಮೂಲಕ ಸಂತ್ರಸ್ಥರಿಗೆ ಆಕಾಶ ತೋರಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ನಾವು ಸಿದ್ಧ. ಆದರೆ, ಮನೆಯ ಯಜಮಾನ ಬಳ್ಳಾರಿಯ ಸಚಿವರಿಗೆ ಒಳ್ಳೆಯ ಹೆಸರು ಬಂದು ಬಿಡುತ್ತದೆ ಎಂಬ ಭಯದಿಂದ ನಮ್ಮ ಜನಪರ ಕೆಲಸಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ಬಿಜೆಪಿ ಸರಕಾರದ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಸಚಿವ ಜನಾರ್ದನರೆಡ್ಡಿ ಪಟ್ಟು ಹಿಡಿದಿದ್ದು ಎಲ್ಲರಿಗೂ ಗೊತ್ತಿದೆ.

ನೆರೆಸಂತ್ರಸ್ಥರಿಗೆ ಮುಖ್ಯಮಂತ್ರಿ ಸಾರ್ವಜನಿಕವಾಗಿ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಆಗ ಇದೇ ಜನಾರ್ದನರೆಡ್ಡಿ, ಮನೆ ಯಜಮಾನ ಜನರ ಸೇವೆ ಮಾಡುವ ಬದಲು, ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ಯಡಿಯೂರಪ್ಪ ಅವರ ವಿರುದ್ಧವಾಗಿ ಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಡಲು ಚಾಲನೆ ನೀಡಿದ್ದರು. ಬಳ್ಳಾರಿ ಜಿಲ್ಲೆಯ ಸಿರಗುಪ್ಪಿ ತಾಲ್ಲೂಕಿನ ಗ್ರಾಮಗಳು ಮತ್ತು ಗದಗ ಜಿಲ್ಲೆಯ ಯಾಸ ಹಡಗಲಿ, ಮಾಳವಾಡ ಗ್ರಾಮಗಳಲ್ಲಿ ಕಂದಾಯ ಸಚಿವ ಕರಣಾಕರರೆಡ್ಡಿ ಕಾಮಗಾರಿ ಚಾಲನೆ ನೀಡಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ಭಸ್ಮಾಸುರ ಎಂದು ಕಿಡಿಕಾರಿದ್ದ ಸಚಿವ ಕರುಣಾಕರರೆಡ್ಡಿ, ಇವರಿಂದ ರಾಜ್ಯದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಹೀಗಾಗಿ ಅವರ ನಾಯಕತ್ವ ನಮಗೆ ಬೇಕಿಲ್ಲ ಎಂದಿದ್ದರು. ಮುಖ್ಯಮಂತ್ರಿಗಳಿಗೆ ರಾಜ್ಯ ಏಳ್ಗೆಗಿಂತ ಪದವಿಯೇ ಮುಖ್ಯವಾಗಿದೆ. ಪ್ರಸ್ತುತ ರಾಜಕೀಯದಿಂದ ಬೇಸತ್ತಿರುವ ನಾನು ಮಂತ್ರಿಗಿರಿಗೆ ರಾಜೀನಾಮೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆದರಿಕೆ ಹಾಕಿದ್ದು ಕೂಡಾ ಮನೆ ಕಟ್ಟಿಸಿಕೊಡುವ ವಿಚಾರದಲ್ಲಿಯೇ.

ನಂತರ ಬಿಜೆಪಿ ಹೈಕಮಾಂಡ್ ರಂಗಪ್ರವೇಶ, ತಾಯಿ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಲ್ಲಿ ರೆಡ್ಡಿಗಳ ಕೃಪಾಪೋಷಿತ ದೊಂಬರಾಟಕ್ಕೆ ತೆರೆಬಿದ್ದಿತು. ಬಳ್ಳಾರಿ ಸಚಿವರು ಇಟ್ಟಿದ್ದ ಬೇಡಿಕೆಗಳಲ್ಲವೂ ಈಡೇರಿದವು. ಶೋಭಕ್ಕನನ್ನು ಮನೆಗೆ ಕಳುಹಿಸಿದ್ದು ಆಯಿತು, ಕೋರ್ ಕಮೀಟಿಯಲ್ಲಿ ಸ್ಥಾನ, ವರ್ಗಾವಣೆಗೊಂಡಿದ್ದ ಅಧಿಕಾರಿಗಳು ಮೊದಲಿದ್ದ ಪೀಠವನ್ನು ಅಲಂಕರಿಸಿದ್ದು ಆಯಿತು. ನಮ್ಮ ಬೇಡಿಕೆ ಈಡೇರಿದ ಮೇಲೆ ನೆರೆಸಂತ್ರಸ್ಥರ ಮನೆ ಕಟ್ಟಿಸಿಕೊಡುವ ಗೊಡೆವೆಯಾದರು ನಮಗ್ಯಾಕೆ ಎಂದು ರೆಡ್ಡಿಗಳು ಅದನ್ನು ಕೈಬಿಟ್ಟರು.

ಇತ್ತೀಚೆಗೆ ನೆರೆಸಂತ್ರಸ್ಥರ ಸಂಕಷ್ಟಗಳ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿವೆ. ಸಂತ್ರಸ್ಥರಿಗೆ ಆಸರೆ ಕೊಡುತ್ತೇವೆ ಎಂದು ಸರಕಾರ ರಚಿಸಿರುವ ವಿಫಲವಾಗಿರುವುದು ಗೊತ್ತಿರುವ ಸಂಗತಿ. ಸಾರ್ವಜನಿಕರ ಹಣ ಪೋಲು ಆಗಿರುವ ವರದಿಗಳು ಮಾಧ್ಯಮಗಳು ಬಿತ್ತರಿಸುತ್ತಿವೆ. ನೆರೆ ಬಂದ ಸಮಯದಲ್ಲಿ ಪಾಪ ಎಂದು ಮನೆ ಕಟ್ಟಿಸಿಕೊಡುತ್ತೇವೆ ಎಂದು ಅನೇಕರು ಮುಂದೆ ಬಂದರು, ಬಂದವರಲ್ಲಿ ಕೆಲವರು ಸಾಮರ್ಥ್ಯಕ್ಕೆ ತಕ್ಕಷ್ಟು ಹಣ ನೀಡಿ ನುಣುಚಿಕೊಂಡರು. ಇನ್ನೂ ಕೆಲವರ ಭರವಸೆ ಹಾಗೆ ಉಳಿದಿದೆ ರೆಡ್ಡಿಗಳ ಭರವಸೆಯಂತೆ.

ಕಂದಾಯ ಸಚಿವರೂ ಆಗಿರುವ ಗಣಿಧಣಿ ಕರುಣಾಕರರೆಡ್ಡಿ, ಶೀಘ್ರದಲ್ಲೇ ನೆರೆಸಂತ್ರಸ್ಥರಿಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಈ ಮಧ್ಯೆ,
ರೆಡ್ಡಿ ಸಹೋದರರೂ ಕೂಡಾ ಸಂತ್ರಸ್ಥರಿಗೆ 50,000 ಮನೆಗಳನ್ನು ಕಟ್ಟಿಸಿಕೊಡುತ್ತೇವೆ ಎಂದಿದ್ದರು. ಅದು ಎಲ್ಲಿಗೆ ಬಂದಿತು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರೆ, ಯಾರೂ ಹೇಳಿದ್ದು ನಿಮಗೆ, ರೆಡ್ಡಿ ಸಹೋದರರು ಮನೆ ಕಟ್ಟಿಸಿಕೊಡುತ್ತೇವೆ ಅಂತ. ನಾವು ಎಂದೂ ಹಾಗೆ ಹೇಳಿಲ್ಲ ಎಂದಿದ್ದಾರೆ.

ಜನಾರ್ದನರೆಡ್ಡಿ ಹೇಳಿದ್ದರೆ, ಅವರನ್ನೇ ಕೇಳಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿಲ್ಲ ಎಂದು ಮುಖ ಗಂಟಿಕ್ಕಿಕೊಂಡು ಹೋಗಿದ್ದಾರೆ. ಮನೆ ಕಟ್ಟಿಸಿಕೊಡುತ್ತೇವೆ ಎಂದು ರೆಡ್ಡಿಗಳು ಸಂತ್ರಸ್ಥರಿಗೆ ಆಕಾಶ ತೋರಿಸಿರುವುದು ಎಷ್ಟು ಸರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X