ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಮೀಟರ್ ದರ ಏರಿಕೆ ಬಹುತೇಕ ಖಚಿತ?

By Mahesh
|
Google Oneindia Kannada News

ಬೆಂಗಳೂರು, ಜು. 21: ಈ ಶುಕ್ರವಾರದಿಂದ ಆಟೋ ಕನಿಷ್ಠ ಪ್ರಯಾಣ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಬೆಲೆ ಏರಿಕೆಗೆ ಒತ್ತಾಯಿಸಿ ಆಟೋರಿಕ್ಷಾ ಸಂಘಗಳು ಮನವಿಯನ್ನು ನಗರ ಜಿಲ್ಲಾಧಿಕಾರಿ ಎಂಕೆ ಆಯ್ಯಪ್ಪ ಪುರಸ್ಕರಿಸಿದ್ದಾರೆ.

ಪ್ರಯಾಣಿಕರು ಪ್ರಸ್ತುತ ಕನಿಷ್ಠ ದರ ರು.14 ರ ಬದಲಿಗೆ 18 ರು. ಕೊಟ್ಟು ಸುತ್ತಾಡಬೇಕು. ಪೆಟ್ರೋಲ್ ಬೆಲೆ ಏರಿಕೆ, ಐದು ವರ್ಷಗಳಿಂದ ಕನಿಷ್ಠ ಪ್ರಯಾಣದರ ಏರಿಕೆಯಾಗದಿರುವುದರಿಂದ ಆಟೋರಿಕ್ಷಾ ಸಂಘಗಳ ಮನವಿಗೆ ಸಾರಿಗೆ ಸಚಿವ ಆರ್ ಅಶೋಕ್ ಕೂಡ ಸಮ್ಮತಿಸುವ ಸಾಧ್ಯತೆಯಿದೆ.

ಬೆಂಗಳೂರಿನ ಪ್ರಮುಖ ಆಟೋ ಸಂಘಟನೆಗಳಾದ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ, ಬಿಜೆಪಿ ಆಟೋ ಸಂಘ ಮುಂತಾದ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂಕೆ ಆಯ್ಯಪ್ಪ ಅವರನ್ನು ಜೂನ್ ತಿಂಗಳ ಕೊನೆವಾರದಲ್ಲಿ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದರು.

ಕಳೆದ ಐದಾರು ವರ್ಷಗಳಲ್ಲಿ ಬಿಎಂಟಿಸಿ, ಕೆಎಸ್ಆರ್‍ ಟಿಸಿ ಸಂಸ್ಥೆಗಳು ಪ್ರಯಾಣ ದರವನ್ನು ಹಲವು ಬಾರಿ ಏರಿಸಿವೆ. ಆದರೆ, ಆಟೋ ಪ್ರಯಾಣ ದರ ಏರಿಕೆ ಕಂಡಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಕನಿಷ್ಠ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಆದರ್ಶ ಆಟೋ ಸಂಘ ಹೇಳಿದೆ.

* ಹಳೆ ದರ : ಕನಿಷ್ಠ ದರ ರು.14(ಪ್ರತಿ 2 ಕಿ.ಮೀಗೆ) ನಂತರ ಪ್ರತಿ ಕಿ.ಮೀ.ಗೆ ರು.7.
* ಹೊಸ ದರ : ರು. 18 ಅಥವಾ 20 (ಪ್ರತಿ 2 ಕಿ.ಮೀಗೆ) ನಂತರ ಪ್ರತಿ ಕಿ.ಮೀ.ಗೆ ರು.10.

ಬೆಂಗಳೂರು ನಗರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಆಟೋದರ ಹೆಚ್ಚಳ ಮಾಡುವ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಬಹುಶಃ ಈ ಬಗ್ಗೆ ಶುಕ್ರವಾರದಂದು ಅಧಿಕೃತವಾಗಿ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಈ ನಡುವೆ ಆಟೋರಿಕ್ಷಾಗೆ ಬದಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಯೋಜಿಸಿದ್ದು, ಸಿಟಿ ಟ್ಯಾಕ್ಸಿಗಳ ರೂಪದಲ್ಲಿ ನ್ಯಾನೋ ಕಾರುಗಳನ್ನು ಬಳಸಲು ನಿರ್ಧರಿಸಲಾಗಿದೆ. ಈ ಯೋಜನೆ ಇನ್ನೂ ಸಾರಿಗೆ ಸಚಿವ ಮೇಜಿನ ಕಡತದಲ್ಲೇ ಇದೆ. ನಾಳೆ ಆಟೋ ಸಂಘಟನೆಗಳ ಜೊತೆ ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಸಭೆ ನಡೆಸಿ ನಂತರ ನಿರ್ಧಾರ ಪ್ರಕಟಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X