ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಜನಾಪುರ ಡ್ಯಾಂ ಅಭಿವೃದ್ಧಿಗೆ 5 ಕೋಟಿ

By Mrutyunjaya Kalmat
|
Google Oneindia Kannada News

BSY in Shikaripura
ಶಿವಮೊಗ್ಗ, ಜು. 20 : ಶಿಕಾರಿಪುರ ತಾಲ್ಲೂಕಿನ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವ ಅಂಜನಾಪುರ ಡ್ಯಾಂ ತಾಲ್ಲೂಕಿನ ಜನರ ಕಣ್ಮಣಿಯಾಗಿದ್ದು, ಈ ಡ್ಯಾಂನಲ್ಲಿ ಬೋಟಿಂಗ್ ವ್ಯವಸ್ಥೆ ಹಾಗೂ ಹಿಂಭಾಗದಲ್ಲಿ ಕಿರು ಬೃಂದಾವನ ನಿರ್ಮಿಸುವ ಮೂಲಕ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಅವರು ಇಂದು ತುಂಗಾ ನದಿಗೆ ಬಾಗಿನ ಅರ್ಪಿಸಿ ಆಣೆಕಟ್ಟಿನಿಂದ ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು 5 ಕೋಟಿ ರುಪಾಯಿ ವೆಚ್ಚದ ಯೋಜನೆ ಸಿದ್ದಪಡಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭ ಮಾಡಲಾಗುವುದು ಎಂದರು.

ತಾಲ್ಲೂಕಿನ ಸನ್ಯಾಸಿಕೊಪ್ಪ ಹಾಗೂ ಕಲ್ಲೊಡ್ಡು ಏತನೀರಾವರಿ ಯೋಜನೆಗಳಿಗೆ ಈ ವರ್ಷವೆ ಮಂಜೂರಾತಿ ನೀಡಿ ಮುಂದಿನ ವರ್ಷ ಕಾಮಗಾರಿಯನ್ನು ಆರಂಭಿಸಲಾಗುವುದು. ಇದರಿಂದಾಗಿ ಶಿಕಾರಿಪುರ ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೃಷ್ಣ-ಕಾವೇರಿ ಪ್ರಾಧಿಕಾರದ ಯೋಜನೆಗಳು ಸೇರಿದಂತೆ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ 5 ಸಾವಿರ ಕೋಟಿ ಹಣ ಒದಗಿಸಲಿದೆ. ಅದೇ ರೀತಿ ದಂಡಾವತಿ ಯೋಜನೆಯನ್ನೂ ಸಹ ಏನೇ ಅಡ್ಡಿ ಆತಂಕಗಳು ಬಂದರೂ ಬಿಡದೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಮಳೆಗಾಲ ಆರಂಭವಾಗಿದ್ದರೂ ರಾಜ್ಯದ ಜನರ ಹಿತದೃಷ್ಠಿಯಿಂದ ವಿದ್ಯುತ್ ಖರೀದಿಯನ್ನು ಮುಂದುವರಿಸಲಾಗಿದೆ. ವಿದ್ಯುತ್ ಪರಿಸ್ಥಿತಿ ಸುಧಾರಣೆ ಬಗ್ಗೆ ಚರ್ಚಿಸಲು ತುರ್ತಾಗಿ ಉನ್ನತ ಮಟ್ಟದ ಸಭೆ ಕರೆಯಲಾಗುವುದೆಂದು ಹೇಳಿದರು.

ರಾಜ್ಯದಲ್ಲಿ ಒಂದೆರಡು ಕಡೆ ಮಾತ್ರ ಕಳಪೆ ಬಿತ್ತನೆ ಬೀಜ ಪೂರೈಕೆ ದೂರುಗಳು ಕೇಳಿಬಂದಿವೆ. ಈ ಸಂಬಂಧ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೆಚ್1ಎನ್1 ರೋಗದ ಹತೋಟಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಎಂಎಡಿಬಿ ಅಧ್ಯಕ್ಷ ಪದ್ಮನಾಭ ಭಟ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಲಕ್ಷ್ಮಿನಾರಾಯಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X