ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷೆಯ ಹೊಸ್ತಿಲಲ್ಲಿ ಸುಂದರ ಹಂತಕಿ ಶುಭಾ

By Mahesh
|
Google Oneindia Kannada News

ಬೆಂಗಳೂರು, ಜು.13 : ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಟೆಕ್ಕಿಬಿ.ವಿ ಗಿರೀಶ್(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 17ನೇ ತ್ವರಿತ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಮುಖ ಆರೋಪಿ ಶುಭಾ ಸೇರಿದಂತೆ ನಾಲ್ವರನ್ನು ತಪ್ಪಿತಸ್ಥರು ಎಂದು ಪರಿಗಣಿಸಿದೆ. ಎಲ್ಲಾ ಆರೋಪಿಗಳ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವ ಸಾಧ್ಯತೆಯಿದೆ.

2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಗಿರೀಶ್ ಅವರ ಕೊಲೆ ನಡೆದಿತ್ತು. ನಿಶ್ಚಿತಾರ್ಥ ನಡೆದ ನಾಲ್ಕು ದಿನಗಳಲ್ಲೇ ತನ್ನ ಭಾವಿಪತಿಯನ್ನು ಕೊಲ್ಲಲು ಆರೋಪಿ ಶುಭಾ, ತನ್ನ ಪ್ರಿಯಕರನ ಸಹಾಯ ಪಡೆದಿದ್ದಳು. ಇವರಿಬ್ಬರ ನಡುವೆ ನಡೆದಿದ್ದ ಎಸ್ಎಂಎಸ್ ಸಂದೇಶ ವಿನಿಮಯ ಹಾಗೂ ಕೊಲೆ ಮಾಡಲು ಬಳಸಿದ್ದ ರಾಡ್ ಅನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ ಎಂದು ತನಿಖಾಧಿಕಾರಿ ದಾವೂದ್ ಖಾನ್ ಹೇಳಿದರು.

ಸುಂದರ ಹಂತಕಿಯ ಇನ್ನೊಂದು ಮುಖ: ಬನಶಂಕರಿ 2ನೇ ಹಂತದ 23ನೇ ಮುಖ್ಯರಸ್ತೆಯಲ್ಲಿ ಬಾಲ್ಯದಿಂದಲೂ ಗಿರೀಶ್ ಹಾಗೂ ಶುಭಾ ಒಟ್ಟಿಗೆ ಆಡಿ ಬೆಳೆದವರು. ಬ್ರಾಹ್ಮಣ ವಠಾರದ ಸುಂದರ ಯುವಕ ಗಿರೀಶ್ , ದೊಡ್ಡ ಸಾಫ್ಟ್ ವೇರ್ ಕಂಪೆನಿ ಇಂಟೆಲ್ ನಲ್ಲಿ ಉದ್ಯೋಗ. ತಮ್ಮ ಏರಿಯಾದಲ್ಲೇ ಇದ್ದ ವಕೀಲ ಶಂಕರನಾರಾಯಣ ಅವರ ಮಗಳು ಶುಭಾಳನ್ನು ಮೆಚ್ಚಿದ್ದ. ಗಿರೀಶ್ ಅವರ ತಂದೆ ನಿವೃತ್ತ ವಾಯುಸೇನಾಧಿಕಾರಿ ಬಿ ವೆಂಕಟೇಶ್ ಹಾಗೂ ತಾಯಿ ಪುಷ್ಪವಲ್ಲಿ ಮದುವೆ ಮಾತುಕತೆ ನಡೆಸಿದರು. ಆಗಿನ್ನೂ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಮೂರನೇ ವರ್ಷಕ್ಕೆ ಕಾಲಿರಿಸಿದ್ದ ಶುಭಾ ಕೂಡಾ ಒಪ್ಪಿಗೆ ಸೂಚಿಸಿದ್ದಳು.

ಸಂಭ್ರಮದಿಂದ ನಿಶ್ಚಿತಾರ್ಥ ನಡೆದು ಹೋಯ್ತು. ಇತ್ತ ಗಿರೀಶ್ ಹೊಸಬಾಳಿನ ಕನಸು ಕಾಣತೊಡಗಿದ. ಅತ್ತ ಶುಭಾ, ತನ್ನ ಕಾಲೇಜಿನ ಸಹಪಾಠಿ ಅರುಣ್ ವರ್ಮಾ ಎಂಬ ಅನ್ಯ ಕೋಮಿನ ಯುವಕನ ಬಗ್ಗೆ ಚಿಂತಿಸತೊಡಗಿದ್ದಳು. ಗಿರೀಶ್ ಅನ್ನು ಕೊಲೆ ಮಾಡದ ಹೊರತು ನಮ್ಮ ಪ್ರೀತಿ ಫಲಿಸಲ್ಲ ಎಂದು ತಿಳಿದ ಪ್ರೇಮಾಂಧರು, ಕೊಲೆಗೆ ಸ್ಕೆಚ್ ರೂಪಿಸಿಯೇ ಬಿಟ್ಟರು.

ಕೋರಮಂಗಲ ಔಟರ್ ರಿಂಗ್ ರಸ್ತೆಗೆ ಗಿರೀಶ್ ಅನ್ನು ಶುಭಾ ಕರೆದುಕೊಂಡು ಬಂದು ವಿಮಾನ ನೋಡಬೇಕು ಎಂದಾಗ, ಸಂತೋಷದಿಂದ ಗಿರೀಶ್ ಬಂದಿದ್ದ. ಆದರೆ, ಭಾವಿ ಪತಿ ಪಕ್ಕದಲ್ಲಿರುವಾಗಲೇ ಶುಭಾಳ ವಿಕೃತ ಮನಸ್ಸು, ಹುಚ್ಚುಪ್ರೇಮಿಗೆ ಸಂದೇಶವನ್ನು ಕಳಿಸುತ್ತಿತ್ತು.

ಸ್ನೇಹಿತರಾದ ದಿನೇಶ್ ಅಲಿಯಾಸ್ ದಿನಕರನ್, ವೆಂಕಟೇಶ್ ಜೊತೆಗೂಡಿದ ಅರುಣ್ ಕೊಲೆಗೆ ಸಿದ್ಧವಾಗಿ ಬಂದೇ ಬಿಟ್ಟ. ಶುಭಾ ಜೊತೆಯಿದ್ದ ಗಿರೀಶ್ ಮೇಲೆ ಏಕಾಏಕಿ ರಾಡ್ ನಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಏನೂ ನಡೆದಿಲ್ಲ ಎಂಬಂತೆ ಈ ತಂಡ ಮನೆ ತಲುಪಿಬಿಟ್ಟಿತು. ನಂತರ ಡಿ.23ಕ್ಕೆ ಅಮೆರಿಕಕ್ಕೆ ತೆರಳಲು ಕೂಡಾ ಶುಭಾ ಯತ್ನಿಸಿದ್ದಳು.

ಆದರೆ, ತಡವಾಗಿಯಾದರೂ ಗಿರೀಶ್ ಅವರ ಕುಟುಂಬಕ್ಕೆ ನ್ಯಾಯ ದೊರೆಕಿದೆ. ಆರೋಪ ಸಾಬೀತಾಗಿರುವುದರಿಂದ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯಿದೆ. ಗಿರೀಶ್ ಸಾವಿನ ನಂತರ ಪುತ್ರ ಶೋಕಂ ನಿರಂತರಂ ಎಂಬಂತೆ ಆತನ ವಯೋವೃದ್ಧ ತಂದೆ ಕೂಡಾ ಕೊರಗುತ್ತಾ ಸಾವನ್ನಪ್ಪಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X