ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟರು ಮಂತ್ರಿಮಂಡಲದಲ್ಲಿ ಇರಲೇಬಾರದು

By Prasad
|
Google Oneindia Kannada News

Hansraj Bharadwaj, Karnataka governor
ಬೆಂಗಳೂರು/ನವದೆಹಲಿ, ಜು. 13 : ಅಕ್ರಮ ಗಣಿಗಾರಿಕೆಯಲ್ಲಿ ನಿರತರಾಗಿರುವ 'ಭ್ರಷ್ಟ' ಮಂತ್ರಿಗಳು ಕರ್ನಾಟಕದ ಮಂತ್ರಿ ಮಂಡಲದಲ್ಲಿ ಇರಲೇಬಾರದು. ಯಾರಿಗೂ ಭ್ರಷ್ಟತೆಯಲ್ಲಿ ತೊಡಗಲು ಲೈಸೆನ್ಸ್ ನೀಡಲಾಗದು ಎಂದು ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಹೇಳಿಕೆ ಭಾರೀ ಕೋಲಾಹಲವನ್ನೆಬ್ಬಿಸಿದೆ.

ಭಾರದ್ವಾಜ್ ಅವರು ಮಂಗಳವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವಿವರ ನೀಡಿದರು. ಅವರು ಬುಧವಾರ ಕೇಂದ್ರ ಗೃಹಸಚಿವ ಪಿ ಚಿದಂಬರಂ ಅವರನ್ನೂ ಭೇಟಿ ಮಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕೇಂದ್ರ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯ ಬೊಕ್ಕಸದಿಂದಲೇ ಇವರು ಸಂಬಳ ಪಡೆಯುತ್ತಿರುವಾಗ ಇಂಥ ಕೆಲಸಕ್ಕೆ ಕೈಹಾಕಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರು ಮಂತ್ರಿಯಾಗಿ ಮುಂದುವರಿಯುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಭಾರದ್ವಾಜ್, ರೆಡ್ಡಿ ಸಹೋದರರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐನಿಂದ ತನಿಖೆ ಆಗಲೇಬೇಕು ಎಂದು ಹೇಳಿದರು.

ಒಂದಾಗ ಬದ್ಧ ವೈರಿಗಳು : ಅಕ್ರಮ ಗಣಿಗಾರಿಕೆ ಮತ್ತು ವಿಧಾನಸಭೆಯಲ್ಲಿ ನಡೆದ ಜಂಗಿ ಕುಸ್ತಿಯ ವಿರುದ್ಧ ತೋಳೇರಿಸಿರುವ ಕಾಂಗ್ರೆಸ್ ಪಕ್ಷದ ಪ್ರತಿಭಟನೆಗೆ ಇಂದು ಅನಿರೀಕ್ಷಿತ ಕಾದಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆ ಆಗಲೇಬೇಕು ಮತ್ತು ಗೂಂಡಾಗಿರಿ ನಡೆಸುತ್ತಿರುವ ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಪಟ್ಟುಹಿಡಿದಿರುವ ಮತ್ತು ಅಹೋರಾತ್ರಿ ಧರಣಿ ನಡೆಸುತ್ತಿರುವ ಸಿದ್ದರಾಮಯ್ಯನವರಿಗೆ ಬದ್ಧ ವೈರಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬೆಂಬಲ ಸೂಚಿಸಿದ್ದಾರೆ.

ವಿಧಾನಸಭೆಗೆ ಖುದ್ದಾಗಿ ಆಗಮಿಸಿದ ದೇವೇಗೌಡ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ನೀಡಿ, ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಬಿಜೆಪಿ ತಿರುಗೇಟು : ರಾಜ್ಯ ಸರಕಾರದ ಸ್ಥಿರತೆ ಕಾಪಾಡಬೇಕಾದ ರಾಜ್ಯಪಾಲರೇ ಬಿಜೆಪಿ ಸರಕಾರವನ್ನು ಅಸ್ಥಿರ ಮಾಡಲು ಯತ್ನಿಸುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯನ್ನು ಮರೆತು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರನ್ನು ನಿಯಂತ್ರಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡುವುದಾಗಿ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿ ವಿರೋಧ ಪಕ್ಷದವರು ಸದನದ ಪಾವಿತ್ರ್ಯತೆಯನ್ನು ಹಾಳುಗೆಡವಿದ್ದಾರೆ. ವಿರೋಧ ಪಕ್ಷದವರಿಗೆ ಕೂತು ಚರ್ಚಿಸಲು ಆಸಕ್ತಿಯೇ ಇಲ್ಲ. ಚರ್ಚೆಗೆ ನಾನು ರೆಡಿ. ಸಿಬಿಐ ತನಿಖೆಯಂತೂ ಸಾಧ್ಯವೇ ಇಲ್ಲ, ಆ ಪ್ರಶ್ನೆ ಉದ್ಭವಿಸುವೂ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X