ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ?

By * ಅರಕಲಗೂಡು ಜಯಕುಮಾರ್
|
Google Oneindia Kannada News

Sushma Swaraj and Reddy brothers
ಸರ್ಕಾರದ ರಿಮೋಟ್ ಕಂಟ್ರೋಲ್ ಎಲ್ಲಿದೆ? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಬಾರಿ ಕೇಳಿಕೊಂಡಿದ್ದೇನೆ. ಬಹುಶಃ ನಿಮಗೂ ಅಂತಹ ಅನುಮಾನಗಳು ಎದ್ದಿರಲಿಕ್ಕೆ ಸಾಕು. ಬಿಜೆಪಿಯ ರಿಮೋಟ್ ಕಂಟ್ರೋಲ್ ಸಂಘಪರಿವಾರದ ಬಳಿ ಇದೆಯೇ? ದೆಹಲಿಯ ಹೈಕಮಾಂಡ್ ಬಳಿ ಇದೆಯೇ? ಇಲ್ಲ ಬಿಜೆಪಿ ಮಹಿಳಾ ಅಧಿನಾಯಕಿ ಸುಷ್ಮಾ ಸ್ವರಾಜ್ ಬಳಿ ಇದೆಯೇ? ಅಡ್ವಾಣಿ ಬಳಿ ಇದೆಯೇ? ಬಳ್ಳಾರಿ ಗಣಿಧಣಿಯ ಬಳಿ ಇದೆಯೇ? ಸಚಿವ ಸಂಪುಟದ ನರ್ಸ್ ಖ್ಯಾತಿಯ ರೇಣುಕಾಚಾರ್ಯನ ಬಳಿ ಇದೆಯೇ? ಇಲ್ಲ ಅಂತಿಮವಾಗಿ ಕರ್ನಾಟಕ ರಾಜ್ಯಪಾಲರ ಬಳಿ ಇದೆಯೇ?

ಎಲ್ಲವೂ ಅಯೋಮಯ ಅಲ್ವಾ? ಹೌದು ಇಂತಹದ್ದೊಂದು ಹೀನ ಪರಿಸ್ಥಿತಿಯ ಸರ್ಕಾರವನ್ನ ನಾವು ನೀವು ನೋಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳು ಸಂದಿವೆ. ಸರ್ಕಾರ ಸಾಧನಾ ಸಮಾವೇಶದ ಜೊತೆಗೆ ಹತ್ತು ಹಲವು ಜಾತಿ ಸಮಾವೇಶಗಳನ್ನು ಮಾಡುತ್ತಿದೆ. ಯಡಿಯೂರಪ್ಪ ಆ ಮೂಲಕ ಜಾತಿಗಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವತ್ತು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಬಿವೃದ್ದಿಯ ನಿಟ್ಟಿನಲ್ಲಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಈ ಸಂದರ್ಭ ಈ ಮೇಲಿನಂತೆ ಪ್ರಶ್ನೆ ಕೇಳಿಕೊಳ್ಳಬೇಕಾದ ಸಂದರ್ಭ ಮತ್ತೆ ಒದಗಿದೆ. ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನ, ಅಲ್ಲಿ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ರೀತಿ ಇದಕ್ಕೆ ಕಾರಣ.

ಹೌದು ಯಾಕೆ ಹೀಗೆ ಸಂಘ ಪರಿವಾರ ಕಂಡ ಕನಸು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಈಡೇರಿದೆಯಾದರೂ ಸಂಘದ ಆಶೋತ್ತರಗಳನ್ನು ಸರ್ವ ಸಮ್ಮತವಾಗಿ ಈಡೇರಿಸುವ ರೀತಿಯಲ್ಲಿ ಸರ್ಕಾರ ನಡೆಯುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಪದೇಪದೇ ಮುಖೇಡಿಯಂತೆ ಕಣ್ಣೀರು ಹಾಕುತ್ತ ಅಸಹಾಯಕನ ರೀತಿ ನಡೆದುಕೊಳ್ಳುತ್ತಿರುವುದು, ಸಾರ್ವಜನಿಕವಾಗಿ ಸಿಟ್ಟನ್ನು ಪ್ರದರ್ಶಿಸುವುದು, ಬಳ್ಳಾರಿಯ ಗಣಿಧಣಿಗಳನ್ನು ಓಲೈಸುವುದು, ಪರಮ ಭ್ರಷ್ಟರನ್ನೂ ಕೂಡ ಸಚಿವ ಸಂಪುಟದೊಳಕ್ಕೆ ಬಿಟ್ಟುಕೊಂಡು ಅಸಹ್ಯ ಸೃಷ್ಟಿಸಿಕೊಳ್ಳುತ್ತಿರುವುದು ಎಷ್ಟು ಸರಿ? ಅಧಿಕಾರ ಸ್ವೀಕರಿಸುವಾಗ ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನಂತರ ಹೇಗೆ ನಡೆದುಕೊಳ್ಳುತ್ತಿದ್ದಾರೆ? ಈ ಸರ್ಕಾರದಲ್ಲಿ ರೈತನ ಸ್ಥಿತಿ ಹೇಗಿದೆ ಎಂಬುದನ್ನು ಬೇರೆ ವಿವರಿಸಿ ಹೇಳಬೇಕಿಲ್ಲ.

ಈಗ ವಿಚಾರಕ್ಕೆ ಬರೋಣ, ಜೆಡಿಎಸ್ ಸಮ್ಮಿಶ್ರ ಸರ್ಕಾರದ ತಪ್ಪು ನಿರ್ಧಾರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆರಂಭದಿಂದಲೇ ತನ್ನ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದು ರೆಡ್ಡಿಗಳನ್ನು ಓಲೈಸುವ ಮೂಲಕ. ಬಳ್ಳಾರಿಯ ಗಣಿಧಣಿಗಳ ಆಶಯದಂತೆ ರಚನೆಯಾದ ಮಂತ್ರಿ ಮಂಡಲದಿಂದ ಹಿಡಿದು ಪ್ರತಿ ಹೆಜ್ಜೆಯಲ್ಲೂ ಅವರನ್ನು ಬೆನ್ನಿಗಿಟ್ಟುಕೊಂಡ ಫಲವಾಗಿ ಮೊನ್ನೆಯ ಸದನ ಕಲಹದ ಮೂಲಕ ಅಸಹ್ಯ ಬೀದಿಗೆ ಬಿದ್ದಿದೆ. ಮೊನ್ನೆ ವಿರೋಧ ಪಕ್ಷದ ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಸದನದಲ್ಲಿ ಹೇಳಿದ ಸತ್ಯವನ್ನು ಅರಗಿಸಿಕೊಳ್ಳಲಾಗದ ಮುಖ್ಯಮಂತ್ರಿ ಯಡಿಯೂರಪ್ಪ ತಾಳ್ಮೆ ಕಳೆದು ಏರಿ ಹೋದದ್ದು ತನ್ನ ಸಹ ಸಚಿವರನ್ನು, ಶಾಸಕರುಗಳನ್ನು ತನ್ನೊಂದಿಗೆ ಕೈ ಜೋಡಿಸುವಂತಹ ಅನಾಹುತಕಾರಿ ಸನ್ನಿವೇಷ ಸೃಷ್ಟಿಸಿಕೊಂಡು ಬಿಟ್ಟರು.

ಗಣಿಧಣಿಗಳ ಎಂಜಲು ತಿಂದು ಪಕ್ಷ ಸೇರುವ ಕಾಂಗ್ರೆಸ್-ದಳ ಪಕ್ಷಾಂತರಿಗಳನ್ನು ಇಟ್ಟುಕೊಂಡು, ಅವರ ಅವಶ್ಯಕತೆಗಳನ್ನು ಪೂರೈಸುತ್ತಾ ಒಂದು ಸರ್ಕಾರ ಎಷ್ಟು ಸುಭದ್ರವಾಗಿ ಮತ್ತು ಎಷ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯ? ಜನಮೆಚ್ಚುವಂತೆ ಸರ್ಕಾರ ಅಭಿವೃದ್ದಿ ಕೆಲಸಗಳನ್ನೇನೋ ಮಾಡುತ್ತಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಸರ್ಕಾರದ ನೈತಿಕತೆ ಪ್ರಾಧಾನ್ಯತೆ ಪಡೆಯುವುದಿಲ್ಲವೇ? ಮೌಲ್ಯಾಧಾರಿತವಾಗಿ ಕಾರ್ಯ ನಿರ್ವಹಿಸದ ಸರ್ಕಾರ ಯಾವತ್ತಿಗೂ ಸ್ಥಿರವಾಗಿರಲಾರದು.

ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ಅತೀ ಹೆಚ್ಚು ಲಾಠೀಚಾರ್ಚುಗಳಾಗಿವೆ, ದೂರು ದಾಖಲಾಗಿವೆ, ಅದೇ ರೀತಿ ಕನ್ನಡ ಪರ ಹೋರಾಟ ಮಾಡುವ ಸಂಘಟನೆಗಳನ್ನು ಬಗ್ಗುಬಡಿದು ಕೇಸು ಜಡಿದು ಕನ್ನಡದ ಸೊಲ್ಲಡಗಿಸಿದೆ. ವರ್ಗಾವಣೆ ಮಾರ್ಗದರ್ಶಿ ಸೂತ್ರಗಳನ್ನು ಬದಿಗಿಟ್ಟು ಬೇಕಾಬಿಟ್ಟಿ ವರ್ಗಾವಣೆಯಾಗುತ್ತಿವೆ. ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ನುಂಗಿ ನೀರು ಕುಡಿದ ಉದಾಹರಣೆ ಕಣ್ಣೆದುರಿಗಿದೆ. ರಾಜ್ಯಪಾಲ ಹಂಸರಾಜ ಭಾರದ್ವಜ್ ಹಲವಾರು ಬಾರಿ ಸರ್ಕಾರದ ನಡವಳಿಕೆಗಳ ವಿರುದ್ದ, ಸಚಿವ ಸಂಪುಟದ ಮಂತ್ರಿಗಳ ವಿರುದ್ದ ಗುಡುಗಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಬಳ್ಳಾರಿ ಗಣಿಧಣಿಗಳು ಸಿಡಿದೆದ್ದಾಗ ಸುಷ್ಮಾಸ್ವರಾಜ್, ಸಂತೋಷ್ ಹೆಗಡೆ ರಾಜೀನಾಮೆ ನೀಡಿದಾಗ ಇಕ್ಕಟ್ಟು ತಪ್ಪಿಸಲು ದೆಹಲಿಯ ಹೈಕಮಾಂಡ್ ನಿತಿನ್ ಗಡ್ಕರಿ, ಅಡ್ವಾಣಿ ಪ್ರಭಾವ ಬೇಕು, ಹಾಲಪ್ಪ-ಸರ್ಸು ರೇಣುಕಾಚಾರ್ಯ, ಸಂಪಂಗಿ ಭ್ರಷ್ಟತನ, ರೆಡ್ಡಿಗಳ ವರ್ತನೆ ಇತ್ಯಾದಿ ಸಾರ್ವಜನಿಕವಾಗಿ ಬೀದಿಗೆ ಬಿದ್ದಾಗ ಸಂಘ ಪರಿವಾರದ ಗದರಿಕೆ ಬೇಕು. ಸದನದ ಗದ್ದಲ ಶುರುವಾಗಿದೆ ಈಗ ಪರಿಹಾರಕ್ಕೆ ಯಾರು ಬರುತ್ತಾರೋ ನೋಡಬೇಕು. ಇಂತಹ ಪರಿಸ್ಥಿತಿ ಸರ್ಕಾರಕ್ಕಿದ್ದರೆ ಆಡಳಿತ ನಿರ್ವಹಣೆ ಮಾಡುವವರಾದರೂ ಯಾರು? ಎಂಬಲ್ಲಿಗೆ ಪ್ರಶ್ನೆ ಬಂದು ನಿಲ್ಲುತ್ತದೆ.

ಸಾರ್ವಜನಿಕರ ನಡುವೆ ಚಾಲ್ತಿಯಲ್ಲಿರುವ ಮಾತಿನಂತೆ ಇವತ್ತು ಕಾಂಗ್ರೆಸ್-ದಳ ಇತ್ಯಾದಿ ಯಾವುದೇ ಪಕ್ಷದಲ್ಲಿರುವ ಮುಖಂಡರುಗಳು, ಶಾಸಕರು, ಮರಿ ಪುಢಾರಿಗಳು ಜಾತಿಯ ಆಧಾರದಲ್ಲಿ ಸಾಮೂಹಿಕವಾಗಿ ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲುತ್ತಾರೆ, ಇಂತಹ ಸಾರ್ವಜನಿಕ 'ಒಲವು'ಗಳೇ ಇತ್ತೀಚೆಗೆ ಬಿಜೆಪಿ ಎದುರಿಸಿದ ಅಷ್ಟೂ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಕಾರಣ ಎನ್ನಲಾಗುತ್ತದೆ. ಆದರೆ ಇಂತಹ ಒಗ್ಗಟ್ಟು ಜಾತಿಯ ಆಧಾರದಲ್ಲಿ ಒಬ್ಬ ರಾಮಕೃಷ್ಣ ಹೆಗಡೆ, ದೇವೇಗೌಡ, ಕುಮಾರಸ್ವಾಮಿ, ಎಸ್ಎಂ ಕೃಷ್ಣ, ದೇವರಾಜ ಅರಸು, ವೀರೇಂದ್ರ ಪಾಟೀಲ್ ಇದ್ದಾಗ ಕಂಡು ಬರಲಿಲ್ಲ. ಇದು ಯಡಿಯೂರಪ್ಪನವರ ಮಟ್ಟಿಗೆ ವೈಯುಕ್ತಿಕವಾಗಿ ಪ್ಲಸ್ ಪಾಯಿಂಟು ಆದರೂ ಸಾರ್ವಜನಿಕವಾಗಿ ಮಾತ್ರ ಅತ್ಯಂತ ಅಪಾಯಕಾರಿಯಾದುದು.

ಅಂತಿಮವಾಗಿ ಒಂದು ಮಾತು : ಈಗ ನಡೆಯುತ್ತಿರುವ ಸದನ ಜನಪರವಾದ ವಿಚಾರಗಳನ್ನು ಚರ್ಚೆಗೆ ತರುತ್ತದೆ ಎಂದು ರಾಜ್ಯದ ಕೋಟ್ಯಾಂತರ ಜನತೆ ಕಾಯುತ್ತಿದ್ದರೆ ಈ ಶಾಸಕರುಗಳು-ಮಂತ್ರಿಗಳು ಕಿಸಿಯುತ್ತಿರುವುದು ಏನು? ಮೊದಲ ಎರಡು ದಿನ ಸಂತೋಷ್ ಹೆಗಡೆ ವಿಚಾರವಾಗಿ ಗದ್ದಲ ಎಬ್ಬಿಸಿದರು, ಅಧಿಕಾರ ಕೊಡುವ ವಿಚಾರ ಬಂದಾಗ ಮಾತ್ರ ತಮ್ಮ ಮಾಮೂಲು ಖಯಾಲಿ ಪ್ರದರ್ಶಿಸಿದರು, ರೇವಣ್ಣ-ಕುಮಾರಸ್ವಾಮಿ-ಸಿದ್ದರಾಮಯ್ಯ ಮಾತೆತ್ತಿದರೆ ಗಣಿವಿಚಾರ ಬಿಟ್ಟರೆ ನೈಸ್ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬಶಾಸಕ, ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ, ಬಿತ್ತನೆ ಬೀಜ ಸಮಸ್ಯೆ, ಬೆಂಬಲ ಬೆಲೆ, ಸಹಾಯಧನ ಇತ್ಯಾದಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಹೀಗಾದರೆ ಕೋಟ್ಯಾಂತರ ರೂ ವೆಚ್ಚ ಮಾಡಿ ನಡೆಸುವ ಸದನ ಕಲಾಪಗಳು ಯಾಕೆ ಬೇಕು? (ಕೃಪೆ : ಅಭಿವ್ಯಕ್ತಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X