• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಥ ಭವಿಷ್ಯಗಳನ್ನು ನೀವು ನಂಬುತ್ತೀರಾ?

By * ಪ್ರಸಾದ ನಾಯಿಕ
|

ಜರ್ಮನಿಯ ಡಬ್ಬಿಯಲ್ಲಿದ್ದ ಆಹಾರಕ್ಕೆ ಕೈಚಾಚದೆ ಸ್ಪೇನ್ ಡಬ್ಬಿಯ ಆಹಾರಕ್ಕೆ ಆಸೆ ತೋರಿದ ಭವಿಷ್ಯಕಾರ ಅಕ್ಟೋಪಸ್ ಪೌಲ್ ಜೀವವೇ ಅಪಾಯದಲ್ಲಿದೆ. ಜರ್ಮನಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿರುವ ಅಷ್ಟಪದಿಯನ್ನೇ ಆಹಾರವನ್ನಾಗಿಸಿ ತಿಂದು ತೇಗಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟೇ ಏಕೆ, ಈ ಅಷ್ಟಪದಿ ನಂಬಿಕೆ, ಮೂಢನಂಬಿಕೆಯ ಚರ್ಚೆಗೆ ಆಹಾರವಾಗಿದೆ.

ಫೀಫಾ ವಿಶ್ವಕಪ್ 2010ನಲ್ಲಿ ಜರ್ಮನಿಯ ಎಲ್ಲ ಪಂದ್ಯಗಳ ಬಗ್ಗೆ ಕರಾರುವಾಕ್ಕಾಗಿ ಭವಿಷ್ಯ ನುಡಿದು ಜಗದ್ವಿಖ್ಯಾತವಾಗಿರುವ ಅಕ್ಟೋಪಸ್ ಪೌಲ್ ವಿಶ್ವಕಪ್ ಫೈನಲ್ ಪಂದ್ಯಾವಳಿಯ ಭವಿಷ್ಯ ನುಡಿಯುವುದೇ ಅನುಮಾನವಾಗಿತ್ತು. ಈ ಬಗ್ಗೆ ಕುತೂಹಲವನ್ನೂ ಕೆರಳಿಸಿತ್ತು. ಈಗ ಬಂದಿರುವ ವರದಿಗಳ ಪ್ರಕಾರ ಜುಲೈ 11ರಂದು ನೆದರ್ಲ್ಯಾಂಡ್ ಮತ್ತು ಸ್ಪೇನ್ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದ ಭವಿಷ್ಯವನ್ನೂ ಪೌಲ್ ನುಡಿದಿದೆ. ಸ್ಪೇನ್ ತಂಡ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಹೇಳಿ ಮತ್ತಷ್ಟು ಆಸಕ್ತಿ ಕೆರಳಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ಮಲೇಷ್ಯಾದ ಗಿಳಿರಾಮ ಮಣಿ, ಮತ್ತೊಂದು 'ಸತ್ಯ' ನುಡಿದಿದ್ದು ನೆದರ್ಲ್ಯಾಂಡ್ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿ ಅಕ್ಟೋಪಸ್ ಗೆ ಸವಾಲು ಹಾಕಿದೆ. ನಿಮ್ಮಿಬ್ಬರಿಗೆ ನಾನೇನು ಕಡಿಮೆ ಎಂಬಂತೆ ಆಸ್ಟ್ರೇಲಿಯಾದ ಹ್ಯಾರಿ ಎಂಬ ಹೆಸರಿನ ಮೊಸಳೆ ಸ್ಪೇನ್ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ.

ಪೌಲ್, ಮಣಿ, ಹ್ಯಾರಿ... ಮುಂದ? ಗಿಣಿ, ಕೋತಿ, ಕಪ್ಪೆ, ಆಮೆ, ಬೆಕ್ಕುಗಳು ಏಕೆ ಸುಮ್ಮನಿವೆ ಎಂಬುದೇ ಆಶ್ಚರ್ಯಕರ ಸಂಗತಿ. ಭಾರತದಲ್ಲಿ ಬೀದಿಬೀದಿಗಳಲ್ಲಿ ಗಿಳಿಶಾಸ್ತ್ರದವರು ಸಿಗುತ್ತಾರೆ. ಪ್ರಾಣಿ ಪಕ್ಷಗಳು ಹೋಗಲಿ, ಯಾರು ಪ್ರಧಾನಿಯಾಗ್ತಾರೆ, ಯಾರು ರಾಷ್ಟ್ರಪತಿಯಾಗ್ತಾರೆ, ಸೂರ್ಯಗ್ರಹಣವಾದಾಗ ಹಾಗಾಗುತ್ತೆ, ಚಂದ್ರಗ್ರಹಣ ಸಂಭವಿಸಿದಾಗ ಹೀಗಾಗುತ್ತೆ ಎಂಬು ಜ್ಯೋತಿಷ್ಯ ಹೇಳುವ ನಮ್ಮ ದೇಶದ ಜ್ಯೋತಿಷ್ಯಕಾರರು ಇನ್ನೂ ಏಕೆ ಬಾಯಿಬಿಟ್ಟಿಲ್ಲ? ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ.

ಪ್ರಾಣಿ, ಪಕ್ಷಿಗಳು ಭವಿಷ್ಯ ನುಡಿಯಲು ಸಾಧ್ಯವೆ?
ಜನರಿಗೆ ಏನಾಗಿದೆ? ಜಗತ್ತು ವೈಜ್ಞಾನಿಕವಾಗಿ ಇಷ್ಟು ಮುಂದುವರಿದ ಕಾಲದಲ್ಲಿ ಅಕ್ಟೋಪಸ್, ಗಿಣಿ, ಮೊಸಳೆಗಳ ಭವಿಷ್ಯಗಳಿಗೆ ಯಾಕೆ ಜನ ಮುಗಿಬೀಳುತ್ತಿದ್ದಾರೆ? ತಮ್ಮಿಷ್ಟದಂತೆ ಭವಿಷ್ಯ ಹೇಳದಿದ್ದಾಗ, ಅದನ್ನು ಮುಗಿಸೇ ಬಿಡುತ್ತೇವೆ ಎಂದು ಆ ಮೂಕಪ್ರಾಣಿಯ ಮೇಲೆ ಮುಗಿಬೀಳುತ್ತಿದ್ದಾರೆ. ಇದೆಲ್ಲ ಒತ್ತಟ್ಟಿಗಿರಲಿ, ಇಷ್ಟೆಲ್ಲ ಭವಿಷ್ಯ ಹೇಳುತ್ತಿರುವ ಪೌಲ್ ಅಕ್ಟೋಪಸ್ ಭವಿಷ್ಯವೇ ಅತಂತ್ರದಲ್ಲಿದೆ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿ. ಜನ ತನ್ನನ್ನೇ ತಿಂದು ತೇಗಲು ನಿಂತಿದ್ದಾರೆ ಎಂದು ಅದಕ್ಕೆ ಮೊದಲೇ ತಿಳಿದಿದ್ದರೆ ಭವಿಷ್ಯ ಹೇಳುತ್ತಿತ್ತೆ? ಎರಡೂ ಡಬ್ಬಿಗಳ ತಂಟೆಗೆ ಹೋಗದೆ ಮೂಲೆಯಲ್ಲಿ ತಣ್ಣಗೆ ಕುಳಿತಿರುತ್ತಿತ್ತು. ಈ ಪ್ರಾಣಿಗಳು ಕೋಟಿ ಕೋಟಿ ಹಣ ಹೂಡುವವರ, ಹಣ ಮಾಡುವವರ ದಾಳವಾಗುತ್ತಿರುವುದಂತೂ ಸತ್ಯದ ಸಂಗತಿ.

ಇದೆಲ್ಲ ಜಾಗತಿಕ ಮೂಢನಂಬಿಕೆ ಅಲ್ಲದೆ ಮತ್ತೇನೂ ಅಲ್ಲ. ಜನ ಸಮೂಹ ಸನ್ನಿಯಂತೆ ಇಂಥ ನಂಬಿಕೆಗಳ ದಾಸರಾಗುತ್ತಿದ್ದಾರೆ. ಇಂಗ್ಲೆಂಡ್ ಆರಂಭಿಕ ಹಂತದಲ್ಲಿ ಸೋತಿದ್ದಕ್ಕೆ ಮಾಟ ಮಂತ್ರದ ಪಾರಿವಾಳವೇ ಕಾರಣ ಎಂದೂ ಸುದ್ದಿ ಹಬ್ಬಿಸಲಾಗಿತ್ತು. ಆ ಪಾರಿವಾಳ ಇಂಗ್ಲೆಂಡ್ ಫೆನೆಟಿಕ್ಸ್ ಗಳ ಕೈಗೆ ಸಿಕ್ಕಿದ್ದರೆ ಸುಮ್ಮನೆ ಬಿಡುತ್ತಿದ್ದರೆ?

ಮೂಢನಂಬಿಕೆಯ ದಾಸರಾಗಿರುವ ಜನ ಎಂಥ ಹೇಯ ಕೃತ್ಯಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇಲ್ಲಿ ಒಂದು ಸತ್ಯಕಥೆಯಿದೆ ಓದಿರಿ. ಅಕಸ್ಮಾತಾಗಿ ಮನೆಯೊಳಗೆ ಬಂದ ಹಂದಿಯನ್ನು ಸಾಕ್ಷಾತ್ ಲಕ್ಷ್ಮಿಯ ಅವತಾರ ಎಂದು ನಂಬಿರುವ ಸಂಬಂಧಿಕರೊಬ್ಬರು ಅದನ್ನು ಹೊರಗೆ ಹೋಗಲು ಬಿಡದೆ ಮನೆಯ ಅಂಗಳದೊಳಗೇ ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿ ಅಂಗಳದಲ್ಲೇ ಮಣ್ಣು ಮಾಡಿದ್ದರು. ಅದನ್ನು ಹೊರಹೋಗಲು ಬಿಟ್ಟರೆ ಲಕ್ಷ್ಮಿ (ಕಾಂಚಾಣ) ತನ್ನ ಕೈಯಿಂದ ಎಲ್ಲಿ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಒಂದು ಅಮಾಯಕ ಮೂಕ ಪ್ರಾಣಿ ಇವರ ದುರಾಸೆಗೆ ಬಲಿಯಾಗಬೇಕಾಯಿತು. ಇದೇ ರೀತಿ ಇಂಥ ಜನರ ಮೂಢನಂಬಿಕೆಗೆ, ದುರಾಸೆಗೆ ಇನ್ನೆಷ್ಟು ಪ್ರಾಣಿ, ಪಕ್ಷಿಗಳು ಬಲಿಯಾಗಿವೆಯೋ ಯಾರಿಗೆ ಗೊತ್ತು? ಹಣದ ಆಸೆಗೆ ಸ್ವಂತ ಮಕ್ಕಳನ್ನೇ ಬಲಿ ಕೊಡಲು ಹೇಸದ ಜನ ಇನ್ನು ಪ್ರಾಣಿಗಳನ್ನು ಬಿಟ್ಟಾರೆಯೆ?

ಈಗ ನೀವೇ ಹೇಳಿ, ಫುಟ್ಬಾಲ್ ಆಟ ಕೆಲ ಮನುಷ್ಯರಿಗೇ ಅರ್ಥವಾಗಲ್ಲ ಇನ್ನು ಈ ನಿರುಪದ್ರವಿಗಳಿಗೆ ಅರ್ಥವಾಗಲು ಸಾಧ್ಯವೆ? ಗೆಲುವು, ಸೋಲು ಕುರಿತು ಪ್ರಾಣಿ, ಪಕ್ಷಿಗಳು ಭವಿಷ್ಯ ನುಡಿಯಲು ಸಾಧ್ಯವೆ? ಇಂಥ ಭವಿಷ್ಯಗಳನ್ನು ನೀವು ನಂಬುತ್ತೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X