ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯವಿಟ್ಟು ಈ ಮಕ್ಕಳನ್ನು ಕೂಡಲೇ ರಕ್ಷಿಸಿ!

By * ಡಿ.ಟಿ. ತಿಲಕ್‌ರಾಜ್
|
Google Oneindia Kannada News

Please save these children!
ಚನ್ನಪಟ್ಟಣ, ಜು. 8 : ಇದನ್ನು ನಮ್ಮ ವ್ಯವಸ್ಥೆಯ ಅಣಕವೆನ್ನೋಣವೋ ಇಲ್ಲ ನಮ್ಮನ್ನಾಳುವವರ ನಿರ್ಲಕ್ಷ್ಯದ ಫಲ ಎನ್ನೋಣವೋ? ಸಾರ್ವಜನಿಕ ಶೌಚಾಲಯವೊಂದು ಪುಟಾಣಿಗಳಿಗೆ ಅನ್ನ, ಅಕ್ಷರ ನೀಡುವ ಅಂಗನವಾಡಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಪಟ್ಟಣದ ಜೆ.ಸಿ. ರಸ್ತೆಯ ಹಿಂಭಾಗದ ತಮಿಳು ಕಾಲೋನಿಯಲ್ಲಿ 4 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಯ ಕಟ್ಟಡವೇ ಅಂಗನವಾಡಿ ಕೇಂದ್ರವಾಗಿ ಮಾರ್ಪಾಡಾಗಿದ್ದು, ಈ ಕಟ್ಟಡದಲ್ಲಿ ಅಂಗನವಾಡಿ ತೆರೆಯಲು ಅನುಮತಿ ನೀಡಿದ ಪುಣ್ಯಾತ್ಮರಾದರೂ ಯಾರು ಎಂಬುದು ಈಗ ಪ್ರಶ್ನಾರ್ಹ ವಿಚಾರವಾಗಿದೆ.

ಬಡವರು, ಅನಕ್ಷರಸ್ಥರು, ಕೂಲಿಕಾರ್ಮಿಕರೇ ಹೆಚ್ಚಾಗಿರುವ ಈ ಕಾಲೋನಿಯ ಜನತೆಗೆ ಅನುಕೂಲವಾಗಲೆಂದು 2003-04ನೇ ಸಾಲಿನ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯು ಈ ಸಾರ್ವಜನಿಕ ಶೌಚಾಲಯ ನಿರ್ಮಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೋ, ಬೇಜವಾಬ್ದಾರಿವೋ ಅಥವಾ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಲೋ, ಸಾರ್ವಜನಿಕ ಶೌಚಾಲಯವು ಸದ್ಬಳಕೆಯಾಗದೆ ನಿರುಪಯುಕ್ತವಾಗಿದೆ. ಈ ಬಗ್ಗೆ ದು(ದೂ)ರಾಲೋಚನೆ ನಡೆಸಿದ ಕೆಲವರು ಬಳಕೆಗೆ ಬಾರದ ಈ ಶೌಚಾಲಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

ಬಡಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿರುವ ಈ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಂತೆ ಇರುವ ಚರಂಡಿಯಲ್ಲಿ ಕಸ ಕಡ್ಡಿ, ಕೊಳಕು ನೀರಿನಿಂದ ತುಂಬಿ ದುರ್ನಾತ ಬೀರುತ್ತಿದ್ದು, ದಿನನಿತ್ಯ ಚರಂಡಿಯ ಕೊಳಕು ನೀರು ಅಂಗನವಾಡಿ ಕಂ ಶೌಚಾಲಯದ ಮುಂದೆ ನಿಂತು, ಸಹಿಸಲಸಾಧ್ಯವಾದ ವಾಸನೆಯಿಂದ ನಾರುತ್ತಿದೆ. ಸಣ್ಣ ಮಕ್ಕಳು ಪ್ರತಿದಿನ ಈ ನರಕಯಾತನೆಯಲ್ಲಿ ಪಾಠ ಕೇಳುತ್ತಾರೆ ಎಂಬುದು ಆತಂಕದ ವಿಚಾರವಾಗಿದೆ. ಇದೆಲ್ಲ ಗೊತ್ತಿದ್ದೂ ಗೊತ್ತಿಲ್ಲದಂತಿರುವ ಅಧಿಕಾರಿಗಳು ಮೂಗು ಮಾತ್ರವಲ್ಲ ಕಿವಿ, ಕಣ್ಣು ಮುಚ್ಚಿ ಕುಳಿತಿದ್ದಾರೆ.

ಹೇಳಿ ಕೇಳಿ ಇದು ಕೊಳಚೆ ಪ್ರದೇಶ. ಕೊಳಚೆ ನೀರು ಮುಂದೆ ಹೋಗದೆ ನಿಂತಲ್ಲೇ ನಿಂತು ಸೊಳ್ಳೆಗಳ ಸಂತಾನ ಪ್ರತಿದಿನ ಹೆಚುತ್ತಿದೆ. ದುರ್ನಾತ, ಕೊಳೆತ ನೀರು, ಸೊಳ್ಳೆಗಳ ಹಾವಳಿ, ಕಸ ಕಡ್ಡಿಗಳ ರಾಶಿ ಇವುಗಳ ಮಧ್ಯೆ ಪುಟ್ಟ ಕಂದಮ್ಮಗಳು ಅಂಗನವಾಡಿ ಕೇಂದ್ರವೆಂಬ ಈ ಕೊಂಪೆಯಲ್ಲಿ ಪ್ರತಿದಿನ ಕೂರುತ್ತಿದ್ದಾರೆಂದರೆ ತಾಲೂಕು ಆಡಳಿತದ ಮಟ್ಟವನ್ನು ಒಮ್ಮೆ ಊಹಿಸಿಕೊಳ್ಳಿ. ಇದರ ಮಧ್ಯೆಯೇ ಈ ಕೊಳಕು ಜಾಗದಲ್ಲಿ ತಯಾರಿಸುವ ಮಧ್ಯಾಹ್ನದ ಊಟವನ್ನು ತಿನ್ನಬೇಕಾದ ದುಃಸ್ಥಿತಿ ಮಕ್ಕಳಿಗೆ ಒದಗಿ ಬಂದಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಇವರಿಗಿರುವ ಕಾಳಜಿ ಪ್ರಶ್ನಾರ್ಹವಾಗಿದೆ.

ಈ ವಾತಾವರಣ ಅಕ್ಕ-ಪಕ್ಕದ ಮನೆಯ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯವೈಖರಿಗೆ ಇಲ್ಲಿನ ಜನ ಬೇಸತ್ತಿದ್ದಾರೆ. ಇಲ್ಲಿ ಹೇಳಲು-ಕೇಳಲು ಯಾರೂ ಇಲ್ಲ, ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಅಲ್ಲಿನ ಜನತೆ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಈ ಬಗ್ಗೆ ಕೊಳಚೆ ನಿರ್ಮೂಲನಾ ಮಂಡಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಾಗರೀಕರು ದೂರಿದ್ದಾರೆ.

ಮಕ್ಕಳ ಪೋಷಣೆಯ ಜವಾಬ್ದಾರಿ ಹೊತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಾಲೂಕಿನಲ್ಲಿ ಇದ್ದಾರೆಯೇ ಎಂಬ ಅನುಮಾನ ಈ ಪರಿಸ್ಥಿತಿಯಿಂದ ಹೊರಬಂದಿದ್ದು, ಕಛೇರಿಯಿಂದ ಕೇವಲ 1 ಕಿ.ಮೀ ಅಂತರದಲ್ಲಿರುವ ಈ ಅಂಗನವಾಡಿ ಕಂ ಶೌಚಾಲಯ ಇವರಿಗೆ ಗೋಚರಿಸಲಿಲ್ಲವೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಪಟ್ಟಣ ಪ್ರದೇಶದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿ, ಅಂಗನವಾಡಿ ಕೇಂದ್ರವನ್ನು ಸೂಕ್ತ ಸ್ಥಳಕ್ಕೆ ವರ್ಗಾವಣೆ ಮಾಡಿ, ಮಕ್ಕಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರ ಅಂಗನವಾಡಿ ಕೇಂದ್ರಗಳ ಕಟ್ಟಡಗಳಿಗೆ ಕೋಟ್ಯಾಂತರ ರೂ. ಹಣ ವ್ಯಯ ಮಾಡುತ್ತಿದೆ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾದ ಜಾಗ ಒದಗಿಸಿ, ಅಂಗನವಾಡಿ ಕಟ್ಟಡ ನಿರ್ಮಿಸಿ, ಅಮಾಯಕ ಮಕ್ಕಳು ಪಡುವ ತೊಂದರೆ ತಪ್ಪಿಸಲು ಮುಂದಾಗಬೇಕಿದೆ.

ಬರಿ ಸ್ವಚ್ಚತೆ ಕಾಪಾಡುವುದಷ್ಟೇ ಅಲ್ಲ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಂಬುವರು ತಾಲೂಕಿನಲ್ಲಿದ್ದರೆ ಕೂಡಲೇ ಇತ್ತ ಧಾವಿಸಿ, ಈ ಕೊಂಪೆಯಿಂದ ಮಕ್ಕಳನ್ನು ರಕ್ಷಿಸಿ, ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ತಾಲೂಕು ಆಡಳಿತವೂ ಸಹ ಗಮನಹರಿಸಿ ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X