ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರ ಭಾರತ್ ಬಂದ್

By Mrutyunjaya Kalmat
|
Google Oneindia Kannada News

BJP logo
ಬೆಂಗಳೂರು, ಜು. 4 : ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸೋಮವಾರ ನಡೆಯಲಿರುವ ಭಾರತ್ ಬಂದ್ ಗೆ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಹೊರತುಪಡಿಸಿ ಎಲ್ಲಾ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

ಶಾಲಾ ಕಾಲೇಜು ರಜೆ ?

ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ರಜೆಗೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವಂತೆ ಆಯಾ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಕಠಿಣ ಕ್ರಮ : ಶಂಕರ ಬಿದರಿ

ಸೋಮವಾರ ನಡೆಯಲಿರುವ ಭಾರತ್ ಬಂದ್ ಗೆ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಬಂದ್ ಹೆಸರಿನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ಗಲಾಟೆ ನಡೆಸುವ ಮೂಲಕ ಹಿಂಸೆಗೆ ಪ್ರಚೋದನೆ ನೀಡುವುದು ಸೇರಿದಂತೆ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಎಚ್ಚರಿಕೆ ನೀಡಿದ್ದಾರೆ.

ವ್ಯಕ್ತಿಯಾಗಲಿ, ಸಂಘ ಸಂಸ್ಥೆಗಳಾಗಲಿ, ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಲಿ ಬಲವಂತವಾಗಿ ಕಂಪನಿಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದು ಕೂಡಾ ಅಪರಾಧವಾಗಿದೆ. ಇಂತಹ ಪ್ರಕರಣಗಳಿಗೆ ಆಸ್ಪದವಿಲ್ಲ. ಯಾವುದೇ ಕಂಪನಿಗಳು ಕಾರ್ಯನಿರ್ವಹಿಸಲು ಸಿದ್ಧವಿರುತ್ತವೆಯೋ ಅಂತಹ ಕಂಪನಿಗಳಿಗೆ ಸೂಕ್ತ ಭದ್ರತೆಯನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದು ಬಿದರಿ ಭರವಸೆ ನೀಡಿದರು. ಆದರೆ, ಉದ್ಯೋಗಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕೆಲ ಕಂಪನಿಗಳು ಈಗಾಗಲೇ ಸೋಮವಾರ ಕೆಲಸಕ್ಕೆ ರಜೆ ಘೋಷಣೆ ಮಾಡಿವೆ.

ಬಸ್ ಸಂಚಾರ ಅಬಾಧಿತ?

ಭಾರತ್ ಬಂದ್ ಹಿನ್ನೆಲೆಯಲ್ಲಿ ವೋಲ್ವೋ ಬಸ್ ಸಂಚಾರ ಹೊರತುಪಡಿಸಿ ಬಿಎಂಟಿಸಿಯ ಎಲ್ಲ ಬಸ್ ಗಳು ಯಥಾ ಪ್ರಕಾರ ಸಂಚರಿಸುತ್ತವೆ ಎಂದು ಬಿಎಂಟಿಸಿ ಆಯುಕ್ತ ಜಮೀರ್ ಪಾಷಾ ಸ್ಪಷ್ಟಪಡಿಸಿದ್ದಾರೆ. ಆದರೆ, ಇದು ಸದ್ಯದ ತೀರ್ಮಾನವಾಗಿದ್ದು, ಸೋಮವಾರ ಬೆಳಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಹಾಲು, ಆಸ್ಪತ್ರೆ ಓಕೆ, ಆಟೋ ಇಲ್ಲ

ಹಾಲಿನ ಪೂರೈಕೆಗೆ ಯಾವುದೇ ಅಡಚಣೆ ಮಾಡುವುದಿಲ್ಲ. ಆಸ್ಪತ್ರೆಗೆ ಹೋಗುವ ಯಾವುದೇ ವಾಹನಗಳಿಗೂ ತೊಂದರೆ ಮಾಡುವುದಿಲ್ಲ ಎಂದು ಬಂದ್ ಸಂಘಟಕರು ಹೇಳಿದ್ದಾರೆ. ಬಂದ್ ಗೆ ಆಟೋ ಚಾಲಕರ ಸಂಘಗಳು ಬೆಂಬಲ ಘೋಷಿಸಿವೆ. ಎಲ್ಲ ಆಟೋ ಚಾಲಕರು ಬಂದ್ ನಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಮೀನಾಕ್ಷಿ ಸುಂದರಂ ಹಾಗೂ ಪ್ರಧಾನ ಕಾರ್ಯದರ್ಶಿ ಬಿಎ ರಾಘವೇಂದ್ರ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 2-3 ಆಟೋ ಸಂಘಗಳು ಅಸ್ತಿತ್ವದಲ್ಲಿದ್ದು, ಬಹುತೇಕ ಆಟೋದವರು ಬಂದ್ ನಲ್ಲಿ ಸಕ್ರಿಯವಾಗಲಿದ್ದಾರೆ. ಬಂದ್ ಗೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ ಚನ್ನಾರೆಡ್ಡಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಸೀಮೆ ಎಣ್ಣೆ ಬೆಲೆ ಏರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ, ಎಡಪಕ್ಷಗಳು, ಜನತಾದಳದ ವಿವಿಧ ಬಣಗಳು, ತೆಲುಗುದೇಶಂ, ಎಐಎಡಿಎಂಕೆ, ಮುಂತಾದ ವಿರೋಧ ಪಕ್ಷಗಳು ಬಂದ್ ಗೆ ಕರೆ ನೀಡಿವೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ ಸರಕಾರಿ ಪ್ರೇರಿತ ಬಂದ್ ಆಗುವ ಸಾಧ್ಯತೆಯಿದ್ದು, ಬಂದ್ ಬಿಸಿಗೆ ಜನಸಾಮಾನ್ಯರು ತತ್ತರಿಸುವ ಲಕ್ಷಣಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X