ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಹುಲಿ ಉರುಗ್ವೆಗೆ ಕೊರಿಯಾ ಸವಾಲ್

By Mahesh
|
Google Oneindia Kannada News

ಪೋರ್ಟ್ ಎಲಿಜಬೆತ್ , ಜೂ. 26 : ಫೀಫಾ ವಿಶ್ವಕಪ್ 2010ನಲ್ಲಿ ಲೀಗ್ ಪಂದ್ಯ ಮುಗಿದು, ನಾಕೌಟ್ ಹಂತ ಆರಂಭವಾಗಲಿದ್ದು, ರೋಚಕ ಹಣಾಹಣಿಗೆ ಮೈದಾನಗಳು ಸಜ್ಜಾಗಿವೆ. ಎ ಗುಂಪಿನ ಅಗ್ರಸ್ಥಾನ ಪಡೆದ ಹಳೆ ಹುಲಿ ಉರುಗ್ವೆ, ಏಷ್ಯನ್ ಟೈಗರ್ಸ್ ದಕ್ಷಿಣ ಕೊರಿಯಾವನ್ನು ಇಂದು ಪೋರ್ಟ್ ಎಲಿಜಬೆತ್ ನಲ್ಲಿ ಎದುರಿಸಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಇಎಸ್ ಪಿಎನ್/ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಪಂದ್ಯ ಪ್ರಸಾರವಾಗಲಿದೆ.

16ರ ಹಂತಕ್ಕೆ ಬಂದ ಬಗೆ: ಲೀಗ್ ಹಂತದಲ್ಲಿ ಉರುಗ್ವೆ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಮೆಕ್ಸಿಕೋವನ್ನು ಮಣಿಸಿ, ಫ್ರಾನ್ಸ್ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು, ಉತ್ತಮ ಲಯದಲ್ಲಿದೆ. ಕೊರಿಯಾ ತಂಡ ಗ್ರೀಸ್ ವಿರುದ್ಧ ಗೆದ್ದು, ನೈಜಿರಿಯಾ ವಿರುದ್ಧ ಡ್ರಾ ಸಾಧಿಸಿಕೊಂಡು, ಅರ್ಜೆಂಟಿನಾ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು.

1930 ಮತ್ತು 1950ರಲ್ಲಿ ಚಾಂಪಿಯನ್ ಆಗಿದ್ದ ಉರುಗ್ವೆ 1990ರ ಬಳಿಕ ಇದೇ ಮೊದಲ ಬಾರಿಗೆ ದ್ವಿತೀಯ ಸುತ್ತು ಪ್ರವೇಶ ಮಾಡಿದೆ. 2002ರ ವಿಶ್ವಕಪ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದಕ್ಷಿಣ ಕೊರಿಯಾ ಉತ್ತಮ ಹೋರಾಟ ನೀಡುವುದಂತೂ ಖಂಡಿತ.

ಬಲಾಬಲ:
ಉರುಗ್ವೆ ಸಹಜವಾಗಿ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಲೀಗ್ ಹಂತದಲ್ಲಿ ಎದುರಾಳಿಗೆ ಗೋಲು ಹೊಡೆಯುವ ಅವಕಾಶವನ್ನು ನೀಡಿಲ್ಲ. ದಕ್ಷಿಣ ಕೊರಿಯಾ ಉತ್ತಮ ಮುಂಪಡೆ ಆಟಗಾರರನ್ನು ಹೊಂದಿದ್ದರೂ, ರಕ್ಷಣೆಯ ವಿಷಯದಲ್ಲಿ ಸ್ವಲ್ಪ ದುರ್ಬಲ. ಉರುಗ್ವೆ ಹಾಗೂ ಕೊರಿಯಾ ಎಂದಿನಂತೆ ಆಕ್ರಮಣಿಕಾರಿ ಆಟಕ್ಕೆ ಮುಂದಾಗುವ ಸಾಧ್ಯತೆಯಿದ್ದು, ಏಷ್ಯನ್ ಟೈಗರ್ಸ್ ರಕ್ಷಣಾ ಪಡೆಯನ್ನು ಉತ್ತಮ ಪಡಿಸದಿದ್ದರೆ, ಸೋಲು ಕಟ್ಟಿಟ್ಟ ಬುತ್ತಿ.

ಪ್ರಮುಖ ಆಟಗಾರರು : ಉರುಗ್ವೆಯ ಡಿಯಾಗೋ ಫೋರ್ಲಾನ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಕೊರಿಯಾವನ್ನು ಕಾಡುವುದು ಗ್ಯಾರಂಟಿ. ಫೋರ್ಲಾನ್ ಗೆ ಸೋರೆಜ್ ಬೆಂಬಲವಿದೆ. ಪಾರ್ಕ್ ಜಿ ಸುಂಗ್ ಆಟದ ಮೇಲೆ ಕೊರಿಯಾ ಅವಲಂಬಿತವಾಗಿದ್ದು, ಮಿಡ್ ಫೀಲ್ಡರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚು ಯಂಗ್ ಸೇರಿದಂತೆ ಮುಂಪಡೆ ಆಟಗಾರರು ಇನ್ನಷ್ಟು ನಿಖರವಾದ ಆಟ ಆಡುವ ಅಗತ್ಯವಿದೆ.

ಗೆಲ್ಲುವ ತಂಡ: ಉರುಗ್ವೆ ಗೆಲ್ಲುವ ನೆಚ್ಚಿನ ತಂಡವಾದರೂ, ಕೊರಿಯಾವನ್ನು ಕಡೆಗಣಿಸುವಂತಿಲ್ಲ. ಉರುಗ್ವೆಯ ಮುಂಪಡೆ ಆಟಗಾರರನ್ನು ಕಟ್ಟಿಹಾಕಿದರೆ ಕೊರಿಯಾ ಅರ್ಧ ಪಂದ್ಯವನ್ನು ಗೆದ್ದಂತೆ. ಬೆಟ್ಟಿಂಗ್ ಬಾಸ್ ಗಳ ಊಹೆಯಂತೆ ಉರುಗ್ವೆ 2-0 ಅಂತರದಲ್ಲಿ ಗೆಲ್ಲುವ ಸಾಧ್ಯತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X