ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಟೀಕೆಗೆ ಯಡಿಯೂರಪ್ಪ ಜಾರಿಕೆ ಉತ್ತರ

By Prasad
|
Google Oneindia Kannada News

BS Yeddyurappa
ಬೆಂಗಳೂರು, ಜೂ. 24 : "ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ರಾಜೀನಾಮೆಯಿಂದ ನನಗೂ ನೋವಾಗಿದೆ. ಇದು ಅನಿರೀಕ್ಷಿತ, ದುರಾದೃಷ್ಟಕರ ಬೆಳವಣಿಗೆ. ಅವರ ಅಧಿಕಾರ ಮೊಟಕುಗೊಳಿಸಲು ಯತ್ನಿಸಿಲ್ಲ. ನಮ್ಮ ಬಾಂಧವ್ಯ ಉತ್ತಮವಾಗಿಯೇ ಇದೆ. ಅವರು ಹಿರಿಯರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು. ಅವರ ನಿರ್ಣಯವನ್ನು ಗೌರವಿಸುತ್ತೇನೆ, ರಾಜೀನಾಮೆ ತಿರಸ್ಕರಿಸಿ ಅವರನ್ನು ಮುಜುಗರಕ್ಕೆ ದೂಡಲು ಸಿದ್ಧನಿಲ್ಲ."

ಇವು ಬಿಜೆಪಿ ಸರಕಾರದ ಕಾರ್ಯವೈಖರಿಯಿಂದ, ಅಸಹಾರದಿಂದ ಬೇಸತ್ತು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ರಾಜೀನಾಮೆ ನೀಡಿದ ಮರುದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ. ಸಂತೋಷ್ ಹೆಗ್ಡೆ ಅವರ ಟೀಕೆಗಲಿಗೆ ಪ್ರತಿಯಾಗಿ, ಲೋಕಾಯುಕ್ತರೊಂದಿಗೆ ತಮ್ಮ ಸರಕಾರ ನಡೆದುಕೊಂಡಿರುವ ರೀತಿಯನ್ನು ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಲೋಕಾಯುಕ್ತರನ್ನು ಉಳಿಸಿಕೊಳ್ಳಬೇಕೆಂದು ರಾಜ್ಯಾದ್ಯಾಂತ ಎದ್ದಿರುವ ಕೂಗಿಗೆ ಯಡಿಯೂರಪ್ಪ ಹಿತ್ತಾಳೆ ಕಿವಿಯಾಗಿದ್ದಾರೆ.

ಯಡಿಯೂರಪ್ಪನವರ ಸರಕಾರ ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ಬೆಂಗಳೂರು ವರದಿಗಾರ ಕೂಟ ಮತ್ತು ಬೆಂಗಳೂರಿನ ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು.

ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳಿಗಿಂತ ಹೆಚ್ಚಾಗಿ ವಿರೋಧ ಪಕ್ಷಗಳ ಕಾರ್ಯವೈಖರಿಯನ್ನು ಟೀಕಿಸುವುದರಲ್ಲೇ ಹೆಚ್ಚಿನ ಸಮಯ ವ್ಯಯಮಾಡಿದರು. ಪ್ರತಿಪಕ್ಷಗಳು ಪ್ರತಿಪಕ್ಷಗಳಂತೆ ಕರ್ತವ್ಯ ನಿರ್ವಹಿಸುತ್ತಿಲ್ಲ. ನಮ್ಮನ್ನು ಎಚ್ಚರಿಸುವಂಥ ಕಾರ್ಯ ಮಾಡುತ್ತಿರುವ ಮಾಧ್ಯಮದವರನ್ನು ಅಭಿನಂದಿಸುತ್ತೇನೆ. ವಿರೋಧ ಪಕ್ಷಗಳ ಎಲ್ಲ ಟೀಕೆಗಳಿಗೆ, ಪ್ರಶ್ನೆಗಳಿಗೆ ವಿಧಾನಮಂಡಲದಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಜನರ ಆಶೀರ್ವಾದ, ಮಾಧ್ಯಮಗಳ ಸಹಕಾರ, ದೇವರ ದಯೆಯಿಂದ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ್ದೇವೆ. ಪುಣ್ಯಕೋಟಿಯ ನಾಡಿನಲ್ಲಿ ನ್ಯಾಯ ಕೊಡಿ ಅಂತ ಹೋದಾಗ, ನಿರೀಕ್ಷೆಯೇ ಮಾಡಿರಲಿಲ್ಲ, ಜನ ಅಧಿಕಾರ ಕೊಟ್ಟರು. ಹಣಕಾಸಿನ ಇತಿಮಿತಿಯಲ್ಲಿ ಸರ್ವತೋಮುಖ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಮುಂದಿನ ಮೂರು ವರ್ಷ ಕೂಡ ಯಶಸ್ವಿಯಾಗಿ ಪೂರೈಸುತ್ತೇನೆ. ವಿರೋಧಿ ಪಕ್ಷಗಳಿಗೆ ಕೇಳುವುದೇನೆಂದರೆ, ಅನಗತ್ಯ ಗೊಂದಲಗಳನ್ನು ಸೃಷ್ಟಿಸಬಾರದು. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಬೇಕು ಎಂದು ಕೇಳಿಕೊಂಡರು.

ರೈತನ ಮಗನಾದ ನಾನು ಜನ ಮೆಚ್ಚುವಂತೆ ಕೆಲಸ ಮಾಡುತ್ತೇನೆ. ಜನರ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ. ಮುಂದಿನ ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಗೆ, ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡುತ್ತೇನೆ. ನೆರೆ ಸಂತ್ರಸ್ತರನ್ನು ನೆನೆಸಿಕೊಂಡರೆ ಈಗಲೂ ಕಣ್ಣೀರು ಬರುತ್ತದೆ. ಐದು ಸಾವಿರ ಕೋಟಿ ರು.ಯನ್ನು ಜನತೆ ಸಂಗ್ರಹಿಸಿ ಕೊಟ್ಟರು. ಆದರೆ, ವಿರೋಧ ಪಕ್ಷಗಳು ಟೀಕಿಸುತ್ತ ಕುಳಿತವೇ ಹೊರತು, ಮನೆ ಕಟ್ಟುವ ಬಗ್ಗೆ, ಜನರನ್ನು ಸ್ಥಳಾಂತರಿಸುವ ಬಗ್ಗೆ, ಶಾಶ್ವತ ಪರಿಹಾರ ದೊರಕಿಸುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಹರಿಹಾಯ್ದರು.

ಸರಕಾರದ ಸಾಧನೆ, ವಿರೋಧಿಗಳ ಬಗ್ಗೆ ಮಾತಾಡಿದ ನಂತರ, ನಿರೀಕ್ಷೆಯಂತೆ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಬಗ್ಗೆ ಮಾತನಾಡಿದರು. ಹೆಗ್ಡೆಯವರು ಮಾಡಿರುವ ಟೀಕೆಗಳ ಬಗ್ಗೆ ಸಮರ್ಥನೆ ನೀಡಲು ನಿರಾಕರಿಸಿದ ಅವರು, ಉಪಲೋಕಾಯುಕ್ತರನ್ನು ನೇಮಿಸಲಾಗುವುದು, ಮರಮಾಧಿಕಾರ ನೀಡುವ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿ ಜಾರಿಕೊಂಡರು. ಹಿಂದಿನ ಸರಕಾರಗಳು ಕೂಡ ಪರಮಾಧಿಕಾರ ನೀಡುವ ಬಗ್ಗೆ ಚಿಂತಿಸಲಿಲ್ಲ ಎಂದು ಹೇಳಿ, ಪರಮಾಧಿಕಾರ ನೀಡದಿರುವ ಹೊಣೆಗಾರಿಕೆಯನ್ನು ವಿರೋಧಿ ಪಕ್ಷಗಳ ಮೇಲೆಯೇ ಹೇರಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X