ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಗಡಿಹಳ್ಳಿಯಲ್ಲಿ ಸೆರೆಸಿಕ್ಕ ಪುಂಡ ಕಾಡಾನೆ

By * ಅರಕಲಗೂಡು ಜಯಕುಮಾರ್
|
Google Oneindia Kannada News

Wild elephant captured in Magadihalli, Hassan
ಹಾಸನ, ಜೂ. 14 : ಜಿಲ್ಲೆಯ ಆಲೂರು ತಾಲೂಕು ಮಾಗಡಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ 2ನೇ ಕಾಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಶುಕ್ರವಾರ ಸಂಜೆ 4.30ರ ಸುಮಾರಿಗೆ ಭಾರತಿ ಎಸ್ಟೇಟ್ ಬಳಿ ಮೂರು ಆನೆಗಳು ಜತೆಗೂಡಿ ನಿಂತಿದ್ದನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ತಂಡ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆಗೆ ಮುಮದಾಯಿತು.

4.40ರ ಸುಮಾರಿಗೆ ಆನೆಗೆ ಅರಿವಳಿಕೆ ತುಂಬಿದ್ದ ಚುಚ್ಚುಮದ್ದನ್ನು ಬಂದೂಕು ಮೂಲಕ ಹಾರಿಸುವಲ್ಲಿ ಅರಣ್ಯ ಸಿಬ್ಬಂದಿ ವೆಂಕಟೇಶ್ ಯಶಸ್ವಿಯಾದರು. ಅರಿವಳಿಕೆ ಚುಚ್ಚುಮದ್ದು ಹಾಕುತ್ತಿದ್ದಂತೆ 1/2ಕಿಮೀ ಓಡಿದ 22 ವರ್ಷ 9 ಅಡಿ ಎತ್ತರವಿರುವ ಪುಂಡಾನೆ, ಬಳಿಕ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿಯಿತು. ತಕ್ಷಣವೇ ಅಲ್ಲಿಗೆ ಸಾಕಾನೆಗಳ ಜೊತೆಗೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು. ಪುಂಡಾನೆ ಕಾಲು ಮತ್ತು ಕೊರಳಿಗೆ ಸೆಣಬಿನ ಹಗ್ಗ ಮತ್ತು ಸರಪಳಿಯನ್ನು ಬಿಗಿಯಲಾಯಿತು. ಕಾಡಾನೆ ಸುತ್ತುವರಿದಿದ್ದ ಸಾಕಾನೆಗಳು ಸ್ವಲ್ಪ ಹೊತ್ತಿನ ಬಳಿಕ ಪುಂಡಾನೆಯನ್ನು ಮೇಲೆಬ್ಬಿಸುವಲ್ಲಿ ಯಶಸ್ವಿಯಾದವು.

ರೇಡಿಯೋ ಕಾಲರ್: ಕಳೆದ 2 ವಾರದಿಂದ ನಡೆಯುತ್ತಿರುವ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ 2ನೇ ಪುಂಡಾನೆ ಇದಾಗಿದೆ. ಮೊದಲ ಆನೆಯನ್ನು ಕಳೆದ ವಾರ ಕರಡಿ ಬೆಟ್ಟದ ಬಳಿ ಸೆರೆ ಹಿಡಿಯಲಾಗಿತ್ತು. ಈಗ ಸೆರೆ ಸಿಕ್ಕ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಉಪ ಅರಣ್ಯ ಅಧಿಕಾರಿ ಅಂಬಾಡಿ ಮಾದವ್ ತಿಳಿಸಿದ್ದಾರೆ.

ಮಿತಿಮೀರಿದ ಆನೆ ಉಪಟಳ :
ಹಾಸನ ಜಿಲ್ಲೆಯ ಅರಕಲಗೂಡು-ಆಲೂರು-ಸಕಲೇಶಪುರ ತಾಲೂಕಿನ ರೈತರಿಗೆ ಆನೆಗಳ ಕಾಟ ದಶಕಗಳಿಂದ ತಪ್ಪಿದ್ದಲ್ಲ. ಪಶ್ಚಿಮ ಘಟ್ಟದ ಸಾಲಿನಲ್ಲಿ ಬರುವ ಈ ತಾಲೂಕುಗಳ ಸನಿಹವಿರುವ ದೊಡ್ಡಬೆಟ್ಟ, ಕರಡಿಬೆಟ್ಟ, ಬೈಸೂರು ಅರಣ್ಯ, ಬಾಣಾವರ ಅರಣ್ಯಗಳಿಂದ ಸಾಗಿಬರುವ ಆನೆಗಳು ರೈತರ ಜಮೀನು, ತೋಟಗಳಷ್ಟೇ ಅಲ್ಲ ಜನವಸತಿ ಪ್ರದೇಶದ ಮೇಲೂ ದಾಳಿ ನಡೆಸುತ್ತ ನಿರಾತಂಕವಾಗಿ ಅಡ್ಡಾಡಿಕೊಂಡಿವೆ.

ಕಳೆದ 5 ವರ್ಷಗಳಲ್ಲಿ ಆನೆ ತುಳಿತಕ್ಕೆ ಸಿಲುಕಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು ಆನೆಗಳು ಸಹಾ ರೈತರು ಬೇಲಿಗಳಲ್ಲಿ ಹರಿಸುವ ವಿದ್ಯುತ್ ಗೆ ಸಿಲುಕಿ ಪ್ರಾಣ ಕಳೆದುಕೊಂಡಿವೆ. ಆನೆಗಳ ಉಪಟಳವನ್ನು ತಡೆಯಲು ಅರಣ್ಯ ಕಾವಲುಗಾರರ ಜೊತೆಗೆ ಸ್ಥಳೀಯರ ತಂಡವನ್ನು ರಚಿಸುವುದು, ದಡಾಕಿಗಳನ್ನು ಹಾರಿಸುವುದು, ಚಂಡೆ ವಾದ್ಯಗಳನ್ನು ಮೊಳಗಿಸುವುದು ಅರಣ್ಯದ ಲಕ್ಷ್ಮಣರೇಖೆಯಲ್ಲಿ ದೊಡ್ಡ ಕಂದಕಗಳನ್ನು ತೋಡಿಸುವ ಕ್ರಿಯೆ ಜಾರಿಯಲ್ಲಿದೆ. ಸಿಬ್ಬಂದಿ ಕೊರತೆ ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಹಲವು ದಶಕಗಳಿಂದ ಆನೆ ಓಡಿಸುವ ನಾಟಕ ಚಾಲ್ತಿಯಲ್ಲಿದೆ.

ಈ ಭಾಗದಲ್ಲಿ ನಡೆಯುವ ಕಳ್ಳಭಟ್ಟಿ ದಂಧೆಯ ರುಚಿ ಹಿಡಿದಿದ್ದ ಕಾಡಾನೆಗಳು ಕಳ್ಳಭಟ್ಟಿ ಕುಡಿದು ಗಲಾಟೆ ಮಾಡಿದ ಘಟನೆಗಳು ಹಸಿರಾಗಿವೆ. ಈಗೀಗ ಆನೆಗಳ ಉಪಟಳದಿಂದ ಕಳ್ಳಭಟ್ಟಿಕೋರರು ಸಹ ಭಟ್ಟಿ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಅಷ್ಟರ ಮಟ್ಟಿಗೆ ಜನರು ನೆಮ್ಮದಿ ಪಡುವಂತಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X