ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಮಳೆಯಾದರೆ ಸುದ್ದಿಯಾಗುವುದಿಲ್ಲ!

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Kodagu set to embrase monsoon
ಮಡಿಕೇರಿ, ಜೂ.12: ಮುಂಗಾರು ಮಳೆರಾಯ ಜೂನ್ 11 ರ ಶುಕ್ರವಾರ ಕಾವೇರಿಯ ತವರು ಮನೆ ಕೊಡಗಿಗೆ ಕಾಲಿಟ್ಟ. ನಿನ್ನೆಯಿಂದ ಮೋಡಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಪ್ರಾರಂಭವಾಗಿದೆ. ಇದು ಮುಂಗಾರು ಮಳೆಯ ಆರಂಭದ ಸೂಚನೆಯೇ. ಹೀಗಾಗಿ ಜನರು ಮಳೆಗಾಲಕ್ಕೆ ಅಗತ್ಯವಿರುವ ಕೊಡೆ, ಗಂಬೂಟ್, ಪ್ಲಾಸ್ಟಿಕ್ ಹ್ಯಾಟ್ ಮುಂತಾದ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.

ಇಷ್ಟರಲ್ಲಿಯೇ ಮಳೆ ಆರಂಭವಾಗಬೇಕಿತ್ತಾದರೂ ಇದೀಗ ತಡವಾಗಿ ಪ್ರಾರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕೃಷಿಕರು ಭತ್ತದ ಕೃಷಿಗೆ ಒತ್ತುಕೊಟ್ಟು ಗದ್ದೆ ಉಳುಮೆ, ಗೊಬ್ಬರ ಹಾಕುವುದು ಹೀಗೆ ವಿವಿಧ ಕೆಲಸಗಳಲ್ಲಿ ನಿರತರಾಗಿರುವ ದೃಶ್ಯ ಜಿಲ್ಲೆಯಾದ್ಯಂತ ಇರುವ ಗದ್ದೆ ಬಯಲುಗಳಲ್ಲಿ ಕಂಡು ಬರುತ್ತದೆ.

ಮಳೆ ಬೀಳುತ್ತಿದ್ದಂತೆಯೇ ಇಲ್ಲಿನ ಕೃಷಿಕರಿಗೆ ಬಿಡುವಿಲ್ಲದ ದುಡಿಮೆ. ಕಾಫಿ ತೋಟಕ್ಕೆ ಗೊಬ್ಬರ ಹಾಕುವುದು, ಮರ ಕಪಾತ್ ಮುಂತಾದ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ಡಿಮ್ಯಾಂಡೋ ಡಿಮ್ಯಾಂಡಾಗಿದೆ. ಈಗಿನ ಕಾಲದಲ್ಲಿ ಎಂಥ ಕೆಲಸಕ್ಕೂ ಜನ ಸಿಗುತ್ತಾರೆ. ಆದರೆ, ಉಳುವುದಕ್ಕೆ, ಮರ ಹತ್ತಿ ಕಾಯಿ ಕೀಳುವುದಕ್ಕೆ, ಕಾಳು ಕಡಿ ಒಟ್ಟುಮಾಡುವುದಕ್ಕೆ ಕೂಲಿಕಾರರು ಸಿಗುವುದಿಲ್ಲ. ಅವರಿಗಿರುವಷ್ಟು ಬೇಡಿಕೆ ನಿಮಗೂ ಇಲ್ಲ, ನಮಗೂ ಇಲ್ಲ.

ಮತ್ತೊಂದೆಡೆ ಭಾಗಮಂಡಲ, ಬಲಮುರಿ, ನೆಲ್ಯಹುದಿಕೇರಿ ಮುಂತಾದ ನದಿ ತೀರದ ಪ್ರದೇಶಗಳಲ್ಲಿ ವಾಸವಿರುವ ಜನರಲ್ಲಿ ಆತಂಕ ಪ್ರಾರಂಭವಾಗಿದೆ. ಏಕೆಂದರೆ ಮಳೆಗೆ ನೆರೆ ಬಂದರೆ ಈ ಪ್ರದೇಶಗಳು ಮುಳುಗಡೆಯಾಗುತ್ತವೆ. ಆಗ ತಾವು ಕಷ್ಟಪಟ್ಟು ದುಡಿದುದೆಲ್ಲವನ್ನೂ ಬಿಟ್ಟು ಗಂಜಿ ಕೇಂದ್ರ ಸೇರಬೇಕಾಗುತ್ತದೆ. ಹೀಗಾಗಿ ತಮ್ಮ ಬದುಕು ನೀರು ಪಾಲಾಗುತ್ತದೆಯಲ್ಲ ಎಂಬ ಭೀತಿ ಇಲ್ಲಿನವರದ್ದಾಗಿದೆ.

ಇನ್ನು ತಲಕಾವೇರಿ, ಭಾಗಮಂಡಲ ಸೇರಿದಂತೆ ಕೆಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡು ದ್ವೀಪಗಳಾಗಿಬಿಡುತ್ತವೆ ಇಂತಹ ಪ್ರದೇಶಗಳ ಜನ ಇದೀಗ ಮಳೆಗಾಲಕ್ಕೆ ಬೇಕಾದ ಸಾಮಾನು, ಸರಂಜಾಮುಗಳನ್ನು ಶೇಖರಿಸುವಲ್ಲಿ ತೊಡಗಿದ್ದಾರೆ.ಮಳೆಗಾಲದಲ್ಲಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳುವುದರಿಂದ ವಾರಾನುಗಟ್ಟಲೆ ವಿದ್ಯುತ್, ದೂರವಾಣಿ ಸಂಪರ್ಕವಿಲ್ಲದೆ ದಿನಕಳೆಯ ಬೇಕಾದ ದುಸ್ಥಿತಿ ಇಲ್ಲಿನವರದ್ದಾಗಿದೆ. ಒಟ್ಟಾರೆ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವೂ ಇದೆ. ಆದರೆ ಅದ್ಯಾವುದಕ್ಕೂ ಜಗ್ಗದೆ ಜಡಿ ಮಳೆಗೆ ಮೈಯೊಡ್ಡಿ ನಿಲ್ಲುವುದು ನಮಗೆಲ್ಲ ಅಭ್ಯಾಸವಾಗಿ ಹೋಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X