ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಕೂಡಾ ವಿಶ್ವಕಪ್ ನಲ್ಲಿ ಆಡಲು ಸಾಧ್ಯ

By *ಮಹೇಶ್ ಮಲ್ನಾಡ್
|
Google Oneindia Kannada News

"ವಿಶ್ವಕಪ್ ನಡೆಯುವ ದೇಶಕ್ಕೆ ಮಾತ್ರ ಅರ್ಹತಾ ಸುತ್ತಿನ ರಗಳೆ ಇರುವುದಿಲ್ಲ. ನೇರವಾಗಿ ತಮ್ಮ ಗುಂಪಿನ ಎದುರಾಳಿಗಳೊಡನೆ ಕಾದಾಡಬಹುದು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ನಿಯಮ ವಿಶ್ವಕಪ್ ಆತಿಥ್ಯವಹಿಸುವ ತಂಡಕ್ಕೆ ಮಾತ್ರ ಮೀಸಲು. ಹಾಲಿ ವಿಶ್ವಕಪ್ ಚಾಂಪಿಯನ್ ತಂಡ ಕೂಡ ಅರ್ಹತಾ ಸುತ್ತಿನಲ್ಲಿ ಸೆಣಸಿ ಮುಂದಿನ ಹಂತ ತಲುಪಬೇಕು. 2006ರ ಚಾಂಪಿಯನ್ ಇಟಲಿ ಕೂಡ ಅರ್ಹತಾ ಸುತ್ತಿನಲ್ಲಿ ಪಾಸ್ ಆಗಿ ಮುಂದಿನ ಹಂತಕ್ಕೆ ಬಂದಿದೆ.".

ಇನ್ನೇನು ವಿಶ್ವಕಪ್ ಆರಂಭವಾಗುತ್ತಿದೆ ಆದರೆ, ಫೀಫಾ ವಿಶ್ವಕಪ್ ನಲ್ಲಿ ಭಾರತ ಯಾಕಿಲ್ಲ. ಅರ್ಹತೆ ಗಳಿಸುವುದು ಅಷ್ಟು ಕಷ್ಟವೇ? ಹಾಗಾದರೆ, ಭಾರತಕ್ಕೆ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಿಲ್ಲವೇ?

ಅರ್ಹತಾ ಸುತ್ತಿನ ಬೃಹತ್ಕಥೆ: ಅಫ್ರಿಕ, ಏಷ್ಯಾ, ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್, ದಕ್ಷಿಣ ಅಮೆರಿಕ, ಓಷಾನಿಯ ಮತ್ತು ಯುರೋಪ್ ರಾಷ್ಟ್ರಗಳು ಹೀಗೆ ವಿವಿಧ ಗುಂಪಿಗೆ ಸೇರಿದ ನೂರಿನ್ನೂರು ದೇಶಗಳು ಫೀಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಾದಾಡುತ್ತವೆ. ಎರಡು ಮೂರು ವರುಷಗಳ ಕಾಲ ನಡೆಯುವ ಈ ಸುತ್ತಿನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವುದೇ ಮಹಾನ್ ಗಾಥೆ.

ಸಿಕ್ಕ ಅವಕಾಶ ಒದ್ದ ಭಾರತ: ಭಾರತದ ಫುಟ್ಬಾಲ್ ತಂಡ ಅರ್ಹತಾ ಸುತ್ತಿನಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಿಕೊಳ್ಳುವುದು ದೂರದ ಮಾತು. ಆದರೆ, ಹಿಂದೊಮ್ಮೆ ಭಾರತಕ್ಕೆ ವಿಶ್ವಕಪ್ ಪುಟ್ಬಾಲ್ ನಲ್ಲಿ ಆಡುವ ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ, ಅದನ್ನು ಬರಿಗಾಲಲ್ಲಿ ಒದ್ದು, ಇಲ್ಲೇ ಗಲ್ಲಿ ಗಲ್ಲಿಗಳಲ್ಲಿ, ಬೀಚ್ ಮರಳ ಮೇಲೆ ಕಾಲ್ಚೆಂಡು ಆಡುತ್ತಾ ಕಾಲ ಕಳೆದದ್ದು ಇತಿಹಾಸ.

1942 ಹಾಗೂ 1946 ರಲ್ಲಿ ಎರಡನೇ ವಿಶ್ವ ಸಮರದ ಕಾರಣದಿಂದ ವಿಶ್ವಕಪ್ ಪಂದ್ಯಾವಳಿ ನಡೆಯಲಿಲ್ಲ. 1950 ರ ವಿಶ್ವಕಪ್ ಬ್ರೆಜಿಲ್ ನಲ್ಲಿ ನಡೆಸಲಾಯಿತು. ಬ್ರಿಟಿಷ್ ಸಾಮ್ರಾಜ್ಯ ಆಳ್ವಿಕೆಗೆ ಒಳಪಟ್ಟ ದೇಶಗಳಿಗೆ ವಿಶ್ವಕಪ್ ನಲ್ಲಿ ಆಡಲು ಅವಕಾಶ ನೀಡಿ ಆಹ್ವಾನ ಕಳಿಸಲಾಗಿತ್ತು.

ಭಾರತಕ್ಕೆ ಸುವರ್ಣವಕಾಶ ಕಾಲಬಳಿ ಬಂದು ಬಿದ್ದಿತ್ತು. ಆದರೆ, ಅರ್ಹತಾಸುತ್ತಿನ ನಂತರ, ಬ್ರೆಜಿಲ್ ಗೆ ತೆರಳಲು ನಿರಾಕರಿಸಿದ ಆಟಗಾರರು, ಟೂರ್ನಿಯಿಂದ ಹೊರಗುಳಿದರು. ಫೀಫಾ ವಿಶ್ವಕಪ್ ನಲ್ಲಿ ಬರಿಗಾಲಿನಲ್ಲಿ ಫುಟ್ಬಾಲ್ ಆಟ ಆಡಲು ಅವಕಾಶ ನಿರಾಕರಿಸಿದ್ದು, ಶೂ ಇಲ್ಲದ ಭಾರತ ತಂಡ ಹೊರಗುಳಿಯಲು ಕಾರಣವಾಯಿತು. ಕೊನೆಗೆ ಫೈನಲ್ ನಲ್ಲಿ ಉರುಗ್ವೆ 2-1 ಅಂತರದಿಂದ ಬ್ರೆಜಿಲ್ ಅನ್ನು ಮಣಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿತು.

ಕಲ್ಕತ್ತಾದ ಬೀದಿ ಬೀದಿಗಳಲ್ಲಿ ರೇಡಿಯೋಗೆ ಕಿವಿ ಕೊಟ್ಟು ಪಂದ್ಯದ ಸುದ್ದಿ ಕೇಳಿ ಅಭಿಮಾನಿಗಳು, ಆಟಗಾರರು ತೃಪ್ತಿ ಪಟ್ಟಿದ್ದರು. ಆನಂತರ ಭಾರತಕ್ಕೆ ಅಹ್ವಾನವೂ ಸಿಗಲಿಲ್ಲ. ಭಾರತ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲೂ ಇಲ್ಲ. ಆದರೆ, ಈಗ ಮತ್ತೊಂದು ಮಾರ್ಗದಲ್ಲಿ ವಿಶ್ವಕಪ್ ನಲ್ಲಿ ಭಾರತದ ಜರ್ಸಿ ಧರಿಸಿದ ಆಟಗಾರರು ಮಿಂಚುವ ಸಾಧ್ಯತೆಯಿದೆ.

ಇಲ್ಲಿದೆ ಇನ್ನೊಂದು ಮಾರ್ಗ: ಲೇಖನದ ಮೊದಲಲ್ಲಿ ಹೇಳಿದಂತೆ ವಿಶ್ವಕಪ್ ನಡೆಯುವ ದೇಶಕ್ಕೆ ಮಾತ್ರ ಅರ್ಹತಾ ಸುತ್ತಿನ ರಗಳೆ ಇರುವುದಿಲ್ಲ. ಈ ಬಾರಿ ದಕ್ಷಿಣ ಆಫ್ರಿಕಾ ನೇರವಾಗಿ ಲೀಗ್ ಪಂದ್ಯಕ್ಕೆ ಜಿಗಿದಿದೆ. ಆದರೂ, ಈ ಬಾರಿ ಅರ್ಹತಾ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಆಡಿ ಕೊಂಚ ಅಭ್ಯಾಸ ಪಡೆಯಿತು.

ಇದೇ ನಿಯಮದಡಿ ಸಾಗಿದರೆ ಭಾರತ ಕೂಡಾ ವಿಶ್ವಕಪ್ ನಲ್ಲಿ ಆಡುವುದನ್ನು ಕಾಣಬಹುದು. ಆದರೆ, ಅದು ಅಷ್ಟು ಸುಲಭವಲ್ಲ. ವಿಶ್ವಕಪ್ ಆಯೋಜನೆಗೆ ನಡೆಯುವ ಬಿಡ್ಡಿಂಗ್ ನಲ್ಲಿ ಗೆಲ್ಲಬೇಕು. ಈಗಾಗಲೇ 2014 ಆಯೋಜನೆ ಹೊಣೆ ಬ್ರೆಜಿಲ್ ಹೊತ್ತಿದೆ. 2018 ಹಾಗೂ 2022 ರ ಬಿಡ್ಡಿಂಗ್ ಮುಗಿದಿದ್ದು, ಡಿಸೆಂಬರ್ 2010 ರ ವೇಳೆಗೆ ಆ ಎರಡು ಟೂರ್ನಿಗಳ ಅತಿಥೇಯರ ಹೆಸರುಗಳನ್ನು ಫೀಫಾ ಪ್ರಕಟಿಸಲಿದೆ.

ಹಾಗಾಗಿ 2026 ಹಾಗೂ 2030ರ ವಿಶ್ವಕಪ್ ಆಯೋಜನೆಯ ಕನಸು ಕಾಣಬಹುದು. ಇದಕ್ಕೆ ಬಿಡ್ಡಿಂಗ್ ಶುರುವಾಗಲು ಇನ್ನೂ 8 ವರ್ಷ ಬಾಕಿಯಿದೆ, ಆದ್ದರಿಂದ ನಮಗೆ ಲಭ್ಯವಿರುವ ಕಾಲಾವಕಾಶವನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಬೇಕು.

ವಿಶ್ವಕಪ್ ಆತಿಥ್ಯಕ್ಕೆ ದಾರಿಯಾವುದಯ್ಯ: ಈಗಾಗಲೆ ಭಾರತ, ಕ್ರಿಕೆಟ್ ಹಾಗೂ ಹಾಕಿ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ. ಮುಂಬರುವ ಕಾಮನ್ ವೆಲ್ತ್ ಕ್ರೀಡೆ ಆಯೋಜನೆ ಹಾಗೂ ಯಶಸ್ಸು ಪ್ರಮುಖವಾಗಬಲ್ಲದು. 2019 ರಲ್ಲಿ ಏಷ್ಯಾಕಪ್ ಫುಟ್ಬಾಲ್ ಆಯೋಜನೆ ಗಿಟ್ಟಿಸಿಕೊಂಡು ಅಚ್ಚುಕಟ್ಟಾಗಿ ಟೂರ್ನಿಯನ್ನು ನಡೆಸಿದರೆ ಭಾರತಕ್ಕೆ ಲಾಭವೋ ಲಾಭ.

ಇದಕ್ಕೂ ಮುನ್ನ ಸಿಕ್ಕಿರುವ ಕಾಲಾವಕಾಶದಲ್ಲಿ ಕೋಲ್ಕತ್ತಾ, ಬೆಂಗಳೂರಲ್ಲದೆ, ದೇಶದೆಲ್ಲೆಡೆ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಕ್ರೀಡಾಂಗಣ ರೂಪಿಸುವುದು, ಆಟಗಾರರಿಗೆ ಮೂಲ ಸೌಕರ್ಯ ಒದಗಿಸುವುದು, ತರಬೇತಿ ಶಿಬಿರಗಳು, ಕ್ರೀಡಾ ಇಲಾಖೆಗೆ ಕ್ರೀಡಾಂಗಣ ಅಭಿವೃದ್ಧಿಯ ಮಹತ್ವವನ್ನು ಸಾರಿ ಹೇಳುವುದು ಇವೇ ಮುಂತಾದ ಮಹತ್ಕಾರ್ಯಗಳನ್ನು ಮಾಡಿದ್ದೇ ಆದರೆ, ಫೀಫಾ ಕೂಡ ನಮ್ಮ ಕಡೆ ಕಣ್ಣು ಹಾಯಿಸಬಹುದು.

ಹೇಗೆ ಐಸಿಸಿ ತನ್ನ ಜೋಳಿಗೆ ತುಂಬಿಸಿಕೊಳ್ಳಲು ಭಾರತದ ಕ್ರಿಕೆಟ್ ಮೇಲೆ ಅವಲಂಬಿಸಿದೆಯೋ ಅದೇ ರೀತಿ ಫೀಫಾ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಭಾರತದೆಡೆಗೆ ಧಾವಿಸುವಂತೆ ಮಾಡುವುದು ನಮ್ಮ ಕೈಲಿದೆ. ಆದರೆ, ಭಾರತದಲ್ಲಿ ಕ್ರಿಕೆಟ್ ನಂತೆ ಉಳಿದ ಕ್ರೀಡೆಗಳು ಬೆಳಗಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕಾಗಬಹುದು. ಪ್ರತಿಭಾವಂತ ಆಟಗಾರರಿಗೆ ಸರ್ಕಾರದ ಜೊತೆಗೆ ಜನತೆಯ ಬೆಂಬಲದ ಅಗತ್ಯ ಕೂಡ ಇದೆ.

English summary
India's chance of entering the FIFA WC arena can become possible if India readies itself to host the game in near future. But for that India needs to be recognized as a host nation for big sporting events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X