ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾ ಕಪ್ ನಿಂದ ಯುವರಾಜ್ ಔಟ್

By Prasad
|
Google Oneindia Kannada News

Yuvraj Singh
ನವದೆಹಲಿ, ಜೂ. 7 : ಜೂನ್ 15ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿರುವ ಏಷ್ಯಾ ಕಪ್ ಟೂರ್ನಾಮೆಂಟಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಯುವರಾಜ್ ಸಿಂಗ್ ಅವರನ್ನು ಕೈಬಿಡಲಾಗಿದ್ದು, ಗಾಯಾಳುವಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಗಾಯದಿಂದ ಇನ್ನೂ ಚೇತರಿಸಿಕೊಂಡಿರದ ಸಚಿನ್ ತೆಂಡೂಲ್ಕರ್ ತಮ್ಮ ಅಲಭ್ಯತೆಯ ಬಗ್ಗೆ ಬಿಸಿಸಿಐಗೆ ಮೊದಲೇ ತಿಳಿಸಿದ್ದರಿಂದ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಯವರಾಜ್ ಜೊತೆ ಫಾರ್ಮ್ ಕಳೆದುಕೊಂಡಿರುವ ಯುಸೂಫ್ ಪಠಾಣ್, ದಿನೇಶ್ ಕಾರ್ತಿಕ್ ಮತ್ತು ಅಮಿತ್ ಮಿಶ್ರಾ ಅವರನ್ನು 15 ಆಟಗಾರರ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ.

ಗಾಯದ ಸಮಸ್ಯೆಯಿಂದ ಐಪಿಎಲ್ 3ರ ನಂತರ ತಂಡದಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ತಂಡಕ್ಕೆ ಮರಳಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ 20ರ ಹರೆಯದ ಜಾರ್ಖಂಡ್ ಬ್ಯಾಟ್ಸ್ ಮನ್ ಸೌರಭ್ ತಿವಾರಿ ಮತ್ತು ಪಶ್ಚಿಮ ಬಂಗಾಳದ ಅಶೋಕ್ ದಿಂಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಮಿತ್ ಮಿಶ್ರಾ ಸ್ಥಾನಕ್ಕೆ ಪ್ರಗ್ಯಾನ್ ಓಝಾ ಬಂದಿದ್ದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಉಳಿದಂತೆ ಬಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಪಂದ್ಯಾವಳಿಯಿಂದ ದೂರ ಉಳಿದಿದ್ದ ಜಾಹಿರ್ ಖಾನ್, ಗೌತಮ್ ಗಂಭೀರ್ ಮತ್ತು ಹರಭಜನ್ ಸಿಂಗ್ ಅವರು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಸೇರಿಕೊಂಡಿದ್ದಾರೆ. ಬಿಂಬಾಬ್ವೆಯಲ್ಲಿ ಸೋತು ಸುಣ್ಣವಾಗಿ ಬಂದ ಸುರೇಶ್ ರೈನಾ ಅವರನ್ನು ಉಳಿಸಿಕೊಳ್ಳಲಾಗಿದೆ. ಜಿಂಬಾಬ್ವೆಯಲ್ಲಿ ಭಾರತ ತಂಡ ಸೇರಿಕೊಂಡಿದ್ದ ಮಿಥುನ್ ಅಭಿಮನ್ಯು ಮತ್ತೆ ಆಯ್ಕೆದಾರರ ಅವಕೃಪೆಗೆ ಗುರಿಯಾಗಿದ್ದಾರೆ.

ಜೂನ್ 15ರಿಂದ ಜೂನ್ 24ರವರೆಗೆ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾಗವಹಿಸುತ್ತಿವೆ.

ತಂಡ ಹೀಗಿದೆ : ಮಹೇಂದ್ರ ಸಿಂಗ್ ಧೋನಿ (ಕ್ಯಾ/ವಿ.ಕೀ.), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸುರೇಶ್ ರೈನಾ, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಹರಭಜನ್ ಸಿಂಗ್, ಪ್ರಗ್ಯಾನ್ ಓಝಾ, ಜಾಹಿರ್ ಖಾನ್, ಆಶಿಶ್ ನೆಹ್ರಾ, ಪ್ರವೀಣ್ ಕುಮಾರ್, ಸೌರಭ್ ತಿವಾರಿ, ಅಶೋಕ್ ದಿಂಡಾ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X