ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದ ಸೆರೆಮನೆಯಲ್ಲಿ ಏನು ಮಾಡುತ್ತಾನೆ?

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Nithyananda in Ramnagar jail
ರಾಮನಗರ, ಜೂ. 5 : ಧ್ಯಾನ ಆಧ್ಯಾತ್ಮ ಅಂತ ಹೇಳ್ಕೊಂಡು ದೇಶ ವಿದೇಶಗಳಲ್ಲಿ ಏಸಿ ಕಾರಿನಲ್ಲಿ ಸುತ್ತಾಡುತ್ತಾ ಏಸಿ ರೂಮ್‌ನಲ್ಲೇ ಮಲಗೇಳುತ್ತಿದ್ದ ಪಲ್ಲಂಗ ಪ್ರವೀಣ ನಿತ್ಯಾನಂದ ಕಲ್ಲುಕಟ್ಟದ ಜೈಲಿನಲ್ಲಿ ಸರಳುಗಳ ಹಿಂದೆ ಬಂಧಿಯಾಗಿ ಇಂದಿಗೆ 41 ದಿನಗಳು ತುಂಬಿದವು.

ಕಾವಿ ಧರಿಸಿ ಹೈಫೈ ಬದುಕಿಗೆ ಹೊಂದಿಕೊಂಡಿದ್ದ ಕಾವಿ ಕಾಮಿ ನಿತ್ಯಾನಂದ ದೇಶ ವಿದೇಶದ ಭಕ್ತರನ್ನೆಲ್ಲ ಸೆಳೆಯಲು ಯಶಸ್ವಿಯಾಗಿದ್ದ. ಆದರೆ ನಿತ್ಯಾನಂದನ ಕಾಮಕಾಂಡ ಬೆತ್ತಲಾಗುತ್ತಿದ್ದಂತೆ ಕುಖ್ಯಾತಿಗಳಿಸಿ ರಾಮನಗರ ಜೈಲುಪಾಲಾಗಿರುವ ನಿತ್ಯಾನಂದ ಸದಾ ಹಸನ್ಮುಖಿಯಾಗಿಯೇ ಕೋರ್ಟ್‌ಗೆ ಹಾಜರಾಗುತ್ತಿದ್ದಾನೆ.

ಜಾಮೀನು ದೊರೆಯದೇ ಜೈಲಿನಲ್ಲೇ ತನ್ನ ಶಿಷ್ಯ ಭಕ್ತಾನಂದನೊಂದಿಗೆ ಬಂಧಿಯಾಗಿರುವ ನಿತ್ಯಾನಂದ ಏನು ಮಾಡ್ತಿರಬಹುದೆಂಬ ಕುತೂಹಲ ಎಲ್ಲರಿಗಿದೆ. ನಿತ್ಯಾನಂದ ಮಾತ್ರ ತಿಂಡಿಗೆ ಇಡ್ಲಿ, ಚಪಾತಿ, ಡ್ರೈಫ್ರೂಟ್ಸ್, ಕಾರ ಉಪ್ಪು, ಒಗ್ಗರಣೆ ಇಲ್ಲದ ಸಪ್ಪೆ ಊಟ ಮಾಡುತ್ತಾ, ಧ್ಯಾನ ಪೂಜೆಯ ಜತೆಗೆ ಆಧ್ಯಾತ್ಮಿಕ ಪುಸ್ತಕಗಳನ್ನ ಓದುತ್ತ ಕಾಲಕಳೆಯುತ್ತಿದ್ದಾನೆ. ಜತೆಗಾರ ಜೈಲುಹಕ್ಕಿಗಳಿಗೆ ಯೋಗ ಮತ್ತು ಧ್ಯಾನದ ಮಹತ್ವದ ಬಗೆಗೆ ಆಗಾಗ ಪ್ರವಚನ ಕೊಡುತ್ತಿರುತ್ತಾನೆ. ಇದೇ ವೇಳೆ, ನಿತ್ಯಾನಂದನ ಕಾವಲಿಗೆ ಇಬ್ಬರು ಪೊಲೀಸರು ಒಬ್ಬರು ಎ.ಎಸ್.ಐ ಒಬ್ಬರನ್ನ ನೇಮಿಸಲಾಗಿದೆ.

ನಿತ್ಯಾನಂದ ಪ್ರತಿನಿತ್ಯ ಬೆಳಿಗ್ಗೆ ಶುಚಿರ್ಭೂತನಾಗಿ ಸ್ನಾನ ಮಾಡಿ ಯೋಗ ಮಾಡಿ ಪೂಜೆ ಮಾಡುತ್ತಾನೆ. ನಂತರ ಧ್ಯಾನಪೀಠದಿಂದ ಬರುವ ಬೆಳಗಿನ ತಿಂಡಿ ಮತ್ತು ರಾತ್ರಿ ಊಟ ದಿನಕ್ಕೆರಡು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದಾನೆ. ಇಡ್ಲಿ, ಚಪಾತಿ, ಡ್ರೈಫ್ರೂಟ್ಸ್‌ನ್ನ ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಸೇವಿಸುತ್ತಿದ್ದಾನೆ, ಉಪ್ಪು ಕಾರವಿಲ್ಲದ ಆಹಾರವನ್ನ ರಾತ್ರಿ ಊಟಕ್ಕೆ ನಿತ್ಯಾನಂದ ಸೇವಿಸುತ್ತಿದ್ದಾನೆ. ಮಿಕ್ಕ ಸಮಯದಲ್ಲಿ ಆಧ್ಯಾತ್ಮ ಪುಸ್ತಕಗಳನ್ನ ಓದುವುದರಲ್ಲೇ ನಿತ್ಯಾನಂದ ಕಾಲಕಳೆಯುತ್ತಿದ್ದಾನೆಂದು ಜೈಲರ್ ರಾಮಯ್ಯ ಹೇಳುತ್ತಾರೆ.

ಜೈಲುಹಕ್ಕಿಯಾಗಿರುವ ನಿತ್ಯಾನಂದನನ್ನ ಜೈಲಿನಿಂದ ಮುಕ್ತಿಗೊಳಿಸಲು ನಿತ್ಯಾನಂದನ ಪರವಕೀಲರು ನ್ಯಾಯಾಲಯದಲ್ಲಿ ಭಾರೀ ವಾದವನ್ನೇ ಮಾಡುತ್ತಿದ್ದಾರೆ. ಆದರೆ ನಿತ್ಯಾನಂದನ ಟೈಮ್ ಯಾಕೋ ಸರಿಯಿದ್ದಂತೆ ಕಂಡುಬರುತ್ತಿಲ್ಲ. ಆದ್ದರಿಂದಲೇ ನಿತ್ಯಾನಂದ ಜೈಲಿನಲ್ಲೇ ದಿನಗಳನ್ನ ದೂಡುವಂತಾಗಿದೆ.

ಜೈಲಿನಲ್ಲಿರುವ ನಿತ್ಯಾನಂದನಿಗೆ ಜಾಮೀನು ಸಿಗಲಿಲ್ಲವೆಂಬ ಬೇಸರವೇನು ಇಲ್ವಂತೆ, ಜೈಲಿನಲ್ಲೂ ಸದಾ ಹಸನ್ಮುಖಿಯಾಗಿಯೇ ಕಾಲಕಳೆಯುತ್ತಿದ್ದಾನಂತೆ. ಪ್ರತಿ ಮೂರು ದಿನಗಳಿಗೊಮ್ಮೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಕಾರಾಗೃಹಕ್ಕೆ ಬಂದು ನಿತ್ಯಾನಂದನ ಆರೋಗ್ಯ ಪರೀಕ್ಷಿಸುತ್ತಿದ್ದಾರೆ. ನಿತ್ಯಾನಂದ ಜೈಲುಪಾಲಾಗಿ 41 ದಿನಗಳಾಗಿದ್ದರೂ ಒಮ್ಮೆಯೂ ಆರೋಗ್ಯದ ಏರುಪೇರಾಗಿಲ್ಲ, ನಿತ್ಯ ಯೋಗ ಧ್ಯಾನ ಮಾಡಿಕೊಂಡು ನಿತ್ಯಾನಂದ ಆರೋಗ್ಯವಂತನಾಗಿದ್ದಾನೆಂದು ಜೈಲರ್ ರಾಮಯ್ಯ ನಿತ್ಯಾನಂದ ಜೈಲುಪಾಲಾದ ನಂತರ ಮೊದಲ ಬಾರಿಗೆ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

ಯಾವುದೇ ಖಾಯಿಲೆಯಿಲ್ಲದೇ ಆಸ್ಪತ್ರೆಯ ಬೆಡ್ ಮೇಲೆ ಮಲಗದೇ ಜೈಲಿನ ಕಾರ್ಪೆಟ್ ಮೇಲೆ ಮಲಗಿ ಏಳುತ್ತಿರುವ ನಿತ್ಯಾನಂದ ಕಾಮಿ ಮಿನಿಸ್ಟರ್ ಹಾಲಪ್ಪನಿಗಿಂತ ನಾನೇ ಮೇಲು ಎಂದು ನಿತ್ಯಾನಂದ ಜೈಲಿನಲ್ಲಿದ್ದುಕೊಂಡೇ ಸಾಬೀತು ಮಾಡಿದ್ದಾನೆ.

ಪಲ್ಲಂಗ ಯೋಗಿ ಕಾಮಿ ನಿತ್ಯಾನಂದ ಎಂದು ಯಾವಾಗ ಜೈಲಿನಿಂದ ಹೊರಬರುತ್ತಾನೋ ಗೊತ್ತಿಲ್ಲ. ಆದರೆ ನಿತ್ಯಾನಂದ ಮಾತ್ರ ಜೈಲಿನಲ್ಲೂ ಏನೂ ಆಗೇ ಇಲ್ಲವೇನೋ ಎಂಬಂತೆ ಚಿಂತೆಯಿಲ್ಲದೆ ಕಾಲಕಳೆಯುತ್ತಿದ್ದಾನೆ. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಬಂತು ಎಂಬಂತೆ ಕಲಿಯುಗ ಕಾಮಪುರಾಣಕರ್ತೃ ನಿತ್ಯಾನಂದ ಜೈಲಿನಲ್ಲೂ ಆರಾಮವಾಗಿದ್ದಾನೆ.

ಶಿಷ್ಯಂದಿರ ನಿರಶನ : ನಿತ್ಯಾನಂದನ ಜಾಮೀನು ವಿಚಾರಣೆ ಜೂನ್ 10ಕ್ಕೆ ಮುಂದೂಡಲಾಗಿದೆ. ಎಂದು ಜಾಮೀನು ಸಿಗುವುದೋ ಎಂಬ ನಿರೀಕ್ಷೆಯಲ್ಲಿರುವ ನಿತ್ಯಾನಂದನ ಆಶ್ರಮದ ಶಿಷ್ಯಂದಿರು ಮತ್ತು ಅನುಯಾಯಿಗಳು ಶನಿವಾರ ತಮ್ಮ ಗುರುಗಳ ಶೀಘ್ರ ಬಿಡುಗಡೆಗೆ ಬೆಳಿಗ್ಗೆ 7ರಿಂದ ಸಾಯಂಕಾಲ 7ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X