ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೆಷ್ಟು ಹೆಣಗಳು ಉರುಳಬೇಕು ಮಿಸ್ಟರ್ ಪಿಎಂ

By *ಮೃತ್ಯುಂಜಯ ಕಲ್ಮಠ
|
Google Oneindia Kannada News

Manmohan Singh
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಸಮೀಪ ನಡೆದ ಭೀಕರ ಅಪಘಾತದ ಬೆನ್ನಲ್ಲೇ ಪಶ್ಚಿಮ ಬಂಗಾಲದ ಮಿಡ್ನಾಪೂರ ಜಿಲ್ಲೆಯಲ್ಲಿ ಮಾವೋವಾದಿಗಳು ಶುಕ್ರವಾರ ಹಳಿ ಸ್ಫೋಟಗೊಳಿಸಿದ್ದರಿಂದ ಮುಂಬೈ-ಹೌರಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 115 ಮಂದಿ ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಒಬ್ಬರಿಗೆ ಕಾಲು, ಇನ್ನೊಬ್ಬರಿಗೆ ಕೈ, ಅನೇಕರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

ಪ್ರಧಾನಮಂತ್ರಿಗಳೆ ಈಗಲಾದರೂ ಬಾಯಿ ಬಿಡಿ. ಮೌನಕ್ಕೂ ಒಂದು ತಾಳ್ಮೆ ಬೇಕಲ್ಲವೇ ? ನಕ್ಸಲರು ನಡೆಸಿದ ಮಾರಣಹೋಮಕ್ಕೂ ದೇಶದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಿ ಅಂತ ಸೋನಿಯಾ ಗಾಂಧಿನೇ ಹೇಳಬೇಕೆ? ರಾಹುಲ್ ಗಾಂಧಿನೇ ಪತ್ರಿಕಾಗೋಷ್ಠಿ ನಡೆಸಬೇಕು? ಸಿಆರ್ ಪಿಎಫ್ ನರಮೇಧ ನಡೆದಾಗ ಚಿದಂಬರಂ ಎಂಬ ಗೃಹ ಮಂತ್ರಿ ಆಯ್ ವಿಲ್ ರಿಜೈನ್, ನನ್ನಿಂದ ಇದು ಆಗದ ಕೆಲಸ ಎಂದು ಕೈತೊಳೆದುಕೊಂಡರಲ್ಲ? ಮುಂದೇನು ಸ್ವಾಮಿ, ಎಷ್ಟು ದಿನ ಅಂತ ಜನಸಾಮಾನ್ಯರ ಜೀವ ತೆಗೆಯುತ್ತೀರಿ? ಬಡವರ ಪ್ರಾಣಕ್ಕೆ ಕಿಮ್ಮತ್ತಿಲ್ಲವೇ?

ದಂತೇವಾಡದಲ್ಲಿ ಒಂದು ಸಾರಿ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಿದ ನಕ್ಸಲರು, ಮತ್ತೊಮ್ಮೆ ಬಸ್ಸಿಗೆ ಬಸ್ಸೇ ಉಡಾಯಿಸಿ 38 ಮಂದಿಯ ಜೀವ ತೆಗೆದರು. ಈ ಹಿಂಸಾಚಾರ ಎಲ್ಲಿಯವರೆಗೆ ? ಈ ದೇಶದಲ್ಲಿ ಒಂದು ಸರಕಾರ ಇದೆಯಾ ? ಕಾನೂನು ಇದೆಯಾ ? ಅಧಿಕಾರದಲ್ಲಿರುವ ನಾಯಕರು ಏನು ಮಾಡುತ್ತಿದ್ದಾರೆ ? ಅಲ್ಲಿ ಕೆಂಪು ಕೋಟೆ ಕಟ್ಟಿಕೊಂಡಿರುವ ಜನ (ನಕ್ಸಲರು) ಬಡವರ ಜೀವ ತೆಗೆಯುತ್ತಿದ್ದರೆ, ಅಧಿಕಾರವುಳ್ಳ ನೀವು ಮನುಷ್ಯತ್ವನನ್ನು ಕಳೆದುಕೊಂಡಂತೆ ವರ್ತಿಸುತ್ತಿರುವುದು ಸರಿಯಾ ? ನಾಲ್ಕೇ ನಾಲ್ಕು ತಿಂಗಳಲ್ಲಿ 1000 ಕ್ಕೂ ಅಧಿಕ ಅಮಾಯಕರು ಸಾವನ್ನಪ್ಪಿದ್ದಾರೆಂದರೆ ಜೀರ್ಣೀಸಿಕೊಳ್ಳುವುದು ಸಾಧ್ಯವೇ?

ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಿವೆ ಎಂದು ನಕ್ಸಲರು ಹೇಳುತ್ತಾರೆ. ಅವರ ಮೇಲೆ ದಾಳಿ ಮಾಡಿ ಅಂತ ಪೊಲೀಸರನ್ನು, ಯೋಧರನ್ನು ನೀವು ಛೂ ಬಿಡುತ್ತೀರಿ, ಕೊನೆಯದಾಗ ನಿಮ್ಮಬ್ಬರಲ್ಲಿ ನಲುಗುತ್ತಿರುವುದು ಯಾರು ? ಶುಕ್ರವಾರ ನಡೆದ ಭೀಕರ ರೈಲು ಹತ್ಯಾಕಾಂಡಕ್ಕೆ ಯಾರು ಹೊಣೆ ? ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಯಾವ ರೀತಿ ಸಾಂತ್ವನ ಹೇಳುತ್ತೀರಿ ? 10 ಲಕ್ಷ ಕೊಟ್ಟರೆ ಸಮಸ್ಯೆ ಬಗೆಹರಿಯುತ್ತಾ ? ನಕ್ಸಲರು ಜೀವ ತೆಗೆಯೋದು, ನೀವುಗಳು ಕಣ್ಣೀರು ಒರೆಸಲು ರೊಕ್ಕ ಬೀಸಾಕೋದು ? ಏನ್ರೀ ಇದು ಅನ್ಯಾಯ.

ದಂತೇವಾಡ ಜಿಲ್ಲೆ ಎಂದ ತಕ್ಷಣ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿದೆ. ನಕ್ಸಲರೆಂದರಂತೂ ಮೈಯೆಲ್ಲಾ ಬೆವರುವಂತಾಗಿದೆ. ಬೇಡ ಸ್ವಾಮಿ ಅವರು ಸುದ್ದಿ ನಮಗ್ಯಾಕೆ ಅನ್ನುವಂತಾಗಿದೆ. ಇದು ಏಕೆ ಹೀಗೆ ಅಂತ ವಿವರಿಸಬೇಕಿಲ್ಲ. ಪ್ರಧಾನಿ ಪೀಠ ಅಲಂಕರಿಸಿರುವ ಮನಮೋಹನ್ ಸಿಂಗ್ ಎಂಬ ಮುತ್ಸದ್ಧಿ ರಾಜಕಾರಣಿ ಗಟ್ಟಿಯಾಗಿ ನಕ್ಸಲರ ಬಗ್ಗೆ ತುಟಿಬಿಟ್ಟೆತ್ತಿನ್ನುಲ್ಲ. ಆದರೆ, ದೇಶದ ಮೂರು ರಾಜ್ಯಗಳ 15 ಜಿಲ್ಲೆಗಳ ಜನಸಾಮಾನ್ಯರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ನಕ್ಸಲರ ಕ್ರೌರ್ಯಕ್ಕೆ ಮಾತ್ರ ನಿತ್ಯ ತಲೆಗಳು ಉರುಳುತ್ತಲೇ ಇವೆ. ಇದು ನಿಲ್ಲುವುದಾದರೂ ಎಂದೂ...?

ಕ್ಷಮಿಸಿ, ತಪ್ಪಾಗಿದೆ ಬಸ್ಸಿನಲ್ಲಿ ನಮ್ಮನ್ನು ಸಾಯಿಸಲು ಬರುತ್ತಿರುವ ಪೊಲೀಸರು ಇದ್ದಾರೆಂದು ಶಂಕಿಸಿ ಸ್ಫೋಟಗೊಳಿಸಿದ್ದೇವೆ. ನಮ್ಮಿಂದ ಅಪರಾಧವಾಗಿದೆ. ಜನಸಾಮಾನ್ಯರನ್ನು ಕೊಲ್ಲಬೇಕೆಂಬ ಇರಾದೆಯಾಗಲಿ, ಗುರಿಯಾಗಲಿ ನಮ್ಮದಲ್ಲ. ನಾವು ಬಡವರು, ನಾವು ಜನಸಾಮಾನ್ಯರು. ಸಮಾಜದಲ್ಲಿರುವ ಕೆಟ್ಟ ವ್ಯವಸ್ಥೆಯಿಂದ ರೋಸಿ ಹೋಗಿ ಬಂಡೆದ್ದು ಬಂದೂಕು ಹಿಡಿದುಕೊಂಡಿದ್ದೇವೆ.

ಘಟನೆಯಲ್ಲಿ ಮೃತಪಟ್ಟ ಜನಸಾಮಾನ್ಯರ ಬಗ್ಗೆ ನಮಗೂ ಅನುಕಂಪವಿದೆ. ನಾವು ಕೂಡಾ ಮನುಷ್ಯರೆ, ಜೀವ ಕಳೆದುಕೊಂಡವರ ಕುಟುಂಬಗಳ ನೆರವಿಗೆ ನಿಲ್ಲುತ್ತೇವೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತೇವೆ ಎಂದು ಎರಡು ಸಾರಿ ದಂತೇವಾಡದಲ್ಲಿ ಭೀಕರ ಹತ್ಯಾಕಾಂಡ ನಡೆಸಿದ ನಂತರ ಮಾವೋವಾದಿಗಳು ಹೇಳಿದ್ದರು.

ಈಗಲೂ ಅಷ್ಟೇ, ನಮ್ಮ ಮೇಲೆ ಕೇಂದ್ರ ಸರಕಾರ ಕಾರ್ಯಾಚರಣೆ ಆರಂಭಿಸಿದೆ. ಕಾರ್ಯಾಚರಣೆ ತೆಗೆದುಹಾಕಿ ಎಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕೇಳಲಿಲ್ಲ. ನಮಗೆ ನಮ್ಮ ಪ್ರಾಣ ಮುಖ್ಯವಾಗಿದ್ದರಿಂದ, ಅನಿವಾರ್ಯವಾಗಿ ರೈಲು ಹಳಿ ಸ್ಫೋಟಗೊಳಿಸಿದ್ದೇವೆ.

ಸತ್ತವರ ಬಗ್ಗೆ ನಮಗೂ ಕನಿಕರವಿದೆ. ನಾವು ಮನುಷ್ಯರಲ್ಲವೇ, ಸಾವನ್ನಪ್ಪಿರುವ ಕುಟುಂಬಗಳ ಧೈರ್ಯ ಹೇಳುವ ಕೆಲಸವನ್ನು ಮಾಡುತ್ತೇವೆ ಎಂದು ನಾಳೇನೂ, ನಾಡಿದ್ದೂ ನಕ್ಸಲ್ ಮುಖಂಡನೊಬ್ಬ ಕರಪತ್ರ ಹಂಚಿದರೆ ಅಚ್ಚರಿಪಡಬೇಕಿಲ್ಲ.

ಘಟನೆಯನ್ನು ಖಂಡಿಸಿದ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ, ರೈಲು ದುರಂತದಲ್ಲಿ ಬಂಗಾಲದ ಆಡಳಿತರೂಢ ಸರಕಾರದ ಶಾಸಕರ ಪಾತ್ರವಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ವಹಿಸಬೇಕು ಎಂದು ಪ್ರಧಾನಮಂತ್ರಿಗೆ ಮನವಿ ಮಾಡುತ್ತಾರೆ ? ಹೇಗಿದೆ ರಾಜಕೀಯ, ರಕ್ತದೂಕುಳಿ ಮದ್ಯೆ ಇವರು ರಾಜಕೀಯ ಮಾಡುತ್ತಾರೆಂದರೆ, ಇಂತಹ ನಾಯಕರಿಗೆ ಹೇಗೆ ಭಾಷೆಯಲ್ಲಿ ಉಗಿಯಬೇಕು.

ಹಿಂಸೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಸರಕಾರ ಈಗಲಾದರೂ ಎಚ್ಚತ್ತುಕೊಳ್ಳಬೇಕು. ನಕ್ಸಲರ ಮನವೂಲಿಸುವ ಕೆಲಸ ಮಾಡಬೇಕು. ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮುಖ್ಯವಾಗಿ ಉದ್ಯೋಗದ ಭರವಸೆ ನೀಡುವ ಕೆಲಸ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾಡಬೇಕು.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪ್ರಕಾಂಡ ಪಂಡಿತರು ಎನ್ನುವುದನ್ನು ಒಪ್ಪಿಕೊಳ್ಳುವ ಮಾತೇ. ಆದರೆ, ಪ್ರತಿಯೊಂದಕ್ಕೂ ಸೋನಿಯಾ ಗಾಂಧಿ ಅವರ ಕೈಸನ್ನೆ, ಬಾಯಿ ಸನ್ನೆ ಕಾದರೆ ಹೇಗೆ ? ದೇಶದಲ್ಲಿ ಇನ್ನಷ್ಟು ರಕ್ತಪಾತ ನಡೆದೀತು ? ನಿರ್ಲಕ್ಷ್ಯ ವಹಿಸಿದರೆ, ಯಾವುದನ್ನು ತಡೆಯಲು ಅಸಾಧ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X