ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣು ತೆರೆಸಿದ ರಾಜ್ ನೇತ್ರ ಸಂಗ್ರಹಣ ಟ್ರಸ್ಟ್

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Now, I can see the world
ರಾಮನಗರ, ಮೇ 29 : ಸಾವಿನ ನಂತರ ನೇತ್ರದಾನ ಮಾಡಿ ಆದರ್ಶ ಮೆರೆದಿರುವ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ರಾಮನಗರ ಜಿಲ್ಲೆ ಬಿಡದಿಯಲ್ಲಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣ ಟ್ರಸ್ಟ್ ಆರಂಭಿಸಿ ಅಂಧರ ಬದುಕಿಗೆ ಬೆಳಕು ತುಂಬುವ ಕೈಂಕರ್ಯದಲ್ಲಿ ತೊಡಗಿದೆ.

ಒಂದು ವರ್ಷದ ಅವಧಿಯಲ್ಲಿ ಅಪಘಾತದಲ್ಲಿ ಮತ್ತು ಸಹಜ ಸಾವಿಗೀಡಾದ 48 ಮಂದಿಯಿಂದ ನೇತ್ರ ಸಂಗ್ರಹಿಸಿ ಕತ್ತಲಿನಲ್ಲಿದ್ದ 96 ಮಂದಿಯ ಬಾಳಿಗೆ ಬೆಳಕು ತುಂಬಲು ಟ್ರಸ್ಟ್ ಸಹಕರಿಸಿದೆ. ನೇತ್ರ ದಾನ ಮಾಡಿ ಸಾವಿನಲ್ಲೂ ಡಾ.ರಾಜ್‌ರನ್ನ ಅನುಸರಿಸಿದ ಮಂದಿಯ ಕುಟುಂಬದವರು ನೋವಿನ ನಡುವೆಯೂ ಸಾರ್ಥಕತೆಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ಬದುಕಿನಲ್ಲಿ ಬೆಳಕು ತುಂಬಿಕೊಂಡ ಮಂದಿಯೂ ಕೂಡ ನೇತ್ರದಾನ ಮಾಡಿದ ಮಂದಿಗೆ ಕಾರ್ಯಕ್ರಮದಲ್ಲಿ ಕೃತಜ್ಞತೆ ಅರ್ಪಿಸಿದ ಸಂದರ್ಭದಲ್ಲಿ ಹೃದಯ ತುಂಬಿ ಬಂದಿತ್ತು.

ಅಪಘಾತದಲ್ಲಿ ಮಡಿದವರ ಮತ್ತು ಸಹಜ ಸಾವಿಗೀಡಾದವರ ಕುಟುಂಬದವರ ಮನವೊಲಿಸಿ ಮೃತರ ನೇತ್ರಗಳನ್ನು ದಾನ ಪಡೆದು ಅಂಧರಿಗೆ ಬೆಳಕಾಗುವ ಉತ್ತಮ ಕಾರ್ಯದಲ್ಲಿ ತೊಡಗಿರುವ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣ ಟ್ರಸ್ಟ್‌ಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಡದಿಯ ಬೈರಮಂಗಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಲನ ಚಿತ್ರನಟರಾದ ರಾಘವೇಂದ್ರ ರಾಜ್‌ಕುಮಾರ್, ದೊಡ್ಡಣ್ಣ ಮತ್ತು ಶಾಸಕ ಬಾಲಕೃಷ್ಣ ಚಾಲನೆ ನೀಡಿದರು.

ಅಂಧರ ಬಾಳ ಬೆಳಕಾಗಿರುವ ರಾಜ್ ನೇತ್ರ ಸಂಗ್ರಹಣ ಟ್ರಸ್ಟ್
ಸಾರ್ಥಕ ನುಡಿಗಳು : ಕಾರ್ಯಕ್ರಮದಲ್ಲಿ ಹಲವಾರು ತಮ್ಮ ಅಭಿಪ್ರಾಯಗಳನ್ನ ಹೇಳುತ್ತಾ ನೆರೆದಿದ್ದವರ ಹೃದಯ ತುಂಬುವಂತೆ ಮಾಡಿದರು. ವಯಸ್ಸಿಗೆ ಬಂದ ಮನೆ ಮಗ ಅಪಘಾತದಲ್ಲಿ ಸಾವಿಗೀಡಾಗಿ ಇಡೀ ಕುಟುಂಬ ನೋವಿನಲ್ಲಿದ್ದರೂ ನೇತ್ರ ಮಣ್ಣಾಗುವುದಕ್ಕಿಂತ ಅಂಧರಿಗೆ ಬೆಳಕಾಗಲಿ ಎಂಬ ಕಾರಣಕ್ಕೆ 20ರ ಹರೆಯದ ಮಗನ ಕಣ್ಣನ್ನು ದಾನ ಮಾಡುವ ತೀರ್ಮಾನಕ್ಕೆ ಬಂದೆವು. ನನ್ನ ಮಗ ಸಾವನ್ನಪ್ಪಿದ್ದರೂ ಕಣ್ಣು ಬೇರೆಯವರ ಬದುಕಿಗೆ ದಾರಿ ದೀಪವಾಗಿದೆ ಎಂದು ಪುತ್ರಶೋಕದಲ್ಲಿರುವ ಸುಶೀಲಮ್ಮ ಸಾರ್ಥಕತೆಯ ಮಾತಗಳನ್ನಾಡಿ ಎಲ್ಲರ ಹೃದಯಕ್ಕೆ ಹತ್ತಿರವಾದರು.

ಅದೇ ರೀತಿ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಮೋರಿಯೊಂದರಲ್ಲಿ ಸಿಕ್ಕಿದ್ದ ಆಗತಾನೇ ಹುಟ್ಟಿದ ಮಗುವನ್ನು ಕಟುಕ ತಾಯಿ ಅನಾಥನನ್ನಾಗಿ ಮಾಡಿದ್ದಳು. ಇರುವೆ ಕಚ್ಚಿ ಕಣ್ಣಿಲ್ಲದೆ ಅಂಧಕಾರದಲ್ಲಿದ್ದ 4 ವರ್ಷದ ಶ್ರೀನಿವಾಸನ ಬಾಳಿಗೆ ಬೆಳಕು ತುಂಬಲು ಡಾ.ರಾಜ್ ನೇತ್ರಸಂಗ್ರಹಣ ಟ್ರಸ್ಟ್ ಮತ್ತು ನಾರಾಯಣ ನೇತ್ರಾಲಯ ನೆರವಾಯಿತು. ಅನಾಥ ಮಗುವನ್ನ ಮನೆಮಗನಂತೆ ಬೆಳೆಸುತ್ತಿರುವ ಶ್ಯಾಮಲಾರವರು ಕೃತಜ್ಞತೆ ಸಲ್ಲಿಸಿ ಆನಂದ ಭಾಷ್ಪ ಸುರಿಸಿದರು.

ಸಾವಿನ ನಂತರವೂ ತಮ್ಮಿಂದ ಬೇರೆಯವರಿಗೆ ಸಹಾಯವಾಗಲಿ ಎಂಬ ಆದರ್ಶ ಮನೋಭಾವದಿಂದ ನೇತ್ರದಾನಕ್ಕೆ ಎಲ್ಲರೂ ಮುಂದಾದಾಗ ಮಾತ್ರ ಅಂಧರ ಬಾಳಿಗೆ ಬೆಳಕು ತುಂಬಲು ಸಾಧ್ಯವಾಗುತ್ತದೆ. ನೇತ್ರದಾನದಂತಹ ಮಹಾನ್ ಕಾರ್ಯ ದೇಶ ಮತ್ತು ವಿಶ್ವಕ್ಕೆ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಟ್ರಸ್ಟ್ ಕೂಡ ಸೇವೆ ಮಾಡುತ್ತಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ, ಚಿತ್ರನಟ ದೊಡ್ಡಣ್ಣ, ನಾರಾಯಣ ಹೃದಯಾಲಯದ ಡಾ. ಭಜಂಗಶೆಟ್ಟಿ ಅವರು ಮಾತನಾಡಿ ಟ್ರಸ್ಟ್ ನ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೇತ್ರದಾನ ಮಾಡಿದ ಕುಟುಂಬದವರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ನೇತ್ರ ಸಂಗ್ರಹಣಕ್ಕೆ ಅನುಕೂಲವಾಗಲೆಂದು ಡಾ.ರಾಜ್ ಕುಟುಂಬದ ಸದಸ್ಯರು ಉಚಿತವಾಗಿ ಆಂಬುಲೆನ್ಸ್‌ ವಾಹನ ನೀಡಿದರು.

ನೇತ್ರದಾನ : ಶನಿವಾರ ಮಧ್ಯಾಹ್ನ ಬಿಡದಿಯ ಹಲಸಿನಮರದದೊಡ್ಡಿ ಗೇಟ್‌ಬಳಿ ಸ್ವಿಫ್ಟ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೃತಪಟ್ಟಿದ್ದ ಇಟ್ಟುಮಡು ಗ್ರಾಮದ ಕಿರಣ್ ಎಂಬ ಯುವಕನ ನೇತ್ರವನ್ನು ಕುಟುಂಬದವರು ಡಾ.ರಾಜ್ ನೇತ್ರ ಸಂಗ್ರಹಣಾ ಟ್ರಸ್ಟ್‌ಗೆ ದಾನ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X