ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರತಿಮ ದೇಶಭಕ್ತ ವೀರ ಸಾವರಕರ್ ಜನ್ಮದಿನ

By Prasad
|
Google Oneindia Kannada News

Vinayak Damodar Savarkar
ಹಿಂದೂತ್ವದ ಕಟ್ಟಾ ಪ್ರತಿಪಾದಕ, ಅಪ್ರತಿಮ ಸ್ವಾತಂತ್ರ್ಯ ಯೋಧ 'ವೀರ ಸಾವರಕರ್' ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ.

ಮಹಾರಾಷ್ಟ್ರದ ನಾಸಿಕ್ ಬಳಿ ಮೇ 28, 1883ರಲ್ಲಿ ಜನಿಸಿದ ವಿನಾಯಕ ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ 'ವೀರ' ಎಂಬ ಬಿರುದಿಗೆ ಪಾತ್ರವಾಗಿದ್ದರು. ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ ವಿರುದ್ಧ ಸಾವರಕರ್ ಸಿಡಿದೆದ್ದಿದ್ದರು. ಬಾಲ್ಯದಿಂದಲೂ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುತ್ತ ಬಂದಿದ್ದ ಅವರು ಉತ್ತಮ ಬರಹಗಾರ, ಬ್ಯಾರಿಸ್ಟರ್‌, ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಹಾಗೂ ದಾರ್ಶನಿಕರಾಗಿದ್ದರು.

ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ 1857ರ ಸಿಪಾಯಿ ದಂಗೆ ಬಗ್ಗೆ 'ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್' ಪುಸ್ತಕ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಆ ಪುಸ್ತಕವನ್ನು ಆಂಗ್ಲ ಆಡಳಿತ ನಿಷೇಧಿಸಿತ್ತು. ಕ್ರಾಂತಿಕಾರಿ ಸಂಘಟನೆ ಇಂಡಿಯಾ ಹೌಸ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ಬ್ರಿಟಿಷರು ಅವರನ್ನು 1910ರಲ್ಲಿ ಬಂಧಿಸಿದ್ದರು. ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಅವರಿಗೆ 50 ವರ್ಷ ಕಠಿಣ ಶಿಕ್ಷೆಯಾಗಿ 'ಕಾಲಾಪಾನಿ' ಶಿಕ್ಷೆಗೆ ಪ್ರಸಿದ್ಧಿ ಪಡೆದಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಅವರನ್ನು ಬಂಧಿಸಿಡಲಾಯಿತು.

ಅಂಡಮಾನ್ ಜೈಲಿನಲ್ಲಿದ್ದಾಗ ಶಿಕ್ಷೆ ಮಾಫಿಗಾಗಿ ಕೋರಿದ್ದಕ್ಕಾಗಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೀತಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದ ಸಾವರಕರ್ ಅವರನ್ನು ಕ್ರಾಂತಿಕಾರಿ ಚಟುವಟಿಕೆಯಿಂದ ಹಿಂದುಳಿಯುವ ಮುಚ್ಚಳಿಕೆ ಬರೆಸಿಕೊಂಡು 1921ರಲ್ಲಿ ಬಿಡುಗಡೆ ಮಾಡಲಾಯಿತು. ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ್ದರು. ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ಹೂಡಿದ್ದರೆಂದು ಅವರನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷಿಗಳ ಕೊರತೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಯಿತು.

ಹಿಂದೂ ಮಹಾಸಭಾದ ಸ್ಥಾಪಕ ಅಧ್ಯಕ್ಷರಾಗಿದ್ದ ವೀರ ಸಾವರಕರ್ ಅವರು ಜೀವನದುದ್ದಕ್ಕೂ ಹಿಂದೂತ್ವವನ್ನು ಬೆಂಬಲಿಸುತ್ತಲೇ ಬಂದಿದ್ದರು. ಹಿಂದೂತ್ವ ಕುರಿತು ಅನೇಕ ಪುಸ್ತಕಗಳನ್ನು ಬರೆದ ಅವರು 1966ರ ಫೆಬ್ರವರಿ 26ರಂದು ವಿಧಿವಶರಾದರು.

ವಿವಾದ : ಕೆಲ ವರ್ಷಗಳ ಹಿಂದೆ ವೀರ ಸಾವರಕರ್ ಅವರನ್ನು ದೇಶದ್ರೋಹಿ ಎಂದು ಜರಿದಿದ್ದ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರು ಪೋರ್ಟ್ ಬ್ಲೇರ್ ನಲ್ಲಿರುವ ಸೆಲ್ಯುಲಾರ್ ಜೈಲಿನಲ್ಲಿ ಸಾವರಕರ್ ಅವರು ಬರೆದ ಘೋಷವಾಕ್ಯಗಳನ್ನು ಅಳಿಸಿಹಾಕಬೇಕು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಸೋನಿಯಾ ಗಾಂಧಿ ಕೂಡ ಸಾವರಕರ್ ಅವರನ್ನು ಹೇಡಿ ಎಂದು ಜರಿದು ಪಾರ್ಲಿಮೆಂಟಿನಲ್ಲಿ ಅವರ ಭಾವಚಿತ್ರ ತೂಗಹಾಕಬಾರದೆಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.

English summary
Vinayak Dāmodar Sāvarkar (28 May 1883 – 26 February 1966) was an Indian pro-independence activist, politician as well as a poet, writer and playwright. He advocated dismantling the system of caste in Hindu culture, and reconversion of the converted Hindus back to Hindu religion. Happy birthday Veer Savarkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X