ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಗೋಪುರ ಪತನ, ಇದು ಅಪಶಕುನವೇ ?

By Mahesh
|
Google Oneindia Kannada News

ಕಾಳಹಸ್ತಿ, ಮೇ .27 : ದೇಶದ ಪ್ರಸಿದ್ದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಶ್ರೀಕಾಳಹಸ್ತಿ ಶಿವದೇವಾಲಯದ ರಾಜಗೋಪುರ ಬುಧವಾರ (ಮೇ 26 ) ರಾತ್ರಿ 8.30ರ ಸುಮಾರಿಗೆ ಕುಸಿದು ಬಿದ್ದಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಭಕ್ತಾದಿಗಳಲ್ಲಿ ಆತಂಕ ಮನೆಮಾಡಿದೆ. ಅಪಶಕುನದ ಸೂಚಕವೋ ಎಂಬಂತೆ ಚಿತ್ತೂರಿನ ಮಳಕಲಚರವು ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹುಬ್ಬಳ್ಳಿ ಮೂಲದ ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಕ್ರಿ.ಶ 1516 ರಲ್ಲಿ ಗಜಪತಿ ಸಾಮ್ರಾಜ್ಯದ ಮೇಲೆ ವಿಜಯ ಸಾಧಿಸಿದ ಕುರುಹಾಗಿ ಈ ರಾಜಗೋಪುರವನ್ನು ಶ್ರೀ ಕೃಷ್ಣ ದೇವರಾಯ ನಿರ್ಮಿಸಿದ್ದನು.7 ಅಂತಸ್ತಿನ ಸುಮಾರು 136 ಅಡಿ ಎತ್ತರದ ರಾಜ ಗೋಪುರ ದೇಗುಲದ ಆಕರ್ಷಣೆಯ ಭಾಗವಾಗಿತ್ತು. ಕಾಂಕ್ರೀಟ್ ನಿಂದ ನಿರ್ಮಿಸಿರುವ ಮೊದಲ ಅಂತಸ್ತು ಸುರಕ್ಷಿತವಾಗಿದ್ದು, ಅದರ ಮೇಲಿನ ಆರು ಅಂತಸು ಕುಸಿದು ಬಿದ್ದಿದೆ. ಗೋಪುರ ಕುಸಿತಕ್ಕೂ ಎರಡು ದಿನ ಮುನ್ನ ಚೆನ್ನೈನಿಂದ ಬಂದಿದ್ದ ತಂತ್ರಜ್ಞರು, ಆಂಧ್ರದ ಭೂ ವಿಜ್ಞಾನಿಗಳು ಗೋಪುರದ ದುರಸ್ತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದರು.

ಕುಸಿತಕ್ಕೆ ಕಾರಣವೇನು: 80 ರ ದಶಕದಲ್ಲೇ ಗೋಪುರದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡರೂ ದುರಸ್ತಿ ಕಾರ್ಯ ವಿಳಂಬವಾಗಿತ್ತು. ಟಿಟಿಡಿ ಕೂಡ ತನ್ನ ಸಹಾಯ ಹಸ್ತ ಚಾಚಿ ದುರಸ್ತಿ ಕಾರ್ಯಕ್ಕೆ ನೆರವಾಗಿತ್ತು. ಆದರೆ, ದಿನೇ ದಿನೇ ಬಿರುಕು ದೊಡ್ಡದಾಗತೊಡಗಿತು. ಇತ್ತೀಚಿನ ಲೈಲಾ ಚಂಡಮಾರುತದ ಹೊಡೆತವೂ ಕಾರಣ ಎನ್ನಬಹುದು. ದೇಗುಲದ ಸಮೀಪದಲ್ಲೇ ಇತ್ತೀಚೆಗೆ ಬೋರ್ ವೇಲ್ ನಿರ್ಮಿಸಲು ಸುಮಾರು 500-600 ಅಡಿ ಆಳ ಕೊರೆದದ್ದು ಗೋಪುರ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಬಹುದು ಎಂದು ಭೂ ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಳಹಸ್ತಿ ನಗರ ಸ್ವರ್ಣಮುಖಿ ನದಿ ದಡದಲ್ಲಿದ್ದು, ಅಕ್ರಮ ಮರಳು ಸಾಗಾಣಿಕೆ ಕೂಡ ಇಲ್ಲಿ ಅವ್ಯಾಹತವಾಗಿ ಸಾಗಿದೆ. ಆದರೆ, ದುರಸ್ತಿ ಕಾರ್ಯದಲ್ಲಿ ಯಾವುದೇ ಉದಾಸೀನತೆ ತೋರಿಲ್ಲ. ಟಿಟಿಡಿ ಹಾಗೂ ಸರ್ಕಾರ ಎಲ್ಲವಿಧದಲ್ಲೂ ಗೋಪುರ ದುರಸ್ತಿಗೆ ಶ್ರಮಿಸಿತ್ತು ಎಂದು ಆಂಧ್ರದ ಧಾರ್ಮಿಕ ದತ್ತಿ ಖಾತೆ ಸಚಿವ ಜಿ.ವೆಂಕಟ ರೆಡ್ಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಕುಸಿತಕ್ಕೆ ಸಾಕ್ಷಿಯಾದ ಕೃಷ್ಣದೇವರಾಯ:20 ನಿಮಿಷಗಳಲ್ಲಿ ಇಡೀ ಗೋಪುರ ಕುಸಿತ ಕಂಡರೂ ಪವಾಡ ಎಂಬಂತೆ ಗೋಪುರದ ಎದುರಿಗಿರುವ ಶ್ರೀಕೃಷ್ಣದೇವರಾಯನ ಪ್ರತಿಮೆಗೆ ಏನು ಕುಂದುಂಟಾಗಿಲ್ಲ. ವಾರ್ಷಿಕವಾಗಿ ಸುಮಾರು 100 ಕೋಟಿ ರು ಆದಾಯವಿರುವ ಈ ದೇಗುಲ ತಿರುಪತಿಗೆ ಸಮೀಪವಿರುವ ಕಾರಣ, ಭಕ್ತಾದಿಗಳು ಅಧಿಕ ಸಂಖ್ಯೆ ಯಲ್ಲಿ ಭೇಟಿ ನೀಡುತ್ತಿದ್ದರು.

ವಿಶೇಷವಾಗಿ ಕುಜರಾಹು ಕೇತು ದೋಷ ಪರಿಹಾರಕ್ಕಾಗಿ ಈ ದೇವಾಲಯ ಪ್ರಸಿದ್ಧವಾದ್ದರಿಂದ ಕರ್ನಾಟಕ ಸೇರಿದಂತೆ ಹಲವೆಡೆಗಳಿಂದ ಭಕ್ತಾದಿಗಳು ಭೇಟಿ ನೀಡುತ್ತಾರೆ. ಬೇಡರ ಕಣ್ಣಪ್ಪ ಪೂಜಿಸಿದ ಶಿವ ಲಿಂಗವೂ ಇಲ್ಲಿನದೇ ಎಂಬ ಐತಿಹ್ಯ ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X