ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ನಲ್ಲಿ ಸರಕಾರ ಪತನವಂತೆ ನಾನ್ಸೆನ್ಸ್

By ಮೃತ್ಯುಂಜಯ ಕಲ್ಮಠ
|
Google Oneindia Kannada News

Yeddyurappa-Manmohan Singh
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮುಂದಾಳತ್ವದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಯುಪಿಎ ಸರಕಾರ 365 ದಿನಗಳನ್ನು ಪೂರೈಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶವನ್ನು ಚಾಚು ತಪ್ಪದೆ ಪಾಲಿಸುವ, ಬಳ್ಳಾರಿ ರೆಡ್ಡಿಗಳಿಗೆ ತಗ್ಗಿ ಬಗ್ಗಿ ನಡೆಯುವ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ 730 ದಿನಗಳ ಸಂಭ್ರಮ. ಎರಡೂ ಸರಕಾರಗಳು ವರ್ಷಾಚರಣೆಯನ್ನು ಭರ್ಜರಿಯಾಗಿಯೇ ಆಚರಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದವು. ಆದರೆ, ಕಳೆದ ಶನಿವಾರ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಸಮೀಪದ ನಡೆದ ವಿಮಾನ ಅವಘಡ ಸಂಭ್ರಮಕ್ಕೆ ತುಸು ಬ್ರೇಕ್ ಹಾಕಿದೆ.

ಇದೇ ಡಿಸೆಂಬರ್ ನಲ್ಲಿ ಸರಕಾರ ಪತನಗೊಳ್ಳುತ್ತೆ. ಇಲ್ಲಾರ್ರಿ, ಜನವರಿ, ಫೆಬ್ರವರಿವರೆಗೆ ಸರಕಾರ ಕುಂಟುತ್ತಾ ಸಾಗುತ್ತೆ. ಮಾರ್ಚ್ ಹೊತ್ತಿಗೆ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕಿತ್ತು ಬೀಸಾಡುತ್ತಾರೆ. ಖಾಲಿ ಉಳಿದ ಸಿಎಂ ಪೀಠವನ್ನು ದಕ್ಷಿಣ ಕರ್ನಾಟಕ ಭಾಗದ ನಾಯಕರೊಬ್ಬರು ಅಲಂಕರಿಸುತ್ತಾರೆ ಅಂತ ಅನೇಕ ಜ್ಯೋತಿಷಿಗಳು ಮಾಧ್ಯಮಗಳ ಮುಂದೆ ಪುಂಗಿ ಊದಿದ್ದೆ ಊದಿದ್ದು.

ತಾವೇನು ಕಮ್ಮಿ ಎಂಬಂತೆ ಕೋಡಿಮಠದ ಶ್ರೀಗಳು ಕೂಡಾ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಅಪಾಯ ಕಾದಿದೆ. ನೂರೆಂಟು ವಿಘ್ನಗಳು ಎದುರಾಗಲಿವೆ ಹೇಳಿಕೆ ನೀಡಿದ್ದರು. ಬಿಜೆಪಿ ಸರಕಾರ ಪತನಗೊಳ್ಳಲಿಲ್ಲ. ಯಡಿಯೂರಪ್ಪ ಪದವಿಯಿಂದ ಕೆಳಗಿಳಿಯಲೂ ಇಲ್ಲ. ಸರಕಾರ ಅಂದ ಮೇಲೆ ರಾಜ್ಯದಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ. ಅದಕ್ಕೆಲ್ಲಾ ಸರಕಾರ ಕಾರಣವೆಂಬಂತೆ ಪ್ರತಿಪಕ್ಷಗಳು ಚೀರಾಟ, ಕಿತ್ತಾಟ ಮಾಮೂಲು. ಅಡ್ಡಿ ಆತಂಕಗಳು ಸರಕಾರಕ್ಕೆ ಸಹಜ.
ಯಡಿಯೂರಪ್ಪ ಮತ್ತು ಅವರ ಸರಕಾರ, ಸಂಪುಟ ಸದಸ್ಯರು ಮಾಡಿರುವ ಭಾನಗಡಿ, ಅನಾಚಾರಗಳನ್ನೆಲ್ಲಾ ಇನ್ನೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈಗ ದಿಲ್ಲಿ ಕಡೆಗೆ ದೃಷ್ಟಿ ಹಾಯಿಸೋಣ.

ಯುಪಿಎ2ಕ್ಕೆ ಒಂದು ವರ್ಷದ ಸಂಭ್ರಮ

ಅಕಸ್ಮಿಕವಾಗಿ ನಾನು ರಾಜಕಾರಣಿಯಾದೆ ಎಂದು ತಾವೇ ಹೇಳಿಕೊಂಡ ಡಾ ಮನಮೋಹನ್ ಸಿಂಗ್ ಅವರು ಭಾರತದ ಪ್ರಧಾನಿಯಾಗಿ ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ದೊಡ್ಡ ಸಾಧನೆ. ಬಿಜೆಪಿಯ ಉಕ್ಕಿನ ಮನುಷ್ಯ ಲಾಲ್ ಕೃಷ್ಣ ಅಡ್ವಾಣಿ ಅವರ ಕನಸನ್ನು ಭಗ್ನಗೊಳಿಸಿ ಎರಡು ಬಾರಿಗೆ ಇಂಡಿಯಾದ ಅಧಿಕಾರ ಚುಕ್ಕಾಣಿ ಹಿಡಿದ ಸಿಂಗ್ ಸರಕಾರ ಈ ಒಂದು ವರ್ಷದಲ್ಲಿ ಕಡಿದು ಕಟ್ಟಿ ಹಾಕಿದ್ದೇನು ಎಂದು ಹುಡುಕತೊಡಗಿದರೆ, ಉತ್ತರ ಭಾರತದಲ್ಲೆಲ್ಲಾ ರಕ್ತಪಾತದ್ದೇ ಕಹಿ ನೆನಪು.

ಮೊನ್ನೆ ಸೋಮವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ನಡೆಸಿದ ಗೋಷ್ಠಿಯಲ್ಲಿ ಈ ಮನುಷ್ಯ ಯಾವ ಗಳಿಗೆಯಲ್ಲೂ ಉದ್ವೇಗಕ್ಕೆ ಒಳಗಾಗಲಿಲ್ಲ. ದೇಶದಲ್ಲಿ ನಕ್ಸಲ್ ದಳ್ಳುರಿ, ದಂತೇವಾಡ ಹತ್ಯಾಕಾಂಡ, ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರರು ನಿತ್ಯ ದೇಶದೊಳಕ್ಕೆ ನುಸುಳುವಿಕೆ. ಅಫ್ಜಲ್ ಗುರುನನ್ನು ಏಕೆ ಗಲ್ಲಿಗೇರಿಸಿಲ್ಲ ? ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿ ಸ್ಪೋಟದ ತನಿಖೆ ಎಲ್ಲಿಯವರೆಗೆ ಬಂತು ? ಅಮೆರಿಕದಲ್ಲಿರುವ ಸಿಕ್ಕಿಬಿದ್ದಿರುವ ಮುಂಬೈ ದಾಳಿಯ ರೂವಾರಿ ಡೆವಿಡ್ ಹೆಡ್ಲೀ ವಿಚಾರಣೆ ಏನಾಯಿತು ? ಥಿಂಪುವಿನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯ ಫಲಶೃತಿಯೇನು ? ಅಜ್ಮಲ್ ಕಸಬ್ ನಲ್ಲಿ ಗಲ್ಲಿಗೇರಿಸುವುದು ಯಾವಾಗ ?

ಬೆಂಗಳೂರು, ಅಹಮದಾಬಾದ್, ದೆಹಲಿ, ಜೈಪುರ, ಪುಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಇದಕ್ಕೆ ನಿಮ್ಮ ಮುಲಾಮು ಯಾವುದು ? ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಅವುಗಳ ದರ ಇಳಿಕೆಗೆ ಯಾವ ಸೂತ್ರ ಅಳವಡಿಸಿಕೊಂಡಿದ್ದೀರಿ ? ಹೀಗೆ ದೇಶದ ಮುಂದಿರುವ ಅನೇಕ ಸವಾಲುಗಳು ಪ್ರಧಾನಿಗೆ ಎದುರಾದವು. ಈ ಯಾವ ವಿಷಯಕ್ಕೂ ಸ್ಪಷ್ಟವಾದ ಉತ್ತರ ಸಿಂಗ್ ಬಳಿ ಇರಲಿಲ್ಲ. ಮಾಧ್ಯಮದ ಮಂದಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಹಾರಿಕೆಯ ಉತ್ತರವನ್ನೇ ನೀಡಿದರು.

ಆದರೆ, ಒಂದನ್ನು ಮಾತ್ರ ಅವರು ಮರೆಯಲಿಲ್ಲ. ರಾಹುಲ್ ಗಾಂಧಿ ಮಂತ್ರಿಯಾಗುವುದಾದರೆ ಶೀಘ್ರಕ್ಕೆ ಸಂಪುಟಕ್ಕೆ ತೆಗೆದುಕೊಳ್ಳುವೆ. ನಾನು ನನ್ನ ಜೀವನದಲ್ಲಿ ಇಬ್ಬರು ಮಹಿಳೆಯ ಮಾತನ್ನು ಕೇಳುತ್ತೇನೆ ಒಂದು ನನ್ನ ಪತ್ನಿ ಗುರುಶರಣ್ ಕೌರ್, ಇನ್ನೊಬ್ಬರು ಕಾಂಗ್ರೆಸ್ ಸರಕಾರದ ನಾಯಕಿ, ನಮ್ಮ ಹೆಮ್ಮೆಯ ಲೀಡರ್ ಸೋನಿಯಾ ಗಾಂಧಿ. ಅಪಾರ ಬುದ್ಧಿಮತ್ತೆ ಹೊಂದಿರುವ ಸಿಂಗ್, ರಾಷ್ಟ್ರವನ್ನು ಉದ್ದೇಶಿಸಿ ಸುದ್ದಿಗೋಷ್ಠಿಯನ್ನು ನಡೆಸುತ್ತಿರುವುದನ್ನು ಮರೆತು ಮೇಡಮ್ ಗುಣಗಾನ ಮಾಡಿದರು. ಈ ಎಲ್ಲದರ ನಡುವೆ ಪ್ರತಿಪಕ್ಷ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ದೇಶದಲ್ಲಿ ನಕ್ಸಲರೆಂದರೆ ಭಯ ಹುಟ್ಟಿದೆ. ಭಯೋತ್ಪಾದಕರ ಅಟ್ಟಹಾಸ, ಅಗತ್ಯ ವಸ್ತುಗಳ ದರ ಏರಿಕೆ. ಸರಕಾರ ಕೀಲಿ ಯಾರು ? ಕೈ ಯಾರು ? ಸ್ವಾಯತ್ತ ಸಂಸ್ಥೆಯಾದ ಸಿಬಿಐಯನ್ನು ತನ್ನ ಅಗತ್ಯತೆಗೆ ತಕ್ಕಂತೆ ಬಳಸಿಕೊಂಡಿದೆ ಹೀಗೆ ಅನೇಕ ಲೇವಡಿಯನ್ನು ಮಾಡಿವೆ.

ಮಿತ ಭಾಷಿಯಾಗಿರುವ ಸಿಂಗ್, ಯುಪಿಎ2 ರ ಒಂದು ವರ್ಷದ ಅವಧಿಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಮುಖ್ಯವಾಗಿ ದಶಕಗಳ ಕಾಲ ನೆನಗುದಿಗೆ ಬಿದ್ದಿದ್ದ ಶೇ.33ರಷ್ಟು ಮಹಿಳಾ ಮೀಸಲಾತಿಗೆ ಅಂಗೀಕಾರ ನೀಡಿದ್ದು ಒಂದಾದರೆ, ದೇಶದ ಪ್ರತಿ ಮಕ್ಕಳಿಗೂ ಕಡ್ಡಾಯ ಶಿಕ್ಷಣ, ಆಹಾರ ಭದ್ರತಾ ಯೋಜನೆ, ಗ್ರಾಮೀಣ ಉದ್ಯೋಗ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಿರುವುದು ಜೊತೆಗೆ 2010ರ ಜನಗಣತಿಯಲ್ಲಿ ಹಿಂದುಳಿದ ವರ್ಗಗಳ ತಲೆಗಳ ಲೆಕ್ಕಾಚಾರ ಹಾಕುವುದು ಸಿಂಗ್ ಸರಕಾರ ಸಮ್ಮತಿಸಿದ್ದು ಪ್ರಮುಖ ನಿರ್ಧಾರಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X