ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಉಪರಾಷ್ಟ್ರಪತಿ ಶೇಖಾವತ್ ಇನ್ನಿಲ್ಲ

By Prasad
|
Google Oneindia Kannada News

ಜೈಪುರ, ಮೇ 15 : ಭಾರತದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಶನಿವಾರ ಮುಂಜಾನೆ ಇಲ್ಲಿ ನಿಧನಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಬಹುಕಾಲದಿಂದ ಅವರು ಅಸ್ವಸ್ಥರಾಗಿದ್ದರು. ಉಸಿರಾಟದ ತೊಂದರೆ ಮತ್ತು ಶ್ವಾಸಕೋಸದ ನೋವು ಉಲ್ಭಣವಾದಾಗ ಅವರನ್ನು 13ರ ಗುರುವಾರ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾಷ್ಟಪತಿ ಪ್ರತಿಭಾ ಪಾಟೀಲ್ ಆದಿಯಾಗಿ ಅನೇಕ ಗಣ್ಯರು ಶೆಖಾವತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

2002ರಿಂದ 2007ರವರೆಗೆ ಶೆಖಾವತ್ ಅವರು ಭಾರತದ 11ನೇ ಉಪರಾಷ್ಟಪತಿಯಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಯುಪಿಎ ಅಭ್ಯರ್ಥಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರಿಗೆ ಸೋತಿದ್ದರು.

ಭೈರೋನ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪ್ರಮುಖ ನೇತಾರರಾಗಿದ್ದರೂ ಕೂಡ. ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ರಾಜಕಾರಣಿಗಳ ಪಟ್ಟಿಯಲ್ಲಿ ತಾವೂ ಒಬ್ಬರಾಗಿದ್ದ ಶೆಖಾವತ್ ಮೂರು ಬಾರಿ ರಾಜಸ್ತಾನದ ಮುಖ್ಯಮಂತ್ರಿಯಾಗಿ ಸಕ್ರಿಯರಾಗಿದ್ದರು.

ದೇಶದ ಎರಡನೇ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನ ಕೇವಲ ಅಲಂಕಾರಿಕವಾಗಿ ಉಳಿದಿದೆ. ಸಂವಿಧಾನದತ್ತ ಈ ಹುದ್ದೆಯನ್ನು ಅಲಂಕರಿಸುವವರು ದೇಶದ ಆಗುಹೋಗುಗಳಲ್ಲಿ ಭಾಗಿಯಾಗುವುದಕ್ಕೆ ಉದಾಹರಣೆಗಳು ಹೆಚ್ಚಾಗಿ ಸಿಗುವುದಿಲ್ಲ. ಶಂಕು ಸ್ಥಾಪನೆ, ವಜ್ರಮಹೋತ್ಸವದ ಉದ್ಘಾಟನೆ, ಮತ್ತು ಗಾಂಧಿ ಸಮಾಧಿಗೆ ಪುಷ್ಪನಮನ ಮಾಡುವಂಥ ಕಾರ್ಯಕ್ರಮಗಳಲ್ಲಿ ಉಪರಾಷ್ಟ್ರಪತಿಗಳು ಸುದ್ದಿಯಾದರೆ ಆದರೆ ಬಿಟ್ಟರೆ ಬಿಟ್ಟರು. ಈ ಹುದ್ದೆಯನ್ನು ರದ್ದು ಮಾಡುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿಯಾಗಲಿ.

ಜೋಕ್ : ಒಂದೂರಿನಲ್ಲಿ ಒಬ್ಬ ತಾಯಿ ಇದ್ದಳು. ಅವಳಿಗೆ ಇಬ್ಬರು ಮಕ್ಕಳು. ಒಬ್ಬನು ಹಿಂದೂ ಮಹಾಸಾಗರದಲ್ಲಿ ಮುಳುಗಿ ಕಾಣೆಯಾದನು. ಇನ್ನೊಬ್ಬನು ಭಾರತದ ಉಪರಾಷ್ಟ್ರಪತಿ ಆದನು. ಇದುವರೆಗೆ ಅವರಿಬ್ಬರ ಬಗ್ಗೆ ಏನೂ ಸುದ್ದಿ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X