ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಸೀ ಕ್ರೀಡೆಗಳಿಗೆ ಗೋಲಿ ಹೊಡೀಬೇಡಿ

By Prasad
|
Google Oneindia Kannada News

Allow your children to play local games
ಮರಕೋತಿಯಾಡಲು ಮರಗಳೂ ಇಲ್ಲ, ಲಗೋರಿ ಬುಗುರಿ ಗಿಲ್ಲಿ ದಾಂಡು ಆಡಲು ಮೈದಾನಗಳೂ ಇಲ್ಲ. ನಗರಗಳಲ್ಲಿ ಇಂದಿನ ಮಕ್ಕಳು ಅಕ್ಷರಶಃ ಕಂಪ್ಯೂಟರು, ಮೊಬೈಲುಗಳು ದಾಸರಾಗುತ್ತಿದ್ದಾರೆ, ದೇಸೀ ಆಟಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಎಂದು ಚಿಂತಿಸುತ್ತ ಕುಳಿತುಕೊಳ್ಳುವ ಬದಲು ಇಂದಿನ ಮಕ್ಕಳಿಗೂ ಅಂದಿನ ಕಾಲದ ಆಟಪಾಠಗಳನ್ನು ಪರಿಚಯಿಸುವ ಮತ್ತು ದೇಸೀ ಆಟಗಳನ್ನು ಜೀವಂತವಾಗಿಡುವ ಅಗತ್ಯವಿದೆ.

* ವಿಜಯಕುಮಾರ್ ಎಂ, ಇಟ್ಟಮಡು

ಕನ್ನಡ ವರ್ಣಮಾಲೆಯನ್ನು ಮಕ್ಕಳಿಗೆ ಕಲಿಸುವಾಗ ಅ ಎಂದರೆ ಅಮ್ಮ ಆ ಎಂದರೆ ಆಟ ಎಂದು ಹೇಳಿಕೊಡುತ್ತೇವೆ. ಮಕ್ಕಳ ಬೆಳೆವಣಿಗೆ ಮತ್ತು ಅವರ ಭವಿಷ್ಯವನ್ನು ರೂಪಿಸುವಲ್ಲಿ ಅಮ್ಮನ ಪಾತ್ರ ಬಹಳ ಮುಖ್ಯ ಅದರಂತೆ ಮಕ್ಕಳ ಆಟ ಪಾಠಗಳು ಸಹ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಬಹಳ ಸಹಕಾರಿ.

ಈಗಿನ ಕಂಪ್ಯೂಟರ್ ಯುಗದಲ್ಲಿ ದೇಸಿ ಆಟಗಳು ಕ್ರಿಕೆಟ್, ಫುಟ್ ಬಾಲ್ ಹಾಗೂ ವಿಡಿಯೊ ಗೇಮ್ ಗಳಂತಹ ಜಾಗತಿಕ ಕ್ರೀಡೆಗಳ ಸುಳಿಯಲ್ಲಿ ಸಿಲುಕಿ ತನ್ನ ಮಹತ್ವವನ್ನು ಕಳೆದುಕೊಂಡಿವೆ. ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ ಗೇಮ್ ಗಳನ್ನು ಆಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಪೋಷಕರು ಸಹ ತಮ್ಮ ಮಕ್ಕಳನ್ನು ಎಂಜಿನಿಯರ್ ಅಥವಾ ಡಾಕ್ಟರ್ ಗಳನ್ನಾಗಿ ಮಾಡಿ ಹೊರ ದೇಶಗಳಿಗೆ ಕಳಿಸುವ ಪ್ರವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಮರಕೋತಿ ಆಟ, ಕುಂಟೋಬಿಲ್ಲೆ, ಲಗೋರಿ, ಚೂಚೆಂಡು, ಬುಗುರಿ, ಗೋಲಿ, ಗಿಲ್ಲಿ ದಾಂಡು, ಅಂಚಿನ ಕಲ್ಲು, ಪಗಡೆ ಆಟ, ಚೌಕ ಬಾರ, ಅಳ್ಗುಳಿ ಮಣೆ, ಎಲಾಸ್ಟಿಕ್ ಆಟ ಅಷ್ಟೇ ಅಲ್ಲದೆ ಖೋಖೊ, ಕಬಡಿಗಳಂತ ಆಟಗಳ ಪಟ್ಟಿ ಮಾಡುತ್ತಾ ಹೋದರೆ ನಮ್ಮ ನೆನಪಿನ ಸಿಮಿತಕ್ಕೂ ಸಿಗದಷ್ಟು ದೇಸಿ ಆಟಗಳು ಕಣ್ಮರೆಯಾಗುತ್ತಿವೆ.

ಇದರ ಪ್ರಮಾಣ ಹಳ್ಳಿಗಳಿಗಿಂತ ನಗರ ಹಾಗೂ ಪಟ್ಟಣಗಳಲ್ಲಿ ಹೆಚ್ಚಿರುವುದು ಬಹಳ ಶೋಚನೀಯ ಸಂಗತಿ. ಈ ದೇಸಿ ಆಟಗಳು ನಮ್ಮ ಮಕ್ಕಳು ಸಮಾಜದೊಂದಿಗೆ ಹಾಗೂ ವಾತಾವರಣದೊಂದಿಗೆ ಬೆರೆಯಲು ಬಹಳ ಸಹಕಾರಿಯಾಗುತ್ತವೆ. ಈ ಎಲ್ಲ ಕ್ರೀಡೆಗಳಿಂದ ದೂರ ಉಳಿದ ಮಕ್ಕಳು ಸರಿಯಾಗಿ ಸಮಾಜದೊಂದಿಗೆ ಬೆರೆಯದೆ ಏಕಾಂಗಿಗಳಾಗಿ, ವ್ಯಸನಿಗಳಾಗಿ ಹಾಗೂ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿದ್ದಾರೆ.

ಈ ಕ್ರೀಡೆಗಳ ಮೂಲಕ ನಮ್ಮ ಮಕ್ಕಳು ಸಹ ಸಮಾಜದೊಂದಿಗೆ ಬೆರೆತು ಮಾನವ ಮತ್ತು ನಾಗರಿಕ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗುತ್ತದೆ. ದೇಸಿ ಕ್ರೀಡೆಗಳು ಮಕ್ಕಳಲ್ಲಿ ಏಕಾಗ್ರತೆ, ಮಾನಸಿಕ ಸ್ಥೈರ್ಯ, ಚುರುಕುತನ, ಲವವಿಕೆಯನ್ನು ಹೆಚ್ಚಿಸುತ್ತವೆ ಹೊರತು ಕೇವಲ ಸಮಯ ವ್ಯರ್ಥ ಮಾಡುವುದಲ್ಲ. ನಮ್ಮ ಕ್ರೀಡೆಗಳು ಮಕ್ಕಳಲ್ಲಿ ಶಾರೀರಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವುದೇ ಹೊರತು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಅವರ ಮೇಲೆ ಬೀರುವುದಿಲ್ಲ.

ನಮ್ಮ ಮಕ್ಕಳು ಕೇವಲ ಕಂಪ್ಯೂಟರ್ ಮುಂದೆ ಕುಳಿತು ಮನೆಯ ಒಂದು ಕೊಠಡಿಯ ಮೂಲೆ ಗುಂಪಾಗದೆ ಸಮಾಜವನ್ನು ಬೆಳಗುವ ನಂದಾ ದೀಪಗಳಾಗಬೇಕು. ನಮ್ಮ ತಲೆಮಾರಿನ ಕ್ರೀಡೆಗಳು ನಮ್ಮೊಂದಿಗೆ ಕೊನೆಗೊಳ್ಳದೆ ನಮ್ಮ ಕಿರಿಯರು ಸಹ ಅವುಗಳ ಪ್ರಯೋಜನ ಹಾಗೂ ಅವಶ್ಯಕತೆಯನ್ನು ಅರಿಯಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಖ್, ಬುದ್ದ, ಜೈನ್ ಎಂಬ ಬೇಧಭಾವವಿಲ್ಲದೆ ಮಕ್ಕಳು ಈ ಕ್ರೀಡೆಗಳ ಮೂಲಕ ಸಮಾಜದಲ್ಲಿ ಸಹಬಾಳ್ವೆಯನ್ನು ನಡೆಸುವುದನ್ನು ಕಲಿಯಬಹುದು.

ನಾವು ನಮ್ಮ ಚಿಕ್ಕ ವಯಸ್ಸಿನಲ್ಲಿ ಆಡಿದ್ದ ಆಟಗಳು ಮತ್ತು ಭಾಗವಹಿಸಿದ ಕ್ರೀಡಾಕೂಟಗಳ ಬಗ್ಗೆ ನೆನೆಪಿಸಿಕೊಂಡಾಗ ಬಹಳ ಹೆಮ್ಮೆ ಎಂದೆನಿಸುತ್ತದೆ ಮತ್ತು ಇಂತಹ ಅನುಭವಗಳಿಂದ ನಮ್ಮ ಮುಂದಿನ ಪೀಳಿಗೆಯವರು ವಂಚಿತರಾಗುತ್ತಿದ್ದಾರಲ್ಲ ಎನ್ನುವ ಬೇಸರ ಮನಸ್ಸಿನಲ್ಲಿ ಮೂಡುತ್ತದೆ. ಇನ್ನಾದರು ಪೋಷಕರು ಈ ದೇಸಿ ಕ್ರೀಡೆಗಳ ಮಹತ್ವವನ್ನು ಅರಿತು ತಮ್ಮ ಮಕ್ಕಳಿಗೆ ತಿಳಿಹೇಳಿ ಅವರನ್ನೂ ಸಹ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಲು ಪ್ರಯತ್ನಿಸುತ್ತಾರೆಂದು ಆಶಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X