ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಕ್ಷಕರನ್ನು ಕೆಣಕಿದ ಕಾಲ್ಚೆಂಡಿಗರು

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು.
|
Google Oneindia Kannada News

Vasco players go on rampage in ileague bangalore match
ತಮ್ಮ ನೆಚ್ಚಿನ ತಂಡ ಸೋತಾಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ದಾಂಧಲೆ ನಡೆಸುವುದು ಸಾಮಾನ್ಯ. ಆದರೆ ಆಟಗಾರರೇ ಪ್ರೇಕ್ಷಕರನ್ನು ಕೆರಳಿಸಿ ದಾಂಧಲೆಗೆ ಕಾರಣರಾದ ಘಟನೆಯನ್ನು ಇದೇ ದಿನಾಂಕ ಮೇ 13ರಂದು ಬೆಂಗಳೂರಿನ ಅಶೋಕನಗರ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಾನು ಪ್ರತ್ಯಕ್ಷ ನೋಡಿದೆ.

ಸ್ಥಳೀಯ ಎಚ್‌ಎ‌ಎಲ್ ಮತ್ತು ಗೋವಾದ ವಾಸ್ಕೊ ತಂಡಗಳ ನಡುವೆ ಐ-ಲೀಗ್ ಪಂದ್ಯ ನಡೆಯುತ್ತಿದ್ದಾಗ ವಾಸ್ಕೊ ಆಟಗಾರರು ಪಂದ್ಯದುದ್ದಕ್ಕೂ ರೆಫರಿಯ ತೀರ್ಮಾನಗಳನ್ನು ಅನಾಗರಿಕವಾಗಿ ಆಕ್ಷೇಪಿಸುತ್ತಲೇ ಇದ್ದರು. ಒಂದು ಹಂತದಲ್ಲಂತೂ ವಾಸ್ಕೊ ಆಟಗಾರರು ರೆಫರಿಯ ಮೇಲೇರಿ ಹೋದಾಗ ಸಹಾಯಕ ರೆಫರಿಗಳು ಮೈದಾನ ಪ್ರವೇಶಿಸಿ ರೆಫರಿಯನ್ನು ರಕ್ಷಿಸಬೇಕಾಯಿತು. ಸಹಸ್ರ ಸಂಖ್ಯೆಯಲ್ಲಿ ಹಾಜರಿದ್ದ ಎಚ್‌ಎ‌ಎಲ್ ತಂಡದ ಅಭಿಮಾನಿ ಪ್ರೇಕ್ಷಕರು ವಾಸ್ಕೊ ತಂಡದ ಈ ದಬ್ಬಾಳಿಕೆಯನ್ನು ಸಹಿಸಿಕೊಂಡು ತಾಳ್ಮೆಯಿಂದಲೇ ಆಟ ವೀಕ್ಷಿಸುತ್ತಿದ್ದರು.

ಆದರೆ, ಸೋಲನ್ನಪ್ಪಿದ ವಾಸ್ಕೊ ಆಟಗಾರರು ಆಟ ಮುಗಿಯುತ್ತಲೇ ಮೈದಾನದಲ್ಲೇ ರೆಫರಿಯಮೇಲೆ ಹಲ್ಲೆ ನಡೆಸಿದಾಗ ಪ್ರೇಕ್ಷಕರ ತಾಳ್ಮೆ ಕೆಟ್ಟಿತು. ಆಟಗಾರನೊಬ್ಬ ರೆಫರಿಯ ಕೊರಳಪಟ್ಟಿ ಹಿಡಿದಾಗ ಸಹನೆ ಕಳೆದುಕೊಂಡ ಓರ್ವ ಪ್ರೇಕ್ಷಕ ಕುರ್ಚಿಯೊಂದನ್ನು ಮೈದಾನದತ್ತ ಎಸೆದ. ಆಗಲಾದರೂ ವಾಸ್ಕೊ ಆಟಗಾರರು ಸುಮ್ಮನಾಗಬಹುದಿತ್ತು. ಆದರೆ ಅವರು ಹಲ್ಲೆ ಮುಂದುವರಿಸಲು ಯತ್ನಿಸಿದರು. ಅವರ ಪೈಕಿ ವಿದೇಶೀ ಮೂಲದ ಆಟಗಾರನೊಬ್ಬ ಪ್ರೇಕ್ಷಕರನ್ನು ತಿಂದುಹಾಕುವಂತೆ ದುರುಗುಟ್ಟಿ ನೋಡುತ್ತ, "ಕುರ್ಚಿ ಎಸೆಯಿರಿ; ನಾವೇನೂ ಅಂಜುವುದಿಲ್ಲ" ಎಂಬಂತೆ ಸನ್ನೆಮಾಡತೊಡಗಿದ.

ಇದರಿಂದ ಸಹಜವಾಗಿಯೇ ಕೆರಳಿದ ಪ್ರೇಕ್ಷಕರು ಮತ್ತಷ್ಟು ಕುರ್ಚಿ ಮತ್ತು ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಮೈದಾನಕ್ಕೆ ಎಸೆದರು. ಆದರೆ, ಎಚ್‌ಎ‌ಎಲ್ ತಂಡದ ಆಟಗಾರರು ಗ್ಯಾಲರಿಯತ್ತ ಕೈಯೆತ್ತಿ, ಪ್ರೇಕ್ಷಕರನ್ನು ಸುಮ್ಮನಾಗುವಂತೆ ಕೇಳಿಕೊಂಡ ತಕ್ಷಣವೇ ಪ್ರೇಕ್ಷಕರು ಶಾಂತರಾಗಿಬಿಟ್ಟರು. ನಾನು ಕಣ್ಣಾರೆ ಕಂಡ ಘಟನೆಯಿದು.

ಸಾಮಾನ್ಯವಾಗಿ, ಕ್ರೀಡಾಂಗಣದಲ್ಲಿ ಗಲಾಟೆಮಾಡಿದ ಪ್ರೇಕ್ಷಕರ ವರ್ತನೆಯನ್ನು ಪುಂಡಾಟಿಕೆಯೆಂಬಂತೆ ಮಾಧ್ಯಮಗಳು ಬಿಂಬಿಸುತ್ತವೆ. ಆದರೆ, ಮೇಲಿನ ಘಟನೆಯಲ್ಲಿ, ಗೂಂಡಾಗಿರಿ ಪ್ರದರ್ಶಿಸಿ ಪ್ರೇಕ್ಷಕರ ಸಹನೆಯನ್ನು ಕೆಣಕಿದ್ದು (ವಾಸ್ಕೊ) ಆಟಗಾರರು. ಇಂಥ ಸಂದರ್ಭದಲ್ಲಿ ಪ್ರೇಕ್ಷಕರು ಸಮೂಹ ಸ್ವಭಾವಕ್ಕೆ (ಮಾಬ್ ಮೆಂಟ್ಯಾಲಿಟಿಗೆ) ಪಕ್ಕಾಗುವುದು ಅಸಹಜವೇನಲ್ಲ.

ಅಂದಹಾಗೆ, ನಮ್ಮ ಕ್ರಿಕೆಟ್ ಆಟಗಾರರು ಐಪಿ‌ಎಲ್‌ನಲ್ಲಿ ಹಣಕ್ಕಾಗಿ ಆಡಿ ಸುಸ್ತಾಗಿ, ಕ್ಲಬ್ಬು, ಪಬ್ಬು, ಪಾರ್ಟಿಗಳಲ್ಲಿ ಕುಡಿದು, ಕುಣಿದು, ಜಗಳಾಡಿಕೊಂಡು, ನಿದ್ದೆಗೆಟ್ಟು, ಟಿ-20 ವಿಶ್ವಕಪ್ ಪಂದ್ಯಾವಳಿಯಂಥ ದೇಶದ ಘನತೆ ಎತ್ತಿಹಿಡಿಯಬೇಕಾದ ಪಂದ್ಯಗಳಲ್ಲಿ ಸೋಲುತ್ತ ಸಾಗಿದರೆ ಮುಂದೆ ಇವರೂ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರ ಕೋಪ ಎದುರಿಸಬೇಕಾದೀತು, ಜೋಕೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X