ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

46.1 : ಕೊತಕೊತ ಕುದಿಯುತ್ತಿರುವ ಗುಲಬರ್ಗ

By Prasad
|
Google Oneindia Kannada News

ಗುಲಬರ್ಗ, ಮೇ. 14 : ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಸಿಲು ಸೆಖೆ ಬಿಸಿಗಾಳಿ ಸಾಮಾನ್ಯ. 40, 42, 44 ಡಿಗ್ರಿಯಷ್ಟು ದಾಖಲಾದರೆ ಅದು ಹಳೆ ಸುದ್ದಿಬಿಡಿ ಎನ್ನುವವರುಂಟು. ಆದರೆ ಇಂದು ದಾಖಲಾಗಿರುವ ಅತಿಹೆಚ್ಚು ಉಷ್ಣಾಂಶ ಗುಲಬರ್ಗ ಜಿಲ್ಲೆ ಕೊಟ್ಟಿರುವ ಬ್ರೇಕಿಂಗ್ ನ್ಯೂಸ್ ಆಗಿದೆ. ಇವತ್ತು ದಾಖಲಾದ 46.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಳೆದ 119 ವರ್ಷಗಳ ದಾಖಲೆಯನ್ನು ಧೂಳಿಪಟ ಮಾಡಿದೆ. ಈ ಮುಂಚೆ ದಾಖಲಾದ ಅತಿಹೆಚ್ಚು ಉಷ್ಣಾಂಶ 45.4 ಡಿಗ್ರಿ ಸೆಲ್ಸಿಯಸ್. ಸರಿಯಾಗಿ 119 ವರ್ಷಗಳ ಹಿಂದೆ ಮೇ 17ರಂದು ಈ ಉಷ್ಣಾಂಶ ದಾಖಲಾಗಿತ್ತು.

ಜಿಲ್ಲೆಯಲ್ಲಿ ತಾಪಮಾನ ದಿನೇದಿನೇ ಏರುತ್ತಿರುವ ಕಾರಣ ಜನರು ಬಿಸಿಲಿನಲ್ಲಿ ಹೆಚ್ಚು ಓಡಾಡಬಾರದು ಮತ್ತು ಶುದ್ಧವಾದ ನೀರನ್ನು ಕುಡಿಯಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್ ವಿಶಾಲ್ ಅವರು ಸಾರ್ವಜನಿಕರನ್ನು ಕೋರಿದ್ದಾರೆ. ಮಕ್ಕಳು ಮತ್ತು ವಯೋವೃದ್ಧರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ. ಇದಲ್ಲದೆ ಜಿಲ್ಲಾಡಳಿತದಿಂದ ಸಾಕಷ್ಟು ಪ್ರಮಾಣದಲ್ಲಿ ಓ.ಆರ್.ಎಸ್. ಹಾಗೂ ಅಗತ್ಯ ಔಷಧಿಗಳನ್ನು ಎಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಾಯ್ದಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಲಿನ ಝಳದಿಂದಾಗಿ ಗುಲಬರ್ಗಾದಲ್ಲಿ ಇಬ್ಬರು ಮತ್ತು ಬೀದರ್ ಜಿಲ್ಲೆಯಲ್ಲಿ ಒಬ್ಬ ಸಾವಿಗೀಡಾಗಿದ್ದಾರೆ. ನೀರಿನ ಕೊರತೆ ಕೂಡ ಜನರನ್ನು ಬಾಧಿಸುತ್ತಿದ್ದು ಶುದ್ಧವಾದ ನೀರು ದೊರೆಯದೆ ಜನ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಎಲ್ಲೆಡೆಯೂ ಇದೇ ಕಥೆ : ಉಳಿದಂತೆ ರಾಜ್ಯದಲ್ಲಿ ಬಹುತೇಕ ಒಣ ಹವೆ ಮುಂದುವರೆದಿದೆ. ಅನೇಕ ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ಉಷ್ಣಾಂಶ ಕಂಡುಬಂದಿದೆ. ಕರಾವಳಿಯಲ್ಲೂ ಇದೇ ಹವಾಗುಣ. ಉತ್ತರ ಕರ್ನಾಟಕದಲ್ಲೂ ಇದೇ ಸ್ಥಿತಿ ಮುಂದುವರೆದಿದೆ. ಆದರೆ, ಲಭ್ಯವಾಗಿರುವ ಮುನ್ಸೂಚನೆಗಳ ಪ್ರಕಾರ ಬೀದರ್, ಗುಲಬರ್ಗ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಬೀಳಬಹುದೆಂದು ಹವಾಮಾನ ಇಲಾಖೆ ಅಂದಾಜಿಸಿದೆ. ಏರುತ್ತಿರುವ ಬಿಸಿಲಿಗೆ ಬಸವಳಿದಿರುವ ಜನ ಮಳೆಯ ಹನಿಗಾಗಿ ಕಾದು ಕುಳಿತಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ವಿಪರೀತ ಸೆಖೆ ಇದ್ದರೂ ಸಹ ಕೆಲವು ಕಡೆ ಮಳೆ ಆಗಿದೆ. ಇನ್ನೂ ಕೆಲವು ಕಡೆ ಬೀಳುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ನಿನ್ನೆ, ಗುರುವಾರ ಸಂಜೆ ಒಳ್ಳೆ ಮಳೆ ಬಿದ್ದಿದೆ. ಆನೇಕಲ್ಲಿನಲ್ಲಿ 3 ಸೆಂಮೀ, ಬೆಂಗಳೂರು ಮತ್ತು ಸಿರಾದಲ್ಲಿ ತಲಾ 2 ಸೆಂಮಿ ಮಳೆ ಆಗಿದೆ. ರಾಜಧಾನಿಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಇತ್ತು.

ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಸಂಜೆ ರಾತ್ರಿ ವೇಳೆಗೆ ಕೆಲವು ವಾರ್ಡುಗಳಲ್ಲಿ ಮಳೆ ಬರುವ ನೀರೀಕ್ಷೆಯಿದೆ. ಮೋಂಬತ್ತಿ ಸ್ಟಾಕು ಇದೆಯಾ? ಈಗಲೇ ನೋಡಿಟ್ಟುಕೊಳ್ಳುವುದು ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X