ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿಗೂ ಕಾಲಿಟ್ಟ ಬೆಟ್ಟಿಂಗ್

By * ಡಿ.ಟಿ.ತಿಲಕ್‌ರಾಜ್
|
Google Oneindia Kannada News

Gram panchayat election : Betting rampant in Channapattana
ಚನ್ನಪಟ್ಟಣ, ಮೇ 11 : ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಮತಪೆಟ್ಟಿಗೆಗಳು ಅಭ್ಯರ್ಥಿಗಳ ಭವಿಷ್ಯವನ್ನು ತನ್ನೊಡಲಲ್ಲಿಟ್ಟುಕೊಂಡು ಒಂದೆಡೆ ಸೇರಿಕೊಂಡಿದ್ದರೆ, ಇತ್ತ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಮತದಾನ ಮುಗಿಯುತ್ತಿದ್ದಂತೆಯೇ ಕೆಲ ಅಭ್ಯರ್ಥಿಗಳ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿದ್ದರೆ, ಇನ್ನೂ ಕೆಲವರ ಮೊಗದಲ್ಲಿ ಯಾಕೋ ದುಗುಡ ಮೂಡಲಾರಂಭಿಸಿದೆ. ಆಸೆ-ಆಮಿಷಗಳನ್ನು ಈಡೇರಿಸಿದ್ದ ಅಭ್ಯರ್ಥಿಗಳು ನಾವು ಗೆದ್ದೇ ತೀರುತ್ತೇವೆಂದು ಬೀಗುತ್ತಿದ್ದು, ಯಾವುದೇ ಆಮಿಷಗಳನ್ನು ಒಡ್ಡದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕೊಂಚ ತಣ್ಣಗಾಗಿದ್ದಾರೆ.

ಈಗಾಗಲೇ ಸೋಲು-ಗೆಲುವಿಗಾಗಿ ಹಳ್ಳಿಗಳಲ್ಲಿ ಬೆಟ್ಟಿಂಗ್ ಶುರುವಾಗಿದ್ದು, ಹೊಲ-ಮನೆಗಳೇ ಬೆಟ್ಟಿಂಗ್ ಲಿಸ್ಟ್‌ನಲ್ಲಿ ಸೇರಿಕೊಂಡಿರುವ ವರದಿಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಇನ್ನು ಹಣವುಳ್ಳ ಕೆಲವರು ಎಷ್ಟು ಹಣವಾದರೂ ಸರಿ ಪಣಕ್ಕಿಡುವುದಾಗಿ ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಮತದಾನದ ದಿನದಂದು ಮೂಗುಬೊಟ್ಟು, ಹಣ, ಹೆಂಡ, ಬಿರಿಯಾನಿ, ಉಂಡೆಕೋಳಿ ಹಾಗೂ ಜೆಸಿಬಿ ಸೇವೆಗಳನ್ನು ಮತದಾರರಿಗೆ ನೀಡಿದ್ದ ಅಭ್ಯರ್ಥಿಗಳು ತಾವು ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಿಂದ ಬೆಟ್ಟಿಂಗ್‌ಗೆ ಎದುರಾಳಿಗಳಿಗೆ ಆಹ್ವಾನ ನೀಡುತ್ತಿದ್ದು, ಬೆಟ್ಟಿಂಗ್‌ಗೆ ದೊಡ್ಡ ದೊಡ್ಡ ಆಸಾಮಿಗಳು ಬರುತ್ತಿದ್ದಾರೆಂಬ ವದಂತಿಗಳೂ ಸಹ ಅಲ್ಲಲ್ಲಿ ಕೇಳಿಬರುತ್ತಿವೆ. ಬೆಟ್ಟಿಂಗ್‌ಗಳು ನಗರದ ಹೊರವಲಯದ ಡಾಬಾಗಳು ಹಾಗೂ ರೆಸ್ಟೋರೆಂಟ್‌ಗಳ ಬಳಿ ಹೆಚ್ಚಾಗಿ ನಡೆಯುತ್ತಿವೆ ಎಂಬ ಸುದ್ದಿ ಸಹ ಹೊರಬಿದ್ದಿದ್ದು, ಮದಿರೆಯ ಮತ್ತು, ಕಾಂಚಾಣದ ಝಣ ಝಣ ಸದ್ದಿಗೆ ನರ್ತಿಸುತ್ತಿದೆ.

ಈ ಹಿಂದೆ ದೊಡ್ಡ ದೊಡ್ಡ ಚುನಾವಣೆಗೆ ಮಾತ್ರ ಮೀಸಲಾಗಿದ್ದ ಬೆಟ್ಟಿಂಗ್ ಈಗ ಗ್ರಾಮ ಪಂಚಾಯಿತಿಗೂ ಪ್ರವೇಶ ಪಡೆದಿದ್ದು, ಯಾವ ವಿಧಾನಸಭೆ, ಲೋಕಸಭೆ ಚುನಾವಣೆಗೂ ಇಲ್ಲದ ಖದರ್ ಈಗ ಗ್ರಾಮಗಳಿಗೂ ಬಂದಿದೆ. ದೊಡ್ಡ ದೊಡ್ಡ ಕುಳಗಳೇ ಅಭ್ಯರ್ಥಿಗಳಾಗಿರುವುದರಿಂದ ಸಹಜವಾಗಿಯೇ ಬೆಟ್ಟಿಂಗ್ ಪ್ರವೇಶ ಪಡೆದಿದೆ. ಹಳ್ಳಿಗಳಲ್ಲಿ ಜನತೆ ಹೋಟೆಲ್, ಅಂಗಡಿ, ಪಂಚಾಯಿತಿ ಕಟ್ಟೆ ಹೀಗೆ ಒಂದೆಡೆ ಸೇರಿ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ನಿರೀಕ್ಷೆ ಇಟ್ಟುಕೊಂಡಿರುವ ಜನ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ಗೆಲ್ಲುವ ವಿಶ್ವಾಸ ಹೊಂದಿರುವ ಅಭ್ಯರ್ಥಿಗಳು ತಮ್ಮ ಮುಂದಿನ ನಡೆಯ ಬಗ್ಗೆ ಆಲೋಚನೆ ನಡೆಸುತ್ತಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷಗಿರಿಯ ಕನಸು ಕಾಣುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿಗಾಗಿ ಇವರೆಲ್ಲರೂ ಈಗಾಗಲೇ ಕಾಯುತ್ತಿದ್ದು, ಮೀಸಲಾತಿ ತಮ್ಮ ಪರವಾದರೆ ಯಾರ್‍ಯಾರನ್ನು ತಮ್ಮತ್ತ ಸೆಳೆಯಬೇಕು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ ಬೇರೆಯವರ ಪಾಲಾದರೆ ಚುನಾವಣೆಗೆ ಖರ್ಚಾಗಿರುವ ಹಣವನ್ನೆಲ್ಲಾ ಅವರಿಂದ ವಾಪಸ್ ಪಡೆದುಕೊಳ್ಳಬೇಕೆಂಬ ಲೆಕ್ಕಾಚಾರವನ್ನು ಅಭ್ಯರ್ಥಿಗಳು ಈಗಾಗಲೇ ಹಾಕುತ್ತಿದ್ದಾರೆ. ಹಾಗಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸ್ವಲ್ಪ ಮುಂಚೆಯೇ ಹಣವನ್ನು ಒದಗಿಸಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ, ಗೆಲುವಿನ ನಿರೀಕ್ಷೆಯಲ್ಲಿರುವ ಕೆಲ ಅಭ್ಯರ್ಥಿಗಳು ಯಾವ ಪಕ್ಷದವರು ಹೆಚ್ಚಿನ ಹಣ ಕೊಡುತ್ತಾರೋ ಆ ಪಕ್ಷಕ್ಕೆ ಜೈ ಎನ್ನುವ ಸಿದ್ದಾಂತಕ್ಕೆ ಮೊರೆಹೋಗುತ್ತಿದ್ದು, ಪಕ್ಷಗಳಿಂದ ಹಣ ವಸೂಲಿ ಮಾಡುವ ಕಾರ್ಯಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಇವರೆಲ್ಲರೂ ತಮ್ಮ ತಮ್ಮ ನಾಯಕರುಗಳ ಮನೆ ಮುಂದೆ ಎಡತಾಕುತ್ತಿದ್ದು, ಅಧ್ಯಕ್ಷಗಿರಿಗೆ ತಮ್ಮನ್ನು ಕೂರಿಸುವಂತೆ ದಂಬಾಲು ಬಿದ್ದಿದ್ದಾರೆ. ಇತ್ತ ನಾಯಕರು ಯಾರನ್ನು ಅಧ್ಯಕ್ಷರಾಗಿಸುವುದು ಯಾರನ್ನು ಬಿಡುವುದು ಎಂಬ ಗೊಂದಲದಿಂದ ಇವರ ಕೈಗೆ ಸಿಗದೆ ನುಣುಚಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಮತದಾನದ ದಿನ ಮನೆ ಮನೆಗೂ ತೆರಳಿ ಅಭ್ಯರ್ಥಿಗಳು ಮತದಾರರನ್ನು ಮತಗಟ್ಟೆ ಬಳಿಗೆ ಕರೆತಂದು ಮತದಾನ ಮಾಡಿಸಿದ್ದು, ಮತದಾರರು ಮೇಲ್ನೋಟಕ್ಕೆ ನಿಮಗೇ ಮತ ಚಲಾಯಿಸುವುದಾಗಿ ಅಭ್ಯರ್ಥಿಗಳಿಗೆ ತಿಳಿಸಿದ್ದರೂ ಅವರ ಒಳಮರ್ಮ ಅಭ್ಯರ್ಥಿಗಳಿಗೇ ತಿಳಿಯುತ್ತಿಲ್ಲ. ಮತದಾರ ಯಾರಿಗೆ ಮತ ಚಲಾಯಿಸಿದ್ದಾನೆ ಎಂಬ ಗುಟ್ಟು ಮಾತ್ರ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮೇ 18ರಂದು ನಡೆಯಲಿರುವ ಮತ ಎಣಿಕೆಯ ನಂತರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X