ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಗ್ರಾಮ ಪಂಚಾಯತಿ ಅಪವಿತ್ರ : ಎಚ್ಡಿಕೆ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

HD Kumarswamy lambasts BJP in Ramnagar
ರಾಮನಗರ, ಮೇ 8 : ಪಕ್ಷಾತೀತವಾಗಿ ರಾಜಕೀಯ ರಹಿತವಾಗಿ ನಡೆಯುತ್ತಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರುಗಳು ರಾಜಕೀಯ ಮಿಶ್ರಣ ಮಾಡಿ ಅಪವಿತ್ರಗೊಳಿಸಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯಲ್ಲಿ ಕುಮಾರಸ್ವಾಮಿಯವರು ಮತದಾನ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ನಾನಾಗಲೀ ಪಕ್ಷದ ವರಿಷ್ಠರಾಗಲಿ ಎಲ್ಲಿಯೂ ಚುನಾವಣಾ ಪ್ರಚಾರ ನಡೆಸಿಲ್ಲ, ಆಯಾ ಗ್ರಾಮಗಳ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರೇ ಚುನಾವಣೆ ನಡೆಸುತ್ತಿದ್ದಾರೆಂದು ಹೇಳಿದರು.

ಹಣದ ಹೊಳೆ : ಪಕ್ಷದ ವರ್ಚಸ್ಸನ್ನ ವೃದ್ದಿಸಿಕೊಳ್ಳಬೇಕೆಂಬ ಕನಸಿನಲ್ಲಿರುವ ಬಿಜೆಪಿ ಹಣದ ಹೊಳೆ ಹರಿಸಿ ಆಡಳಿತಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಗ್ರಾಮಗಳ ಮಟ್ಟದಲ್ಲೂ ರಾಜಕೀಯವನ್ನ ಕಲುಶಿತಗೊಳಿಸುತ್ತಾ ಓಟಿಗೆ ಸಾವಿರಾರು ರೂಪಾಯಿ ನೀಡಿ ಮತದಾರರನ್ನು ಖರೀದಿ ಮಾಡಲು ಮುಂದಾಗಿರುವ ಬಿಜೆಪಿಗರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸತ್ಯಾಸತ್ಯತೆ ಹೊರಬರುವುದು ಕಷ್ಟ : ಲೈಂಗಿಕ ಹಗರಣದ ಆರೋಪ ಹೊತ್ತಿರುವ ಹಾಲಪ್ಪನವರ ವಿರುದ್ದ ದೂರನ್ನು ದಾಖಲಿಸಲು ಪೊಲೀಸ್ ಇಲಾಖೆಯ ಡಿಜಿಯವರು ಒಲ್ಲದ ಮನಸ್ಸಿನಿಂದ ಸ್ವೀಕಾರ ಮಾಡಿದ್ದಾರೆ. ದೂರು ಪಡೆದ ಡಿ.ಜಿ.ಯವರು ಮುಖ್ಯಮಂತ್ರಿಗಳು ಮತ್ತು ಆರೋಪಿ ಹಾಲಪ್ಪನವರು ವಿಮಾನ ನಿಲ್ದಾಣದಲ್ಲಿ ನಡೆಸಿದ ಚರ್ಚೆಯ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ ಎಂದರು.

ಸಾಮಾನ್ಯ ಮಂದಿ ಏನಾದರೂ ತಪ್ಪು ಮಾಡಿದರೆ ತಕ್ಷಣವೇ ಕ್ರಮಕೈಗೊಳ್ಳುತ್ತಾರೆ. ಆದರೆ ಹಾಲಪ್ಪನವರ ಲೈಂಗಿಕ ಹಗರಣ ಬಹಿರಂಗವಾದಾಕ್ಷಣ ಸರ್ಕಾರವೇ ಕ್ರಮಕೈಗೊಳ್ಳಬೇಕಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಹಾಲಪ್ಪಗೆ ಸಾತ್ವಿಕ ವ್ಯಕ್ತಿ ಎಂಬ ಟೈಟಲ್ ಕೊಟ್ಟಿದ್ದಾರೆ. ಇದರಿಂದ ಹಾಲಪ್ಪನವರ ಲೈಂಗಿಕ ಹಗರಣದ ಪ್ರಕರಣದಲ್ಲಿ ನ್ಯಾಯಸಿಗಲು ಸಾಧ್ಯವೇ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ ಎಂದು ಎಚ್ಡಿಕೆ ಹೇಳಿದರು.

ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲ :
ಐಹಾಸಿಕ ನೆಲೆಯಾಗಿರುವ ಶ್ರೀರಾಮದೇವರ ಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಗೃಹಸಚಿವರೇ ಜಿಲ್ಲಾಡಳಿತಕ್ಕೆ ಒತ್ತಡ ತಂದಿದ್ದಾರೆ. ಪವಿತ್ರ ಸ್ಥಳವನ್ನ ಅಪವಿತ್ರ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಸಚಿವರುಗಳ ಕಡೆಯ ಗೂಂಡಾ ಪಡೆಯಿಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿರವುದು ಖಂಡನಾರ್ಹವೆಂದು ಹೇಳಿದರು.

ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರ ಒತ್ತಡ ಎಷ್ಟೇ ತಂದು ದಬ್ಬಾಳಿಕೆ ನಡೆಸಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾದರೆ ನಾನು ಸಹಿಸುವುದಿಲ್ಲ. ಪವಿತ್ರವಾದ ಸ್ಥಳದಲ್ಲಿ ರೆಸಾರ್ಟ್ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇನ್ನೆರಡು ದಿನಗಳಲ್ಲಿ ರೆಸಾರ್ಟ್ ನಿರ್ಮಾಣ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಯಾವ ಗೂಂಡಾಗಳು ಬಂದು ಏನು ಮಾಡುತ್ತಾರೆಂಬುದು ನಾನು ನೋಡುತ್ತೇನೆಂದು ಸವಾಲು ಹಾಕಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X