ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾವಾಣಿ ಕನ್ನಡಪ್ರಭ ಓದುಗರ ಸಂಖ್ಯೆ ವೃದ್ಧಿ

By Prasad
|
Google Oneindia Kannada News

Indian Readership Survey of Newspapers in Karnataka
ಬೆಂಗಳೂರು, ಮೇ. 7 : ಕರ್ನಾಟಕದಲ್ಲಿ ಪ್ರಕಟವಾಗುವ ಹತ್ತು ಪ್ರಮುಖ ದಿನಪತ್ರಿಕೆಗಳಲ್ಲಿ ಕೇವಲ ಎರಡೇ ದಿನಪತ್ರಿಕೆಗಳು ಓದುಗರ ಸಂಖ್ಯೆಯನ್ನು ವೃದ್ಧಿಸಿಕೊಂಡಿವೆ ಎಂದು ಇಂಡಿಯನ್ ರೀಡರ್ಶಿಪ್ ಸರ್ವೇ (IRS)ತನ್ನ ಪ್ರಸಕ್ತ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಪ್ರಕಟಿಸಿದೆ.

ಕನ್ನಡ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಕಾರಣಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ಕನ್ನಡಪ್ರಭ ಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ಎಂಟು ಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ಇಳಿಮುಖ ದಾಖಲಾಗಿದೆ. ಈ ಮೊದಲ ಹತ್ತು ದಿನಪತ್ರಿಕೆಗಳಲ್ಲಿ ಕನ್ನಡ, ಇಂಗ್ಲಿಷ್, ಮರಾಠಿ ಮತ್ತು ತಮಿಳು ದಿನಪತ್ರಿಕೆಗಳು ಸೇರಿವೆ.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಪ್ರಸಾರದಲ್ಲಿ ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ ಪ್ರಸಕ್ತ ತ್ರೈಮಾಸಿಕದಲ್ಲಿ 3.26 ಲಕ್ಷ ಓದುಗರನ್ನು ತನ್ನತ್ತ ಸೆಳೆದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ 1.41 ಲಕ್ಷ ಓದುಗರನ್ನು ಕಳೆದುಕೊಂಡಿದ್ದ ಪ್ರಜಾವಾಣಿ ಈ ಬಾರಿ ಕೊರತೆಯನ್ನು ತುಂಬಿಕೊಳ್ಳುವಲ್ಲಿ ಸಫಲವಾಗಿದೆ. ಪ್ರಜಾವಾಣಿ ಓಟ್ಟಾರೆ 57.73 ಲಕ್ಷ ಓದುಗರ ಸಂಖ್ಯೆಯನ್ನು ಪಡೆದಿದೆ.

ಕರ್ನಾಟಕದಲ್ಲಿ 4ನೇ ಸ್ಥಾನ ಮತ್ತು ಬೆಂಗಳೂರಿನಲ್ಲಿ 7ನೇ ಸ್ಥಾನ ಆಕ್ರಮಿಸಿರುವ ಕನ್ನಡಪ್ರಭ ದಿನಪತ್ರಿಕೆ 35 ಸಾವಿರ ಓದುಗರನ್ನು ಸೆಳೆದುಕೊಂಡು, ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡಿದ್ದ ಓದುಗರ ಅರ್ಧದಷ್ಟನ್ನು ಕ್ರಮಿಸಿ ಸಮಾಧಾನಕರ ಪ್ರಗತಿ ಸಾಧಿಸಿದೆ. ಈ ಪತ್ರಿಕೆಯ ಓಟ್ಟಾರೆ ಓದುಗರು 20.74 ಲಕ್ಷ.

ಕೆಲವರ್ಷಗಳಿಂದ ಕರ್ನಾಟಕದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿರುವ ಕರ್ನಾಟಕದ ನಂ.1 ಟೈಮ್ಸ್ ಗ್ರೂಪ್ ನ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕ ಕಳೆದೆರಡು ತ್ರೈಮಾಸಿಕಗಳಿಂದ ಓದುಗರಿಂದ ಕೊಂಚ ದೂರ ಸರಿದಿದೆ. ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಆರಂಭದಿಂದಲೂ ಮುಂದಾಳತ್ವ ಕಾಯ್ದುಕೊಂಡು ಬಂದಿರುವ ದಿ ಟೈಮ್ಸ್ ಆಫ್ ಇಂಡಿಯಾ ಕೂಡ ಎಷ್ಟೇ ಹರಸಾಹಸ ಮಾಡುತ್ತಿದ್ದರೂ ಅಧಿಕ ಓದುಗರನ್ನು ಸೆಳೆಯಲು ಆಗುತ್ತಿಲ್ಲ.

ಈ ತ್ರೈಮಾಸಿಕದಲ್ಲಿ 3.3 ಲಕ್ಷದಷ್ಟು ಓದುಗರಿಂದ ದೂರಸರಿದಿರುವ ನಂ.1 ಕನ್ನಡ ದಿನಪತ್ರಿಕೆ ಕಳೆದ ತ್ರೈಮಾಸಿಕವೂ ಸೇರಿದಂತೆ ಒಟ್ಟು 8 ಲಕ್ಷ ಓದುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕರ್ನಾಟಕದಲ್ಲಿ ಆರನೇ ಸ್ಥಾನದಲ್ಲಿರುವ ದಿ ಟೈಮ್ಸ್ ಆಫ್ ಇಂಡಿಯಾ ಇಳಿಮುಖದ ಹಾದಿಯಲ್ಲಿದ್ದು ಈ ಸುತ್ತಿನಲ್ಲಿ 98 ಸಾವಿರ ಓದುಗರನ್ನು ಆಕರ್ಷಿಸಲು ವಿಫಲವಾಗಿದೆ. ದೇಶದ ಅಗ್ರಮಾನ್ಯ ಆಂಗ್ಲ ದಿನಪತ್ರಿಕೆ ಬೆಂಗಳೂರಿನ 'ಬುದ್ಧಿವಂತ' ಓದುಗರನ್ನು ಸೆಳೆಯುವಲ್ಲಿ ಕುಂಟುತ್ತಿದೆ.

ಇನ್ನುಳಿದಂತೆ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿರುವ ಮತ್ತು ಬೆಂಗಳೂರಿನಲ್ಲಿ ಲಿಸ್ಟಿನಲ್ಲಿಯೇ ಇಲ್ಲದ ಸಂಯುಕ್ತ ಕರ್ನಾಟಕ, ಐದನೇ ಸ್ಥಾನ ಆಕ್ರಮಿಸಿರುವ ಕರಾವಳಿ ಜನರ 'ಡಾರ್ಲಿಂಗ್' ಉದಯವಾಣಿ, ಏಳನೇ ಸ್ಥಾನದಲ್ಲಿರುವ ಸಂಜೆ ಓದುಗರ ನೆಚ್ಚಿನ ಸಂಜೆವಾಣಿ, ಹತ್ತರಲ್ಲಿ ಕೆಳಗಿನಿಂದ ಮೂರನೇ ಸ್ಥಾನದಲ್ಲಿರುವ ಆಂಗ್ಲ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್, ಹಾಗೂ ಮೊದಲ ಹತ್ತು ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದಿ ಹಿಂದೂ ಆಂಗ್ಲ ದಿನಪತ್ರಿಕೆಗಳು ಓದುಗರನ್ನು ಕಳೆದುಕೊಳ್ಳುತ್ತಲೇ ಸಾಗಿವೆ.

ಹತ್ತರಲ್ಲಿ ಕೊನೆ ಎರಡು ಸ್ಥಾನ ಗಿಟ್ಟಿಸಿರುವ ಬೆಳಗಾವಿಗರ ಬೆಳಗಿನ ಬಾತ್ಮಿದಾರ ಮಾರಾಠಿ ದಿನಪತ್ರಿಕೆ ತರುಣ್ ಭಾರತ್ ಮತ್ತು ಬೆಂಗಳೂರಿನ ತಮಿಳು ದಿನಪತ್ರಿಕೆ ಡೈಲಿ ತಂತಿ ಕೂಡ ಓದುಗರನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡಿವೆ ಎಂದು ಐಆರ್ಎಸ್(IRS) ಸಮೀಕ್ಷೆ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X