ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಮಲ್ ಅಮೀರ್ ಕಸಬ್ ಗೆ ಗಲ್ಲು! ಎಂದು?

By Prasad
|
Google Oneindia Kannada News

Kasab to be hanged till death, but when?
ಮುಂಬೈ, ಮೇ 6 : ಯಾವುದೇ ಮಾನವೀಯತೆಯ ಸೆಳವಿಲ್ಲದೆ ಕಂಡಕಂಡವರನ್ನು ಬರ್ಬರವಾಗಿ ಹತ್ಯೆಗೈದ ಪಾಕಿಸ್ತಾನದ ಭಯೋತ್ಪಾದಕ 'ಕಸಾಯಿ' ಅಜ್ಮಲ್ ಅಮೀರ್ ಕಸಬ್ ಗೆ 2008ರ ನವೆಂಬರ್ 26ರಂದು ನಡೆದ ಮುಂಬೈ ಹತ್ಯಾಕಾಂಡ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಆತ ಸಾಯುವವರೆಗೆ ಆತನನ್ನು ನೇಣಿಗೆ ಹಾಕಬೇಕು.

ಇಂಥ ಶಿಕ್ಷೆಯನ್ನು ಅತ್ಯಂತ ವಿರಳಾತಿ ವಿರಳ ಕ್ರಿಮಿನಲ್ ಪ್ರಕರಣಗಳಲ್ಲಿ ಮಾತ್ರ ನೀಡಲಾಗುತ್ತದೆ. ಅಮಾಯಕರನ್ನು ಬರ್ಬರವಾಗಿ ಹತ್ಯೆಗೈದ, ಹತ್ಯೆಗೈಯಲು ಸಂಚು ಹೂಡಿದ, ರಾಷ್ಟ್ರದ ಮೇಲೆ ಯುದ್ಧ ಸಾರಿದ ಮುಂತಾದ ಆರೋಪ ಸಾಬೀತಾಗಿದ್ದರಿಂದ ಮುಂಬೈ ಹತ್ಯಾಕಾಂಡದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಕಸಬ್ ಗೆ ವಿಶೇಷ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಈ ಶಿಕ್ಷೆ ನಿರೀಕ್ಷಿತವಾದದ್ದೇ. ಕಸಬ್ ಕೂಡ ನನ್ನನ್ನು ಗಲ್ಲಿಗೇರಿಸಿ ಅಂತ ವಿಚಾರಣೆ ಸಮಯದಲ್ಲಿ ಮನವಿ ಮಾಡಿದ್ದ. ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಉಜ್ವಲ್ ನಿಕಂ ಗಲ್ಲಿಗಿಂತ ಕಡಿಮೆ ಶಿಕ್ಷೆ ನೀಡಬಾರದೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ ಕೂಡ ಈ ಶಿಕ್ಷೆಗೆ ಅರ್ಹ ಎಂದು ತೀರ್ಪು ನೀಡಿದೆ. ಇಡೀ ದೇಶ ಗಲ್ಲು ಶಿಕ್ಷೆ ನೀಡಬೇಕೆಂದು ಕೂಗೆಬ್ಬಿಸಿತ್ತು. ಇದೆಲ್ಲ ಸರಿ, ಆದರೆ ಮುಂದೆ?

ಗಲ್ಲು ಶಿಕ್ಷೆ ವಿಧಿಸಲಾಗಿದ್ದರೂ ಮುಂದಿನ ಕಾನೂನು ಪ್ರಕ್ರಿಯೆಗಳು, ಕಾನೂನು ತೊಡಕುಗಳು, ಇಂಥ ಅನೇಕ ಪ್ರಕರಣಗಳನ್ನು ನಡೆಸುತ್ತಿರುವ 'ವೇಗ' ಕಸಬ್ ಗೆ ಇಷ್ಟು ಬೇಗನೆ ಗಲ್ಲು ಶಿಕ್ಷೆ ವಿಧಿಸಲು ಬಿಡುವುದಿಲ್ಲ.

ಮೊದಲನೆಯದಾಗಿ ಕೆಳ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಯನ್ನು ಮುಂಬೈ ಉಚ್ಚ ನ್ಯಾಯಾಲಯದ ಅನುಮತಿಗಾಗಿ ಕೋರಬೇಕಾಗುತ್ತದೆ. ಕಸಬ್ ಗೆ ಕೆಳ ನ್ಯಾಯಾಲಯದ ತೀರ್ಪನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಅಲ್ಲಿ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿ ನಂತರ ಗಲ್ಲು ಶಿಕ್ಷೆಗೆ ಹೈಕೋರ್ಟ್ ಠಸ್ಸೆ ಒತ್ತುತ್ತದೆ. ಹೈಕೋರ್ಟ್ ತೀರ್ಪು ಬರಲು ಕೆಲ ತಿಂಗಳುಗಳೇ ಬೇಕಾಗಬಹುದು.

ಹೈಕೋರ್ಟ್ ಅನುಮೋದನೆ ದೊರೆತರೂ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅಪರಾಧಿಗೆ ಅವಕಾಶವಿದೆ. ಅಲ್ಲಿ ಕೂಡ ಇದೇ ಪ್ರಕ್ರಿಯೆ ಜರುಗಿ ಅಲ್ಲಿಯೂ ಗಲ್ಲು ಶಿಕ್ಷೆಗೆ ಅನುಮೋದನೆ ದೊರೆತರೆ ಶಿಕ್ಷೆ ಮಾಫಿಗಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು. ಅಲ್ಲಿಯೂ ಫಾಸಿಗೆ ಅನುಮತಿ ದೊರೆತಾದ ನಂತರವೇ ನೇಣಿಗೆ ಹಾಕಲಾಗುತ್ತದೆ.

ರಾಷ್ಟ್ರಪತಿಯಿಂದ ಗಲ್ಲಿಗೆ ಅನುಮೋದನೆ ದೊರೆಯುವ ಮೊದಲೂ ಆಯಾ ಕಡತವನ್ನು ಕೇಂದ್ರ ಗೃಹಮಂತ್ರಾಲಯಕ್ಕೆ ಕಳಿಸಲಾಗುವುದು. ಗೃಹ ಮಂತ್ರಾಲಯ ರಾಜ್ಯ ಸರಕಾರಕ್ಕೆ ಕಳಿಸಿ, ಅಲ್ಲಿ ಎಲ್ಲ ಪರಿಶೀಲನೆ ನಡೆದ ಬಳಿಕ ಕಡತ ಮತ್ತೆ ಗೃಹ ಸಚಿವಾಲಯಕ್ಕೆ ಹೋಗುತ್ತದೆ. ಗೃಹ ಸಚಿವಾಲಯ ರಾಷ್ಟ್ರಪತಿಯ ಕಾರ್ಯಾಲಯಕ್ಕೆ ಕಡತವನ್ನು ಕಳಿಸುತ್ತದೆ. ಅಲ್ಲಿಂದ ರಾಷ್ಟ್ರಪತಿಗೆ ಕಡತ ತಲುಪುತ್ತದೆ. ಇದನ್ನು ಮರುಪರಿಶೀಲಿಸಲು ರಾಷ್ಟ್ರಪತಿ ಕಡತವನ್ನು ಮತ್ತೆ ಕೇಂದ್ರ ಗೃಹ ಸಚಿವಾಲಯಕ್ಕೆ ಕಳಿಸಬಹುದು!

ಗಮನಿಸಿ, ಇದು ಇಲ್ಲಿಗೇ ಮುಗಿಯುವುದಿಲ್ಲ. ರಾಜೀವ್ ಹಂತಕಿ, ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಸೇರಿದಂತೆ ಇನ್ನೂ ಐವತ್ತಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟಿನಲ್ಲಿ, ಸುಪ್ರೀಂ ಕೋರ್ಟಿನಲ್ಲಿ, ರಾಷ್ಟ್ರಪತಿಗಳ ಮುಂದೆ ಮಾಫಿಗಾಗಿ ಕೊಳೆಯುತ್ತಾ ಬಿದ್ದಿವೆ. ಈ ಎಲ್ಲ ಪ್ರಕರಣಗಳು ಇತ್ಯರ್ಥವಾದ ಮೇಲೆಯೇ ಕಸಬ್ ನನ್ನು ಗಲ್ಲಿಗೇರಿಸುವ ಪ್ರಮೇಯ ಉದ್ಭವವಾಗುತ್ತದೆ. ಉಸ್!

ಅಲ್ಲಿಯವರೆಗೂ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಗೆ ಜೈಲಿನಲ್ಲಿ 'ರಾಜಾತಿಥ್ಯ'! ಇಷ್ಟಕ್ಕೂ ಎಲ್ಲ ತೊಡಕುಗಳೂ ನಿವಾರಣೆಯಾಗಿ ಗಲ್ಲಿಗೇರಿಸುವ ಸುಸಂದರ್ಭ ಬಂತೆಂದೇ ತಿಳಿಯೋಣ, ಆಗ ಗಲ್ಲಿಗೇರಿಸುವವರಾದರೂ ಯಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X