ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡು ರಸ್ತೆಯಲ್ಲೇ ಪ್ರತಿನಿತ್ಯ ಗೋಹತ್ಯೆ

By * ಚಂದ್ರಶೇಖರ್,ಸವಣೂರು
|
Google Oneindia Kannada News

Savanur citizens opposed Cow Slaughter houses
ಸವಣೂರ,ಮೇ.6 : ನಗರದ ಜನವಸತಿ ಪ್ರದೇಶದಲ್ಲಿಯೇ ಹತ್ತಾರು ಅಕ್ರಮ ಕಸಾಯಿಖಾನೆಗಳನ್ನು ನಿರ್ವಹಿಸಲಾಗುತ್ತಿದ್ದರೂ, ಕಣ್ಣುಮುಚ್ಚಿ ಕುಳಿತಿರುವ ಪುರಸಭೆಯ ಆಡಳಿತ ವೈಖರಿಯ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬುಧವಾರ ಸವಣೂರಿನ ಪುರಸಭೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ.

ಸವಣೂರಿನ ಧರ್ಮರಾಯನ ನಗರ ಹಾಗೂ ಮಹಾಂತೇಶ ಬಡಾವಣೆಯ ಸಾರ್ವಜನಿಕರು, ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಬೇಡಿಕೆಯನ್ನು ಕಡೆಗಣಿಸುತ್ತಿರುವ ಪುರಸಭೆಯ ಅಧಿಕಾರಿಗಳ ನಿರ್ಲಕ್ಷತನವನ್ನು ತೀವ್ರವಾಗಿ ಖಂಡಿಸಿದರು. ಕಸಾಯಿಖಾನೆಯನ್ನು ಪುರಸಭೆಯ ವತಿಯಿಂದ ಸ್ಥಗಿತಗೊಳಿಸದಿದ್ದಲ್ಲಿ, ಸಾರ್ವಜನಿಕರೇ ಮುಂದಾಗಿ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾನೂನಿಗೆ ವಿರುದ್ಧವಾಗಿ ಸಾರ್ವಜನಿಕ ಸ್ಥಳದಲ್ಲಿಯೇ ದನಗಳ ಕಸಾಯಿಖಾನೆ ನಿರ್ವಹಿಸಲಾಗುತ್ತಿದೆ . ಪುರನಿವಾಸಿಗಳಿಗೆ ಆರೋಗ್ಯಪೂರ್ಣವಾದ ವಾತಾವರಣ ಕಲ್ಪಿಸಬೇಕು ಎಂಬ ಬೇಡಿಕೆ ಕಡೆಗಣಿಸಲಾಗಿದ್ದು, ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ 20ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ. ಮನೆಗಳಲ್ಲಿಯೇ ದನಗಳನ್ನು ಕಡಿಯಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು.

ನಡುರಸ್ತೆಯಲ್ಲೇ ಮಾರಣ ಹೋಮ :ರಾಯನ ಬಡಾವಣೆಯ ನಡುಮಧ್ಯದಲ್ಲಿಯೇ ಬಹಿರಂಗವಾಗಿ ಕಸಾಯಿಖಾನೆಯನ್ನು ನಿರ್ವಹಿಸಲಾಗುತ್ತಿದೆ. ಹಗಲು-ರಾತ್ರಿ ಸೇರಿದಂತೆ ಸತತವಾಗಿ ದನಗಳನ್ನು ಕಡಿಯಲಾಗುತ್ತಿದ್ದು, ಯಾವುದೇ ನೈರ್ಮಲತೆ ಇಲ್ಲದಂತಾಗಿದೆ. ಬಡಾವಣೆಯ ತುಂಬ ದುರ್ವಾಸನೆ ತುಂಬಿಕೊಂಡಿದ್ದು, ಪ್ರತಿ ಮನೆಗಳಲ್ಲಿಯೂ ಸದಾಕಾಲ ಅನಾರೋಗ್ಯದ ಸಮಸ್ಯೆ ಎದುರಾಗಿದೆ. ಅಸಹನೀಯವಾದ ವಾತಾವರಣದಿಂದ ಮಕ್ಕಳ ಮೇಲೂ ದುಷ್ಪರಿಣಾಮಗಳು ಆಗುತ್ತಿದೆ. ಕಸಾಯಿಖಾನೆಯಿಂದಾಗಿ ಓಣಿಯಲ್ಲಿ ಬೀಡಾಡಿ ನಾಯಿಗಳ ಹಾವಳಿಯೂ ಅಧಿಕವಾಗಿದೆ. ಕಸಾಯಿಖಾನೆಯ ಎದುರಿನಲ್ಲಿ ಸಂಗ್ರಹಿಸಲಾಗುವ ಎಲ್ಲ ಕಲ್ಮಶಗಳನ್ನು ನಾಯಿಗಳು ಮನೆಯ ಅಂಗಳಕ್ಕೆ ತರುತ್ತಿವೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಮಳೆಗಾಲದ ಅವಧಿಯಲ್ಲಿ ಕಸಾಯಿಖಾನೆಯ ಕಲ್ಮಶಗಳು ಕೊಳಚೆ ನೀರಿನೊಂದಿಗೆ ಮನೆಗಳ ಬಾಗಿಲಿಗೆ ಬರುತ್ತದೆ. ಬಳಿಕ ಎಲ್ಲ ಕಲ್ಮಶಗಳು ಮೋತಿ ತಲಾಬ ಕೆರೆಯನ್ನು ಸೇರ್ಪಡೆಗೊಳ್ಳುತ್ತದೆ. ತಮ್ಮ ಬಡಾವಣೆಯಲ್ಲಿ ಬಂಕಾಪೂರ, ಹುಲಗೂರ ಸೇರಿದಂತೆ ಪರಸ್ಥಳಗಳಿಂದ ಬರುವ ವ್ಯಕ್ತಿಗಳೂ ದನಗಳನ್ನು ಕಡಿದು ಸಾಗಿಸುತ್ತಾರೆ. ಸವಣೂರ ತಾಲೂಕು ಸೇರಿದಂತೆ ಮುಂಡಗೋಳ, ಗೋವಾಗಳಿಗೂ ಇಲ್ಲಿನ ದನದ ಮಾಂಸ ಸಾಗಾಣಿಕೆಗೊಳ್ಳುತ್ತದೆ. ಒಂದು ಹನಿ ನೀರಿನ ಸೌಲಭ್ಯವೂ ಇಲ್ಲದ ಕಸಾಯಿಖಾನೆಯಲ್ಲಿ ಅವೈಜ್ಞಾನಿಕವಾಗಿ ದನಗಳನ್ನು ವಧಿಸಲಾಗುತ್ತದೆ. ಅನಾರೋಗ್ಯಕರವಾದ ರೀತಿಯಲ್ಲಿ ಮಾಂಸವನ್ನು ಸಾಗಾಣಿಕೆ ಮಾಡಲಾಗುತ್ತದೆ.

ಹೊಸ ಕಸಾಯಿಖಾನೆಯ ನಿರ್ಮಾಣಕ್ಕಾಗಿ 2007-08 ನೇ ಸಾಲಿನಲ್ಲಿ ಲಭ್ಯವಾಗಿರುವ 12 ಲಕ್ಷ ರೂ ಅನುದಾನವೂ ಬಳಕೆಯಾಗದೆ ಉಳಿದುಕೊಂಡಿದೆ. ಜನವಸತಿ ಪ್ರದೇಶದಲ್ಲಿರುವ ಕಸಾಯಿಖಾನೆ ಸ್ಥಳಾಂತರಿಸಲು ಎರಡು ತಿಂಗಳ ಕಾಲಾವಕಾಶವನ್ನು ಪಡೆದುಕೊಂಡ ಮುಖ್ಯಾಧಿಕಾರಿ ಎಚ್.ಎನ್ ಭಜಕ್ಕನವರ್, ಕಸಾಯಿಖಾನೆಯ ನಿವೇಶನ ಖರೀದಿಗಾಗಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರೆತಿಲ್ಲ. ನಿವೇಶನದ ಬಗ್ಗೆಯೂ ಸಮ್ಮತಿ ನೀಡಿಲ್ಲಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಬಗ್ಗೆ ಪುನಃ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗುತ್ತದೆ. ನಗರದ ನಡುವಿನಲ್ಲಿರುವ ಕಸಾಯಿಖಾನೆಯನ್ನು ಏಕಾಏಕಿ ಬಂದ್ ಮಾಡಿದಲ್ಲಿ ಸಮಸ್ಯೆ ಉದ್ಭವಿಸಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂತೋಷ ಹಿರೇಗೌಡ್ರ, ನಿಂಗಪ್ಪ ಜಡಿ, ಮಹ್ಮದಖಾಸಿಂ ದರ್ಗಾವಾಲೆ, ಅಲ್ಲಾವುದ್ದೀನ್ ಲೋಹಾರ, ರಿಯಾಜ್‌ಅಹ್ಮದ ಬಾಯಬಡಕಿ, ಹುಸೇನ ಪಠಾಣ, ಶೇಖಪ್ಪ ಹುಣಸಿಹಣ್ಣನವರ್, ಶಿವಪ್ಪ ಬಂಕಾಪೂರ, ಗೂಡುಅಹ್ಮದ ಬಾಯಬಡಕಿ, ಹನುಮಂತಪ್ಪ ಡವಳಗಿ, ತುಕಾರಾಂ ಸಡಂಕರ್, ರಾಮಣ್ಣ ಭೋವಿ, ಅಬ್ದುಲಖಾದರ್ ಲೋಹಾರ ಸೇರಿದಂತೆ 25 ಕ್ಕೂ ಹೆಚ್ಚು ಸಾರ್ವಜನಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X