• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಲಸಂಪನ್ಮೂಲ ಸಚಿವರ ಊರಲ್ಲೇ ನೀರಿಗೆ ಬರ

By * ಚಂದ್ರಶೇಖರ್,ಸವಣೂರು
|

ಸವಣೂರ,ಏ.29 : ಸಂಸ್ಥಾನದ ನವಾಬರ ಕಾಲದಲ್ಲಿದ್ದ ಗುಲಾಮಿ ಮನಃಸ್ಥಿತಿಯನ್ನು ಯಥಾಪ್ರಕಾರ ಉಳಿಸಿಕೊಂಡು ಬಂದಿರುವ ಸವಣೂರ ತಾಲೂಕಿನ ಜನರನ್ನು, ಇಂದಿಗೂ ಕಾಡುತ್ತಿರುವ ಪ್ರಮುಖ ಸಮಸ್ಯೆ ಸಮರ್ಥವಾದ ನಾಯಕತ್ವದ ಕೊರತೆ. ಕುಡಿಯುವ ನೀರು, ಗುಣಮಟ್ಟದ ರಸ್ತೆ, ಸಮರ್ಥವಾದ ಆಡಳಿತ ಸೇರಿದಂತೆ ಕನಿಷ್ಠ ಪ್ರಮಾಣದ ಮೂಲಭೂತ ಸೌಲಭ್ಯಗಳಿಗೂ ತತ್ವಾರ ಪಡುತ್ತಿರುವ ತಾಲೂಕಿನ ಜನ, ಪ್ರಶ್ನಿಸುವ ಮನಸ್ಥಿತಿಯನ್ನೂ ಕಳೆದುಕೊಂಡಿರುವದು ಮಾತ್ರ ಇಂದಿನ ವ್ಯವಸ್ಥೆ ನೀಡಿದ ಬಳುವಳಿಯಾಗಿದೆ.

63 ಹಳ್ಳಿಗಳ ಚಿಕ್ಕ ತಾಲ್ಲೂಕು ಆಗಿರುವ ಸವಣೂರ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿದ್ದು, ವಾಸ್ತವದಲ್ಲಿ ಒಂದು ಚಿಕ್ಕ ಹೋಬಳಿ ಮಟ್ಟದ ಸ್ವರೂಪ ಪಡೆದುಕೊಂಡಿದೆ. ಹೆಸರಿಗೆ ಮಾತ್ರ ರಾಜ್ಯದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇಬ್ಬರು ಶಾಸಕರು, ಇಬ್ಬರು ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ಐ.ಎ.ಎಸ್ ತರಬೇತಿ ಹೊಂದಿದ ಉಪವಿಭಾಗಾಧಿಕಾರಿಗಳನ್ನು ಹೊಂದಿದ್ದರೂ, 50 ವರ್ಷಗಳ ಹಿಂದಿನ ಸಮಸ್ಯೆಗಳು ಮಾತ್ರ ಇಂದಿಗೂ ಜೀವಂತವಾಗಿದೆ.

ವರದೆಯ ದಯೆ: ಪರಿಣಾಮ, ಸವಣೂರ ನಗರ ಸೇರಿದಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗಳೂ ಅಕ್ಷರಶಃ ಕೊಳಚೆ ಪ್ರದೇಶವಾಗಿ ರೂಪಗೊಂಡಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ಮೂಲಭೂತ ಸೌಲಭ್ಯಗಳ ಕೊರತೆ, ಕೀಳು ಮಟ್ಟದ ರಾಜಕೀಯ ಸೇರಿದಂತೆ ಎಲ್ಲ ಅವಲಕ್ಷಣಗಳೂ ಗ್ರಾಮಗಳನ್ನು ಆವರಿಸಿಕೊಂಡಿದೆ. ತಾಲೂಕಿನ ಜೀವನದಿಯಾದ ವರದೆಯಲ್ಲಿ ನೀರಿಗಿಂತ ಹೆಚ್ಚು ಸರಕಾರಿ ಅನುದಾನ ವ್ಯರ್ಥವಾಗಿ ಹರಿದು ಹೋಗಿದೆ. ದೂರದೃಷ್ಟಿ ಇರದೆ ತಾತ್ಕಾಲಿಕ ಪರಿಹಾರಕ್ಕೆ ಎಂಬಂತೆ ರೂಪಿಸಲಾಗಿದ್ದ ಹಲವಾರು ಯೋಜನೆಗಳೂ ಅಪೂರ್ಣ ಹಾಗೂ ವಿಫಲ ಹಂತದಲ್ಲಿ ಉಳಿದುಕೊಂಡಿದೆ. ನಾಗನೂರ ಏತ ನೀರಾವರಿ ಯೋಜನೆ, ಮೋತಿ ತಲಾಭ ಏತ ನೀರಾವರಿ ಯೋಜನೆ ಅತಿಯಾದ ನಿರೀಕ್ಷೆಯೊಂದಿಗೆ ಅಕಾಲಿಕ ಪ್ರಸವ ಕಂಡಿದೆ.

ಶಿಗ್ಗಾಂವ Vs ಸವಣೂರ: ಏಕೋ ಏನೋ ಆರಂಭದಿಂದಲೂ ಸವಣೂರಿಗಿಂತ ಶಿಗ್ಗಾಂವ ಪಟ್ಟಣದ ಬಗ್ಗೆಯೇ ಹೆಚ್ಚಿನ ಕಳಕಳಿ ಹೊಂದಿರುವ ಸಚಿವ ಬಸವರಾಜ ಬೊಮ್ಮಾಯಿ ಅವರ ಆಗಮನದ ಬಳಿಕ, ಕ್ಷೇತ್ರದಲ್ಲಿ ಪರಿವರ್ತನೆಯ ತಿಳಿಗಾಳಿಯೊಂದು ಬೀಸಿ ಬಂದಿದೆ. ಉಳಿದೆಲ್ಲದಕ್ಕಿಂತ ಮುಖ್ಯವಾಗಿ, ಕಳೆದ 50 ವರ್ಷಗಳ ಪ್ರಮುಖ ಸಮಸ್ಯೆಯಾಗಿದ್ದ ನೀರಿನ ಕೊರತೆಗೆ ಪರಿಹಾರ ಲಭಿಸಬಹುದು ಎಂಬ ನಿರೀಕ್ಷೆಗಳಿಗೆ ನೆಲೆ ಸಿಗುತ್ತಿದೆ. ಶಿಗ್ಗಾಂವ ಪಟ್ಟಣವನ್ನು ಅವಲಂಬಿಸಿದರೂ ಸರಿ, ತಾಲೂಕಿನ ಕೆಲವು ಹಳ್ಳಿಗಳು ನೀರಾವರಿಗೆ ಒಳಪಡಬಹುದು. ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಳಗೊಳ್ಳಬಹುದು.

ನವಾಬರ ಕಾಲದಿಂದಲೂ ನೀರಿನ ಕೊರತೆ ಕಂಡಿರುವ ಸವಣೂರಿನಲ್ಲಿ ಮೊತ್ತಮೊದಲ ಕೊಳವೆಭಾವಿಯನ್ನೂ ನವಾಬರೇ ಪರಿಚಯಿಸಿದ್ದರು. ಅಂದಿನಿಂದಲೂ ಕುಡಿಯುವ ನೀರಿಗಾಗಿ ಕೊಳವೆ ಭಾವಿಯನ್ನೇ ಅವಲಂಬಿಸಿದ ವ್ಯವಸ್ಥೆ, ಕಂಡಕಂಡಲ್ಲಿ ಭೂಮಿಗೆ ಕನ್ನ ಕೊರೆಯಿತು. ಅಂತರ್ಜಲಮಟ್ಟ 500 ಅಡಿಗಳಿಗೆ ಇಳಿದರೂ ಅದನ್ನು ಬೆನ್ನು ಹತ್ತಿದ ವ್ಯವಸ್ಥೆ, ಲವಣ ಮಿಶ್ರಿತವಾದ (ಸವಳು ನೀರು) ಅಯೋಗ್ಯ ನೀರನ್ನೇ ಜನರಿಗೆ ಕರುಣಿಸಿತು. ಟ್ಯಾಂಕರ್ ಮೂಲಕ ನೀರು ಪೂರೈಸುವ, ಓಣಿಗೆ ಒಂದು ಸಾರ್ವಜನಿಕ ಕೊಳವೆ ಬಾವಿ ಕೊರೆಸುವ ಹತ್ತಾರು ವಿಧಾನಗಳನ್ನು ಕಂಡುಕೊಂಡು ಸರಕಾರದ ಅನುದಾನವನ್ನು ಪ್ರತಿವರ್ಷವೂ ಕೊಳ್ಳೆಹೊಡೆಯಿತು. ಬರಗಾಲವೇ ಬೀಳಲಿ, ಅತಿವೃಷ್ಠಿಯೇ ಆಗಲಿ ಕುಡಿಯುವ ನೀರು ಒಂದು ವ್ಯವಸ್ಥಿತವಾದ ಆದಾಯದ ಮೂಲವಾಗಿ ರೂಪಗೊಂಡಿತು.

ಕೃತಕ ಅಭಾವ ಸೃಷ್ಟಿ : ಕಳೆದ ವರ್ಷ ರಾಜ್ಯಾಧ್ಯಂತ ಅತಿವೃಷ್ಟಿಯಾಗಿ ಎಲ್ಲ ಕೆರೆ ಕೊಳ್ಳಗಳು ತುಂಬಿ ಹರಿದರೂ, ಸವಣೂರಿನ ಮೋತಿ ತಲಾಬ ಕೆರೆ ಮಾತ್ರ ಬಂಜೆಯಾಗಿ ಉಳಿದುಕೊಂಡಿತು. ಮೋತಿ ತಲಾಬ ಏತ ನೀರಾವರಿ ಯೋಜನೆಯೂ ಕೆರೆಯ ಒಡಲನ್ನು ತುಂಬಿಸಲು ಅಸಮರ್ಥವಾಯಿತು. ಇದರೊಂದಿಗೆ ನೀರಿನ ಪೂರೈಕೆಯನ್ನು ಒಂದು ಆದಾಯದ ಮೂಲವಾಗಿ ಮಾಡಿಕೊಂಡಿರುವ ಸವಣೂರ ಪುರಸಭೆಯೂ ಕೃತಕ ಅಭಾವ ಸೃಷ್ಟಿಸುವ ಮೂಲಕ ಜನರನ್ನು ವ್ಯವಸ್ಥಿತವಾಗಿ ಸುಲಿಗೆ ಮಾಡಿತು. ಸಾರ್ವಜನಿಕರೂ, ಹಣ ಕೊಟ್ಟು ನೀರು ಬಿಡಿಸಿಕೊಳ್ಳುವ ಮಟ್ಟಿಗೆ ಸುಧಾರಣೆ ಕಂಡುಕೊಂಡರು. ಅನಾರೋಗ್ಯ ಎಂಬ ವೈರಸ್ ದಿನಕ್ಕೊಂದು ಬಗೆಯ ನೀರು ಕುಡಿಯುವ ಜನರ ಮನೆಯ ಹಿಂಬಾಗಿಲಿಗೆ ಬಂದಿತು.

ಉಸಿರಿಲ್ಲದ ಕೊಳವೆ ಬಾವಿ: ಗ್ರಾಮದ ತುಂಬೆಲ್ಲಇರುವ ಕೊಳವೆ ಬಾವಿಗಳ ಆಳದಲ್ಲಿ ನೀರಿದ್ದರೂ ಅದನ್ನು ಮೇಲೆತ್ತಲು ವಿದ್ಯುತ್ ಹರಿಯುತ್ತಿಲ್ಲ. ಕೆಲವು ಕಡೆಗಳಲ್ಲಿ ಕೊಳವೆ ಬಾವಿಗಳಿಗೆ ಮೋಟಾರ್‌ಗಳನ್ನೆ ಅಳವಡಿಸಲಾಗಿಲ್ಲ. ಮೋಟಾರ್ ಇದ್ದಲ್ಲಿ ಸ್ಟಾರ್‍ಟರ್‌ಗಳಿಲ್ಲ. ಸ್ಟಾರ್‍ಟರ್ ಇದ್ದಲ್ಲಿ ವಾಟರ್ ಮೆನ್ ಇಲ್ಲ. ಮಾಜಿ ಅಧ್ಯಕ್ಷರ ಮನೆ ಹೊಲಗಳಿಗೆ ಅಳವಡಿಸಲಾಗಿರುವ ಮೋಟಾರ್‌ಗಳೂ ಪಂಚಾಯ್ತಿಗೆ ಮರಳಿ ಬಂದಿಲ್ಲ. ದುರಸ್ಥಿಗೊಂಡ ಮೋಟಾರ್‌ಗಳನ್ನು ತರಲು ಪಂಚಾಯ್ತಿಯಲ್ಲಿ ಅನುದಾನ ಇಲ್ಲ. ಅನುದಾನ ಇದ್ದಲ್ಲಿ ಆಡಳಿತ ಮಂಡಳಿ ಇಲ್ಲ. ಸಭೆ ಜರುಗಿಲ್ಲ. ಆಡಳಿತಾಧಿಕಾರಿ ಪಂಚಾಯ್ತಿಗೆ ಬರುವದಿಲ್ಲ. ಪಂಚಾಯ್ತಿ ಕಾರ್ಯದರ್ಶಿಗೆ ಬಿಡುವು ಇಲ್ಲ. ಟೆಕ್ನಿಕಲ್ ಪ್ರಾಬ್ಲಮ್‌ಗಳಿಗೆ ಕೊನೆ ಎನ್ನುವದೇ ಇಲ್ಲ. ಇದರೊಂದಿಗೆ ಒಡೆದು ಹೋಗಿರುವ, ಸೋರುವ ಓವರ್‌ಹೆಡ್ ಟ್ಯಾಂಕ್‌ಗಳು, ಸದಾಕಾಲ ನೀರು ಹರಿದು ಹೋಗುವ ಪೈಪ್‌ಲೈನ್‌ಗಳು, ಪಂಚಾಯ್ತಿ ರಾಜಕೀಯದಲ್ಲಿ ಬ್ಯೂಸಿಯಾಗಿರುವ ಸಿಬ್ಬಂದಿ, ಇಲ್ಲಿನ ನಿತ್ಯದ ಗೋಳು.

ಉಪಸಂಹಾರ : 200 ಕೋಟಿ ರೂಗಳ ಶಿಗ್ಗಾಂವ ಏತ ನೀರಾವರಿ ಯೋಜನೆ, 35 ಕೋಟಿ ರೂಗಳಲ್ಲಿ ಸವಣೂರ-ಶಿಗ್ಗಾಂವ ಹಾಗೂ ಬಂಕಾಪೂರ ಪುರಸಭೆಗಳಿಗೆ ಪ್ರತ್ಯೇಕವಾದ ಕುಡಿಯುವ ನೀರಿನ ಯೋಜನೆ, ಸವಣೂರಿನ ಪುರಸಭೆಗೆ ಪ್ರತ್ಯೇಕವಾದ 10 ಕೋಟಿ ರೂಗಳ ಅನುದಾನ ಸೇರಿದಂತೆ ಈ ಬಾರಿ ಸವಣೂರ ತಾಲೂಕು ಅನುದಾನದ ಅತಿವೃಷ್ಟಿಯನ್ನೂ ಕಂಡಿದ್ದರೂ ಅದರ ಫಲವನ್ನು ಮಾತ್ರ ಮುಂಬರುವ

ವರ್ಷಗಳಲ್ಲಿ ಕಾಣಬಹುದಾಗಿದೆ.

ಸವಣೂರ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಭವಿಷ್ಯದಲ್ಲಿ ಪರಿಹಾರ ವಾಗಬಹುದಾಗಿದ್ದರೂ, ಈ ವರ್ಷ ಮಾತ್ರ ನೀರಿನ ಕೊರತೆ ಪ್ರತಿವರ್ಷದಂತಿದೆ. ಸಚಿವ ಬಸವರಾಜ ಬೊಮ್ಮಾಯಿ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದರೂ, ಅದನ್ನು ಅನುಷ್ಠಾನಗೊಳಿಸುವಲ್ಲಿ ಮಾತ್ರ ಸ್ಥಳೀಯ ಪುರಸಭೆಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಎಂಬಬೊಮ್ಮಾಯಿ ಕೃಪಾಪೋಷಿತ ನಾಟ್ಯ ಮಂಡಳಿ ಹೆಜ್ಜೆಗೊಮ್ಮೆ ಎಡವುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more