ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ

By * ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

ಸವಣೂರ,ಏ.20 : ನಗರದ ಶ್ರೀರೇಣುಕಾಚಾರ್ಯ ಮಂದಿರದ ಪವಿತ್ರ ಪ್ರಾಂಗಣದಲ್ಲಿ ಶನಿವಾರದಿಂದ ಮೂರು ದಿನಗಳ ಪರ್ಯಂತ ಎರ್ಪಡಿಸಲಾಗಿದ್ದ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರೀ ವೀರಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗಾನುಷ್ಟಾನ ಮಹಾಪೂಜೆ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು.

ಬಾಳೆಹೊನ್ನೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರ ವೇದಘೋಷ ಹಾಗೂ ಸುಮಂಗಲೆಯರಿಂದ ಆಗ್ರೋಧಕ ತರುವ ಸೇವೆಯೊಂದಿಗೆ ಸತತ ಮೂರು ದಿನಗಳ ಕಾಲ ರಂಭಾಪುರೀ ಜಗದ್ಗುರುಗಳ ಭವ್ಯ ಮಹಾಪೂಜೆಯನ್ನು ಕಣ್ಣುತುಂಬಿಕೊಂಡ ಸವಣೂರಿನ ಭಕ್ತ ಸಮೂಹ ಧನ್ಯತಾ ಭಾವವನ್ನು ಹೊಂದಿದರು. ಅತ್ಯಂತ ಸೂವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದ ಧರ್ಮ ಸಮಾವೇಶ ಸೇವಾ ಸಮೀತಿಯ ಸದಸ್ಯರ ಶ್ರಮವೂ ಸಾರ್ಥಕ್ಯವನ್ನು ಕಂಡಿತು.

ಕಾರ್ಯಕ್ರಮದ ಅಡಿ ಸೋಮವಾರ ತಮ್ಮ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದ ಜಗದ್ಗುರುಗಳು ಶುಭ ಸಂದೇಶ ನೀಡಿ, ಪರಿಶುದ್ಧವಾದ ಭಸ್ಮ (ವಿಭೂತಿ)ದ ಮಹಿಮೆ ಹಾಗೂ ಬಳಸುವ ವಿಧಾನಗಳನ್ನು ವಿವರಿಸಿದರು. ಪ್ರತಿನಿತ್ಯವೂ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ. ಧರ್ಮದ ಹಾದಿಯಿಂದ ವಿಮುಖರಾಗಬೇಡಿ ಎಂದು ಸೂಚಿಸಿದ ಜಗದ್ಗುರುಗಳು, ವೀರಶೈವರಲ್ಲಿ ಲಿಂಗದ ಧಾರಣೆ ವಿರಳವಾಗುತ್ತಿದೆ. ಲಿಂಗಪೂಜೆ ಧಾರಣೆಯ ಬಗ್ಗೆ ಯುವ ಸಮೂಹ ಉದಾಸೀನತೆ ತೋರುತ್ತಿದೆ. ಈ ಪ್ರವೃತ್ತಿ ಸಮಾಜಕ್ಕೆ ಒಂದು ಪಿಡುಗಿನ ರೂಪದಲ್ಲಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಧರ್ಮ ಹಾಗೂ ಧರ್ಮಾಚರಣೆಗೆ ಅಗತ್ಯವಿದ್ದು, ವೀರಶೈವ ಧರ್ಮದ ಆಚರಣೆಗಳು ವೈಜ್ಞಾನಿಕವಾಗಿಯೂ ಪ್ರಸ್ಥುತವಾಗಿದೆ. ಲಿಂಗಪೂಜೆ, ಮಹಾಮಂತ್ರ ಪಠಣದಿಂದ, ಜೀವನದಲ್ಲಿ ಆರೋಗ್ಯ, ಉತ್ಸಾಹ, ಸ್ಪೂರ್ತಿ ಹಾಗೂ ಸಾಮಾಜಿಕ ಕಾರ್ಯದಲ್ಲಿ ಆಸಕ್ತಿಯನ್ನು ಹೊಂದಬಹುದಾಗಿದೆ. ವಿಭೂತಿ ಧಾರಣೆಯಿಂದ ಸಂಪತ್ತು ಪ್ರಾಪ್ತಿಯೊಂದಿಗೆ ಪಾಪ ತಾಪಗಳು ದೂರವಾಗುತ್ತದೆ. ಶಿವಜ್ಞಾನ ಪ್ರಕಾಶಮೂಡಿ, ಪೂರ್ವಾರ್ಜಿತ ಕರ್ಮಗಳು ನಾಶವಾಗುತ್ತದೆ. ರೋಗ ರುಜಿನಗಳು ನಿವಾರಣೆಯಾಗುತ್ತದೆ, ಪೈಶಾಚಿಕ ಕೃತ್ಯ ಹಾಗೂ ದುಷ್ಠಶಕ್ತಿಗಳು ಉಪಶಮನಗೊಳ್ಳುತ್ತದೆ ಎಂದರು.

ಸಾವಯಮ ಕೃಷಿಗೆ ಆದ್ಯತೆ : 5 ಪ್ರತ್ಯೇಕ ತಳಿಗಳ ಗೋಮಯದ ಮೂಲಕ ಪರಿಶುದ್ಧವಾದ ಭಸ್ಮ ತಯಾರಿಸುವ ಬಗ್ಗೆ ವಿವರಿಸಿದ ಜಗದ್ಗುರುಗಳು, ಇಂದು ಎಲ್ಲಡೆಗಳಲ್ಲಿ ನಕಲಿ ವಿಭೂತಿಗಳ ಹಾವಳಿ ಹೆಚ್ಚಳವಾಗಿದೆ. ನಿಷ್ಪ್ರಯೋಜಕವಾದ ನಕಲಿ ಭಸ್ಮವೇ ಶೇ. 99 ರಷ್ಟು ಲಭ್ಯವಾಗುತ್ತದೆ ಎಂದು ತಿಳಿಸಿದರು. ಆಹಾರ ಧಾನ್ಯಗಳೂ ನಿಸ್ಸತ್ವಗೊಂಡಿದ್ದು, ರೋಗಗಳಿಗೆ ಕಾರಣವಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಾವಯವ ಕೃಷಿಗೆ ಆದ್ಯತೆ ನೀಡಿ ಎಂದು ಸೂಚಿಸಿದರು. ಸವಣೂರಿನಲ್ಲಿ ಶಾಖಾ ಮಠ ಆರಂಭಿಸುವ ಯೋಗ್ಯ ಪಟ್ಟಾಧಿಕಾರಿಗಳನ್ನು ನೀಡುವ ಆಶಯ ವ್ಯಕ್ತಪಡಿಸಿದರು.

ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ರಾಜಶೇಖರ ಸಿಂಧೂರ ಸೇರಿದಂತೆ ನಗರದ ಹಲವಾರು ಪ್ರಮುಖರು ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಪರ್ಯಂತ ನಗರದಾಧ್ಯಂತ ಸಂಚರಿಸಿದ ಜಗದ್ಗುರುಗಳು ಭಕ್ತರ ನಿವಾಸದಲ್ಲಿ ಪಾದಪೂಜೆಯನ್ನು ಸ್ವೀಕರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X