• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತೆ ಪೂಜೆಗೆ ಲಕ್ಷಾಂತರ ಸುರಿವ ಕುರುಬರು

By Mahesh
|

ಕಷ್ಟ ಸಹಿಷ್ಣುತೆಯೊಂದಿಗೆ ಅಪ್ರತಿಮವಾದ ದೈವ ಭಕ್ತಿಗೆ ಹೆಸರಾಗಿರುವ ಸಂಚಾರಿ ಕುರುಬ ಜನಾಂಗದಲ್ಲಿ ಅನಾದಿಕಾಲದಿಂದಲೂ ರೂಢಿಯಲ್ಲಿರುವ ಅಪರೂಪದ ಧಾರ್ಮಿಕ ಆಚರಣೆಯೊಂದು ಸವಣೂರ ತಾಲೂಕಿನ ಬಳಿ ಜರುಗಿತು. ಜನವಸತಿ ಪ್ರದೇಶದಿಂದ ದೂರದ ಹೊಲದಲ್ಲಿ ತನ್ನ ಕುರಿ ಮಂದೆಯೊಂದಿಗೆ ಬೀಡು ಬಿಟ್ಟಿರುವ ಕುರಣಗಿಯ ಬೀರಪ್ಪ ಶಂಕ್ರಪ್ಪ ಮಾರಾಯ ಅವರ ಬಳಿಯಲ್ಲಿನ ಕುರಿಗಳ ಗಣತಿ ಸಾವಿರದ ಗಡಿ ದಾಟಿದ ಪ್ರಯುಕ್ತ, ಕುರಿಮಂದೆಯಲ್ಲಿ ಕತ್ತೆಯನ್ನು ಬಿಡುವ (ಪೂಜಿಸುವ) ವಿಶಿಷ್ಟ ಸಂಪ್ರದಾಯವನ್ನು ಪಾಲಿಸಲಾಯಿತು.

ಕತ್ತೆ ಪೂಜಿಸುವ ಸಂಚಾರಿ ಕುರುಬ ಜನಾಂಗದ ಸಂಪ್ರದಾಯವನ್ನು ವಿಧಿವತ್ತಾಗಿ ಕೈಗೊಂಡ ಬೀರಪ್ಪ, ತನ್ನೆಲ್ಲ ಬಳಗವನ್ನು ಕರೆದು ಸಿಹಿ ಊಟದೊಂದಿಗೆ ವಸ್ತ್ರ ಉಡುಗೊರೆ ನೀಡಿ ಸಂಬ್ರಮಿಸಿದರು. ರಾಜ್ಯದ ತುಂಬೆಲ್ಲ ಸಂಚರಿಸುವ, ಕೆಲವೊಮ್ಮೆ ಪರರಾಜ್ಯಗಳಿಗೂ ಕಾಲಿರಿಸುವ ಸಂಚಾರಿ ಕುರುಬರು ವಂಶಪಾರಂಪರ್ಯವಾದ ಕುರಿ ಸಾಕಾಣಿಕೆಯಲ್ಲಿಯೇ ತೃಪ್ತಿಯನ್ನು ಕಂಡುಕೊಂಡವರು. ತಮ್ಮ ವೃತ್ತಿಯಲ್ಲಿ ಮಿತಿ ಮೀರಿದ ಪ್ರತಿಫಲ ಲಭಿಸಿದ ಸಂದರ್ಭದಲ್ಲಿ ದೈವದ ಸ್ಮರಣೆಯೊಂದಿಗೆ, ಕುಲಬಾಂಧವರನ್ನು ಕರೆಸಿ ಕತ್ತೆ ಪೂಜಿಸುವ ಹರಕೆಯನ್ನು ಪಾಲಿಸುತ್ತಾರೆ. ಈ ಸಂದರ್ಭದಲ್ಲಿ ಮಂದೆಯಲ್ಲಿನ ಕೆಲವು ಕುರಿಗಳು, ಹಸುಗಳೂ ಸಹ ಪೂಜಿಸಲ್ಪಡುತ್ತದೆ.

ದುಬಾರಿ ಆಚರಣೆ : ಕನಿಷ್ಠ 1 ರಿಂದ 1.5 ಲಕ್ಷ ರೂಗಳ ವೆಚ್ಚ ಮಾಡಿ ಆಚರಿಸಲಾಗುವ ಈ ಕುರಿ ಪೂಜೆಯಲ್ಲಿಯೂ ಹಲವಾರು ವಿಧಗಳಿದ್ದು, ಆಚರಣೆಯ ಪದ್ದತಿಗಳು ಕುಲದೈವವನ್ನು ಆಧರಿಸಿ ಜರುಗುತ್ತದೆ. ಕಿವಿ ಕುರುಬರು ಎಂಬ ಇನ್ನೊಂದು ಹೆಸರೂ ಇರುವ ಸಂಚಾರಿ ಕುರುಬರ ಈ ವೈಶಿಷ್ಠಪೂರ್ಣ ಹಾಗೂ ಅಪರೂಪದ ಆಚರಣೆಗೆ ಬೀರದೇವರು ಮನೆ ದೇವರಾಗಿದ್ದಲ್ಲಿ ಅಲಗ ಹಾಯುವದು, ಮೈಲಾರಲಿಂಗ ದೇವರ ಆರಾಧಕರಾದರೆ ಪಂಚು ಬೆಳಕು ಹೊಡೆಯುವದು, ಹೆಣ್ಣು ದೇವತೆ ಚಿಂಚಲಿ ಮಾಯಮ್ಮ ಕುಲದೈವವಾಗಿದ್ದರೆ ಗೊಂದಲ ಅಥವಾ ಜಕನೇರಿ ಕೊಡದ ಆಚರಣೆಯನ್ನೂ ಕೈಗೊಳ್ಳಲಾಗುತ್ತದೆ ಎಂದು ಕುರುಬ ಸಮಾಜದ ಬಗ್ಗೆ ವಿಶೇಷ ಅಧ್ಯಯನ ಕೈಗೊಂಡಿರುವ ಪ್ರೋ. ಎಸ್.ಎಫ್ ಜಕಬಾಳ ತಿಳಿಸಿದ್ದಾರೆ.

ನೂರಾರು ಕುರಿಗಳನ್ನೇ ನಿಯಂತ್ರಿಸಲು ಹರಸಾಹಸ ಪಡೆಬೇಕಾಗಿರುವ ಸಂದರ್ಭದಲ್ಲಿ, ದೊಡ್ಡಿಯಲ್ಲಿನ ಕುರಿಗಳ ಸಂಖ್ಯೆ ಸಾವಿರವನ್ನು ದಾಡುವದೆ ಅತ್ಯಂತ ಅಪರೂಪ. ಕುರಿಗಳ ಸಂಖ್ಯೆ ಸಾವಿರದ ಗಡಿಯನ್ನು ದಾಟುತ್ತಿದ್ದಂತೆ ಆಪ್ತರೊಂದಿಗೆ ಚರ್ಚಿಸುವ ದೊಡ್ಡಿಯ ಯಜಮಾನ, ಪುರೋಹಿತರ ಸೂಚನೆಯಂತೆ ಶುಭದಿನವನ್ನು ನಿಗದಿ ಪಡಿಸುತ್ತಾರೆ. ಬಳಿಕ ಅಗಸರ ಬಳಿಗೆ ತೆರಳಿ, ಎರಡು ಸೂಲು ಮರಿ ಹಾಕಿದ ಹೆಣ್ಣು ಕತ್ತೆಯನ್ನು ನಿಶ್ಚಿಯಿಸಿಕೊಂಡು ಬರುತ್ತಾರೆ. ಆಚರಣೆಗೆ ಎರಡು ದಿನಗಳಿರುವಾದ ಕತ್ತೆಯನ್ನು ಕುರಿ ಮಂದೆ ಇರುವ ಸ್ಥಳಕ್ಕೆ ತರಲಾಗುತ್ತದೆ.

ಪೂಜಾ ವಿಧಾನ :ಪೂಜೆಯ ದಿನದಂದು ಕಾರ್ಯಕ್ರಮದ ಕೇಂದ್ರ ಬಿಂದುವಾದ ಕತ್ತೆಗೆ ಶೃದ್ದೆಯಿಂದ ಸ್ನಾನ ಮಾಡಿಸಿ, ಬಣ್ಣ ಬಣ್ಣದ ಹೊಸ ಬಟ್ಟೆ, ಗಲೀಫ್ ಜೂಲುಗಳನ್ನು ಉಡಿಸಲಾಗುತ್ತದೆ. ಮದುವಣಗಿತ್ತಿಯಂತೆ ಶೃಂಗಾರಗೊಳ್ಳುವ ಕತ್ತೆಯನ್ನು ಡೊಳ್ಳಿನ ಮೇಳದ ಮೂಲಕ ಕರೆತರಲಾಗುತ್ತದೆ. ಕುಟುಂಬದ ಹೆಣ್ಣು ಮಕ್ಕಳು, ಸದಸ್ಯರು, ಸಮಾರಂಭಕ್ಕೆ ಬಂದ ಆಪ್ತರು ಅತಿಥಿಗಳಿಗೆ ಹೊಸ ಬಟ್ಟೆ ಪೇಠಾಗಳನ್ನು ವಿತರಿಸಲಾಗುತ್ತದೆ. ಬಂಗಾರದ ಒಡವೆಗಳೂ ಹೆಂಗಳೆಯರನ್ನು ಅಲಂಕೃತಗೊಳಿಸುತ್ತದೆ.

ಬಳಿಕ ಕುರಿಮಂದೆ, ಹಟ್ಟಿ ಅಥವಾ ಗುಡಾರದ ಬಳಿ ಅಲಂಕೃತವಾದ ಮಂಟಪವನ್ನೂ ರಚಿಸಲಾಗಿರುತ್ತದೆ. ಕುಲದೈವ ಬೀರದೇವರು ಸೇರಿದಂತೆ ಮನೆದೈವ ಆರಾಧ್ಯ ದೈವವನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ವಿವಾಹ ಕಾರ್ಯಕ್ರಮದಂತೆ ಜರುಗುವ ಕತ್ತೆ ಬಿಡುವ ಕಾರ್ಯಕ್ರಮದಲ್ಲಿ, ಲಕ್ಷ್ಮಿಯ ಪ್ರತಿರೂಪವಾದ ಕತ್ತೆಗೆ ಅಗ್ರಪೂಜೆ ಸಲ್ಲಿಸಲಾಗುತ್ತದೆ. ನೋಟಿನ ಮಾಲೆ ಸೇರಿದಂತೆ, ವಿವಿಧ ವಸ್ತ್ರಾಲಂಕಾರ ಶೋಭಿತಳಾದ ಕತ್ತೆಯಲ್ಲಿಯೂ ಮಧುಮಗಳ ಕಳೆ ಕಂಗೊಳಿಸುತ್ತದೆ. ಪೂಜಾ ವಿಧಿ ವಿಧಾನ ಪೂರ್ಣಗೊಂಡ ಬಳಿಕ ಬಂಧು ಮಿತ್ರರೊಂದಿಗೆ ಸೇರಿ ಸಿಹಿ ಊಟವನ್ನು ಸವಿಯಲಾಗುತ್ತದೆ.

ಆರಂಭದ ಮೊದಲ ಹತ್ತು ದಿನಗಳ ಕಾಲ ಕುರಿಮಂದೆಯಲ್ಲಿಯೇ ರಾಜ ಮರ್ಯಾದೆ ಸ್ವೀಕರಿಸುವ ಕತ್ತೆ ಬಳಿಕ ತನ್ನ ಜೀವನ ಪರ್ಯಂತವೂ ಕುರಿ ಮಂದೆಯಲ್ಲಿಯೇ ಸಹಬಾಳ್ವೆ ನಡೆಸುತ್ತದೆ. ಕುರಿ ಮಂದೆಯಲ್ಲಿಯೇ ಒಂದಾಗಿ ಬಾಳುವ ಕತ್ತೆಯೂ ತನ್ನ ಒಂದು ಸದಸ್ಯ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಈ ನಡುವೆ ಕತ್ತೆ ಪೂಜೆ ನೆರವೇರಿಸುವ ಪುರೋಹಿತರಿಗೂ ಒಂದು ಕುರಿಮರಿ ಬಳುವಳಿಯ ರೂಪದಲ್ಲಿ ಲಭಿಸುತ್ತದೆ.

ವಿಶ್ವವ್ಯಾಪಿ ಸಂಸ್ಕೃತಿ : ಕುರಿಮಂದೆಯಲ್ಲಿ ಅನ್ಯಪ್ರಾಣಿಯನ್ನು ಬಿಡುವ ಈ ಆಚರಣೆ ಆಸ್ಟ್ರೇಲಿಯಾದಲ್ಲಿಯೂ ಕಂಡುಬರುತ್ತದೆ. ಅತ್ಯಂತ ವ್ಯವಸ್ಥಿತವಾಗಿ ಕುರಿಸಾಕಾಣಿಕೆ ಕೈಗೊಳ್ಳುವ ಆಸ್ಟ್ರೇಲಿಯನ್ನರು ಕತ್ತೆಯ ಬಲದಾಗಿ ಬಿಳಿಯ ಹಂದಿಯನ್ನು ಮಂದೆಯಲ್ಲಿ ಬಿಡುತ್ತಾರೆ. ಅಲ್ಲಿನ ಕುರಿಗಾರರ ಬಳಕೆಗಾಗಿ 200 ಎಕರೆಗೂ ಮೇಲ್ಪಟ್ಟ ಹುಲ್ಲುಗಾವಲನ್ನು ಕಾಯ್ದಿರಿಸಲಾಗುತ್ತದೆ ಎಂದು ತಿಳಿಸಿರುವ ಪ್ರೋ. ಜಕಬಾಳ, ನಮ್ಮಲ್ಲಿ ಕುರಿಗಳ ಸಂಖ್ಯೆ 1500 ಗಡಿ ದಾಟಿದ ಬಳಿಕ ಹುಂಜವನ್ನು ಬಿಡುವದು, 2 ಸಾವಿರವನ್ನು ದಾಟಿದ ಬಳಿಕ ಹಂದಿಯನ್ನು ಬಿಡುವದು ಸಂಪ್ರದಾಯವಾಗಿದೆ ಎಂದರು.

ಬದುಕಿಗೆ ಆಸರೆ : ಕತ್ತೆ ಪೂಜೆ ಸಂಪ್ರದಾಯದ ಒಂದು ಸಾಮಾಜಿಕ ದೃಷ್ಠಿಕೋನವನ್ನು ಹೊಂದಿದೆ. ಸಾವಿರಾರು ಕುರಿಗಳನ್ನು ಸಾಕುವ ದೊಡ್ಡಿಯ ಯಜಮಾನನ ದಿನಬಳಕೆಯ ಸಾಮಗ್ರಿಗಳೂ ವಿಪರೀತವಾಗಿ ಹೆಚ್ಚಳವಾಗಿರುತ್ತದೆ. ವರ್ಷದ ಉದ್ದಕ್ಕೂ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುತ್ತಿರುವ ಸಂಚಾರು ಕುರುಬರಿಗೆ ಕತ್ತೆ ಒಂದು ಉತ್ತಮವಾದ ಸಾಗಾಣಿಕಾ ಮಾದ್ಯಮವಾಗಿರುತ್ತದೆ. ಆಹಾರ ಸಾಮಗ್ರಿ, ಗಿಡಮೂಲಿಕೆಗಳು, ದಿನಬಳಕೆಯ ವಸ್ತುಗಳ ಸಾಗಾಣಿಕೆಗೆ ಕುದುರೆಗಿಂತ ಕತ್ತೆ ಹೆಚ್ಚು ಉಪಯುಕ್ತ ಎಂಬ ಸತ್ಯ ಈ ಆಚರಣೆ ಬೆಳೆದುಬರಲು ಕಾರಣವಾಗಿದೆ. ಕತ್ತೆ ಪೂಜೆ ಕುರಿಮಂದೆಯ ಮಾಲಿಕನಿಗೂ ಸಾಮಾಜಿಕ ಪ್ರತಿಷ್ಟೆಯನ್ನು ಹೆಚ್ಚಿಸುತ್ತದೆ.

ಇದರೊಂದಿಗೆ ಕತ್ತೆ ಲಕ್ಷ್ಮಿಯ ಸ್ವರೂಪ ಎಂಬ ನಂಬಿಕೆಯೂ ಹಲವಾರು ಸಮುದಾಯಗಳಲ್ಲಿದೆ. ಕುರುಬರಿಗೆ ಕುರಿಯೂ ಲಕ್ಷ್ಮಿಯ ಪ್ರತಿರೂಪವಾಗಿರುತ್ತದೆ. ಹೆಚ್ಚಳಗೊಂಡ ಕುರಿಗಳೊಂದಿಗೆ ಕತ್ತೆಯೂ ಸೇರ್ಪಡೆಗೊಂಡು, ಸಂಪತ್ತು ದಿಗ್ವುಣವಾಗಲಿ ಎಂಬ ಆಶಯಗಳೂ ಈ ಆಚರಣೆಯ ಹಿಂದೆ ಇದೆ. ಹುಲುಸಾಗುವದು ಎಂಬ ಅರ್ಥ ನೀಡುವ ಹುಂಜದ ಪೂಜೆಯೂ ಈ ಆಚರಣೆಯ ಮುಂದುವರೆದ ಭಾಗವಾಗಿದೆ.

ದೋಷ ಪರಿಹಾರ : ಕತ್ತೆ ಪೂಜೆಯಿಂದ ದೋಷಗಳು ಪರಿಹಾರವಾಗುತ್ತದೆ. ಕಷ್ಟಗಳು ದೂರವಾಗುತ್ತದೆ. ಕುರಿ ಮಂದೆಯನ್ನು ಕತ್ತೆಯು ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿರುವ ಸಂಚಾರಿ ಕುರುಬ ಸಮಾಜದ ರಾಜ್ಯಾಧ್ಯಕ್ಷ ವಿಟ್ಟಲ ಬನ್ನೆ, ಕುರಿಗಳ ಸಂಖ್ಯೆ ಒಂದು ಸಾವಿರವನ್ನು ದಾಟಿದ ಬಳಿಕ ಈ ಆಚರಣೆ ಮಾಡದಿದ್ದರೆ ದೋಷ ಬರುತ್ತದೆ ಎಂಬ ನಂಬಿಕೆಗಳನ್ನು ವ್ಯಕ್ತಪಡಿಸಿದೆ.

ಸಮಸ್ಯೆ ಸಾವಿರ : ರಾಜ್ಯದಲ್ಲಿ ಸಂಚಾರಿ ಕುರುಬರ ಸಂಖ್ಯೆ ೪ ಲಕ್ಷವನ್ನು ದಾಟಿದ್ದರೂ, ಇಂದಿಗೂ ಈ ಅಲೆಮಾರಿ ಜನಾಂಗಕ್ಕೆ ಮತದಾನದ ಹಕ್ಕು ಲಭ್ಯವಾಗಿಲ್ಲ. ಮತದಾನ ಮಾಡದ ಅವರಿಗೆ ರಾಜಾಶ್ರಯವೂ ಇಲ್ಲ. ಅವರನ್ನು ಗುರ್ತಿಸುವ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾಂii ಆಗಿಲ್ಲ ಎಂಬ ನೋವು ವ್ಯಕ್ತಪಡಿಸಿದ ವಿಟ್ಟಲ ಬನ್ನೆ, ಇಂದಿಗೂ ಯಾವದೇ ಸರಕಾರಿ ಸೌಲಭ್ಯಗಳೂ ಇಲ್ಲದ ಸಂಚಾರಿ ಕುರುಬ ಸಮಾಜ ಸಂಪೂರ್ಣ ಕಡೆಗಣನೆಗೆ ಒಳಗಾಗಿದೆ ಎಂದರು.

ನಿಶ್ಚಿತವಾದ ಊರು, ಮನೆ, ಸ್ಥಿರಾಸ್ಥಿಗಳೂ ಇಲ್ಲದ ಸಂಚಾರಿ ಕುರುಬ ಸಮಾಜಕ್ಕೆ ಅರಣ್ಯದ ಪ್ರವೇಶವನ್ನೂ ನಿರ್ಭಂದಿಸಲಾಗಿದೆ. ಕಾಡಿನಲ್ಲಿನ ಮರಗಳ ಕಳ್ಳತನವಾದರೆ ಕುರುಬರ ಮೇಲೆ ಆರೋಪ ಹೊರಿಸಲಾಗುತ್ತದೆ. ಕೇವಲ ಗಿಡಗಳ ತೊಪ್ಪಲ (ಸೊಪ್ಪು)ಕ್ಕಾಗಿ ಅರಸುವ ನಾವು, ಮರವನ್ನು ಕಡಿಯುತ್ತೆವೆಯೇ ಎಂದು ಪ್ರಶ್ನಿಸುತ್ತಾರೆ. ಅತ್ಯಂತ ಮುಖ್ಯವಾಗಿ ತಮ್ಮ ಸಮಾಜಕ್ಕೆ ಪೊಲೀಸರಿಂದ ರಕ್ಷಣೆಯ ಅಗತ್ಯವಿದೆ. ಅರಣ್ಯ ಹಾಗೂ ಪೊಲೀಸ ಇಲಾಖೆಯಿಂದ ಸಂಚಾರಿ ಕುರುಬ ಸಮಾಜ ನಿರಂತರ ದೌರ್ಜನ್ಯ ಶೋಷಣೆ ಎದುರಿಸಬೇಕಾಗಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ 400-500 ರೂಗಳ ಕಾಣಿಕೆಯನ್ನು ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಪಡಿತರ ಚೀಟಿ, ಶಿಕ್ಷಣ ಸೇರಿದಂತೆ ಯಾವದೇ ಸರಕಾರಿ ಸೌಲಭ್ಯಗಳಿಗೂ ಸಂಚಾರಿ ಕುರುಬರು ಅರ್ಹರಾಗಿಲ್ಲ. ಸರಕಾರದ ವಿಮಾ ಸೌಲಭ್ಯವೂ ವಾಸ್ತವಿಕತೆಯನ್ನು ಹೊಂದಿಲ್ಲ. ಕೇವಲ 10 ಕುರಿಗಳಿಗೆ ವಿಮೆ ನೀಡಿದಲ್ಲಿ ಕಿಲುಬು ಕಾಸಿನ ಪ್ರಯೋಜನವೂ ಇಲ್ಲ. ಕುರಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗುವ ರಾಜಕಾರಣಿಗಳಿಗೆ ಸಂಚಾರಿ ಕುರುಬರ ಸಂಕಷ್ಟುಗಳು ಅರಿವಿಲ್ಲ ಎಂದು ತಿಳಿಸಿದ ಅವರು, ಕುರಿ ಮಂದೆಯೊಂದಿಗೆ ಅಲೆದವನನ್ನೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ಮಾಡಬೇಕು. ಅಂದಾಗ ಮಾತ್ರ ಕುರಿ ಸಾಕಾಣಿಕೆದಾರರ ಕಷ್ಟಗಳಿಗೆ ನಿಜವಾದ ಪರಿಹಾರ ಸಾಧ್ಯ ಎಂದರು.

ಸವಣೂರ, ಹರಿಹರ, ಶಿಕಾರಿಪೂರ, ಗಂಗಾವತಿ, ಹೊನ್ನಾಪೂರ ಪಟ್ಟಣಗಳಲ್ಲಿ ಸಂಚಾರಿ ಕುರುಬರ ಸಂಘಟನೆಗಳಿದ್ದರೂ, ತಲಾ 500 ರಿಂದ 700 ಸದಸ್ಯತ್ವವನ್ನು ಮಾತ್ರ ಹೊಂದಿದೆ. ಸಂಘಟನೆ ವಿಸ್ತಾರತೆಯನ್ನು ಪಡೆದುಕೊಂಡು ಬಲಗೊಳ್ಳಬೇಕಿದೆ ಎಂದರು. ಕತ್ತೆ ಪೂಜೆ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಲ್ಲಾರೆಪ್ಪ ತಳ್ಳಿಹಳ್ಳಿ, ಲಕ್ಷ್ಮಣ ಪೂಜಾರಿ, ವಿಟ್ಟಲ ಮಾಳಂಗಿ, ಮಾರುತಿ ಹೆಗಡೆ, ಲಗಮಣ್ಣ ಹುಕ್ಕೇರಿ, ಬೀರಪ್ಪ ಹೆಗಡೆ, ಮುರಾರಿ ಹೆಗಡೆ, ಗೂಳಪ್ಪ ಅರ್ಜುನವಾಡ, ಅಜೀತ ಹಿರೇಕುರುಬರ, ಗೌಡಪ್ಪ ಗಡ್ಡೆ,ಮಾಳಪ್ಪ ಚಿಂಗಳೆ, ವ್ಹಿ.ಆರ್ ಬನ್ನೆ, ಮಲ್ಲಪ್ಪ ಮಾಳಂಗಿ, ಬಾಳಪ್ಪ ರಣಕೆ, ಸಿದ್ದವೀರಪ್ಪ ಹರಕೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಲಾಸ್ಟ ಡ್ರಾಪ್ : ನಿಜವಾದ ಕತ್ತೆಗಳೇ ಅಪರೂಪವಾಗುತ್ತಿರುವ ಇತ್ತಿಚಿನ ದಿನಗಳಲ್ಲಿ, ಈ ಆಚರಣೆಯಿಂದಾದಲೂ ಕತ್ತೆಗಳ ಸಂತತಿ ಉಳಿದುಕೊಳ್ಳಲಿ. ಇತಿಹಾಸ ಮರುಕಳಿಸಿದಲ್ಲಿ ಕತ್ತೆಗಳೇ ಪುನಃ ಭವಿಷ್ಯದ ಸಾರಿಗೆ ಸಂಪರ್ಕಗಳಾಗಲಿ ಎಂಬ ಆಶಯವೂ ಈ ಆಚರಣೆಯ ಹಿಂದೆ ಇದೆಯೇ ಎಂಬ ಪ್ರಶ್ನೆ ಉಳಿದುಕೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more