ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣತಿ ಕಾರ್ಯಕ್ಕೆ ಸಜ್ಜಾದ ಸವಣೂರು

By * ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

Savanur Census training
ಸವಣೂರ, ಏ.12 : ನಗರದ ಪ್ರತಿಯೊಂದು ವಾಸಸ್ಥಳ, ಗುಡಿಸಲು, ಟೆಂಟ್‌ಗಳನ್ನೂ ಗಣತಿಮಾಡುವದರೊಂದಿಗೆ, ಪ್ರತಿ ವ್ಯಕ್ತಿಯ ಬಗ್ಗೆಯೂ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ. ಯಾವದೇ ವ್ಯಕ್ತಿ ಗಣತಿ ಕಾರ್ಯದಿಂದ ಹೊರಗೆ ಉಳಿಯದಂತೆ ಜಾಗ್ರತೆ ವಹಿಸಿ ಎಂದು ಜನಗಣತಿ ಕಾರ್ಯಕ್ರಮದ ಮುಖ್ಯ ಮೇಲ್ವಿಚಾರಕ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಾದ ಎಚ್.ಎನ್ ಭಜಕ್ಕನವರ್ ಸೂಚಿಸಿದರು.

ಸವಣೂರಿನಲ್ಲಿ ರವಿವಾರದಿಂದ ಮೂರು ದಿನಗಳ ಪರ್ಯಂತ ಜರುಗಲಿರುವ ಗಣತಿದಾರರ ತರಬೇತಿ ಶಿಬಿರದಲ್ಲಿ ಪ್ರಾಸ್ಥಾವಿಕ ಮಾತನಾಡಿದ ಅವರು, ರಾಷ್ಟ್ರಾದ್ಯಂತ ಏಕಕಾಲಕ್ಕೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಿರುವ ಗಣತಿ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ ವಹಿಸಬೇಡಿ ಎಂದು ತಿಳಿಸಿದರು.

ಪ್ರತಿ 10 ವರ್ಷಗಳಿಗೆ ಒಂದು ಬಾರಿ ಗಣತಿಯನ್ನು ಕೈಗೊಳ್ಳಲಾಗುತ್ತಿದ್ದು, ಈ ಬಾರಿ ಜನಗಣತಿಯೊಂದಿಗೆ ಮನೆಗಣತಿಯನ್ನೂ ನಿರ್ವಹಿಸಬೇಕಾಗಿದೆ. ರಾಷ್ಟ್ರೀಯ ಗುರುತಿನ ಪತ್ರ ವಿತರಣೆ ಸೇರಿದಂತೆ ಸರಕಾರದ ಪ್ರತಿಯೊಂದು ಯೋಜನೆಗಳೂ ಈ ಗಣತಿ ಕಾರ್ಯವನ್ನು ಅವಲಂಬಿಸಿದೆ. ಬರಲಿರುವ ದಿನಗಳಲ್ಲಿ ರಾಷ್ಟ್ರೀಯ ಗುರುತಿನ ಪತ್ರ ಪ್ರತಿಯೊಂದು ಯೋಜನೆಗಳಿಗೂ ಕಡ್ಡಾಯವಾಗಲಿದೆ ಎಂದು ಅವರು ತಿಳಿಸಿದರು.

ತರಬೇತುದಾರರಾದ ಉಪನ್ಯಾಸಕ ವಾಯ್.ವ್ಹಿ ಯತ್ನಳ್ಳಿ, ಅತ್ಯಂತ ಮಹತ್ವಪೂರ್ಣವಾದ ಈ ಗಣತಿ ಕಾರ್ಯಕ್ರಮದ ಜವಾಬ್ದಾರಿಯನ್ನು ಶಿಕ್ಷಕ ಸಮೂಹದ ಮೇಲೆ ವಹಿಸಲಾಗಿದೆ. ಅತ್ಯಂತ ನಿಖರತೆ ಹಾಗೂ ಜವಾಬ್ದಾರಿಯುತವಾದ ಕಾರ್ಯವನ್ನು ಶಿಕ್ಷಕರಿಂದ ನಿರೀಕ್ಷಿಸಲಾಗಿದೆ. ಸರಕಾರದ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಈ ಗಣತಿ ಅಗತ್ಯವಾಗಿದ್ದು, ಜನಸಂಖ್ಯಾ ಆಧಾರಿತವಾಗಿಯೇ ಚುನಾವಣಾ ಪ್ರಕ್ರಿಯೆಗಳೂ ಜರುಗುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಸೇರಿದಂತೆ ಗಣತಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಾಕ್ಷಚಿತ್ರದೊಂದಿಗೆ ವಿವರಣೆ ನೀಡಿದರು.

ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆಯ ಅಧ್ಯಕ್ಷ ಎ.ಎಮ್ ಫರಾಶ್ ನೆರವೇರಿಸಿದರು. ಸದಸ್ಯ ಅಲ್ತಾಫ್ ದುಕಾನದಾರ್ ಸೇರಿದಂತೆ ಎಲ್ಲ ಗಣತಿದಾರರು, ಮೇಲ್ವಿಚಾರಕರು, ಪುರಸಭೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪಿ.ಆರ್ ನವಲೆ ಕಾರ್ಯಕ್ರಮ ನಿರ್ವಹಿಸಿ, ಆರ್.ಎಸ್ ಈಳಿಗೇರ ವಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X