ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ನೌಕರರ ಬೆನ್ನು ತಟ್ಟಿದ ಕಟ್ಟಾ

By Prasad
|
Google Oneindia Kannada News

Katta Subramanya Naidu
ಬೆಂಗಳೂರು, ಏ. 10 : ಸರ್ಕಾರಿ ನೌಕರರು ಸರ್ಕಾರಕ್ಕೆ ಆಡಳಿತದಲ್ಲಿ ಉತ್ತಮ ಸಹಕಾರ ನೀಡಿದ್ದಾರೆ. ಅವರ ಕಾರ್ಯವೈಖರಿಯಲ್ಲಿ ಅಪೇಕ್ಷೆಗಿಂತ ಹೆಚ್ಚು ಬದಲಾವಣೆಯಾಗಿದೆ. ಶಿಸ್ತು ಹೆಚ್ಚಿದೆ. ಆದರೆ ಇನ್ನೂ ಕೆಲವರಲ್ಲಿ ಪ್ರವೃತ್ತಿ ಬದಲಾಗಬೇಕು. ಈ ಪ್ರಗತಿಗೆ ನೌಕರರ ಸಂಘವನ್ನು ಅಭಿನಂದಿಸುವುದಾಗಿ ವಾರ್ತಾ, ವಸತಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಿಳಿಸಿದ್ದಾರೆ.

ಶನಿವಾರ ಭೂಮಾಪನ ಕಂದಾಯದ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಮ್ಮಿಕೊಂಡಿದ್ದ 15ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭೂಮಿಗೂ ಮತ್ತು ಕೃಷಿಕರಿಗೂ ಅತ್ಯಂತ ಹತ್ತಿರ ಸಂಬಂಧವಿದೆ. ಕೃಷಿಕರ ಒಂದು ಇಂಚು ಭೂಮಿ ನಷ್ಟವಾದರೂ ಸಹಿಸುವುದಿಲ್ಲ. ಭೂಮಾಪಕರು ಅತ್ಯಂತ ಜವಾಬ್ದಾರಿ ಸ್ಥಾನ ಅಲಂಕರಿಸಿದ್ದಾರೆ. ಆ ಜವಾಬ್ದಾರಿಗೆ ತಕ್ಕಂತೆ ಅವರು ನಡೆದುಕೊಳ್ಳವುದು ಅವಶ್ಯಕವೆಂದರು. ಭೂಮಿ ಇಡೀ ದೇಶಕ್ಕೆ ಒಂದು ಮಾದರಿ ಕಾರ್ಯಕ್ರಮ. ಈ ಸಾಧನೆ ಭೂಮಾಪಕರಿಗೆ ಸಲ್ಲುತ್ತದೆ. ಆದರೆ ಹಿರಿಯ ಅಧಿಕಾರಿಗಳು ಮಾಡಿದ ಲೋಪದೋಷಗಳಿಂದಾಗಿ ನೆಮ್ಮದಿ ಕೇಂದ್ರಗಳು ಜನರ ನೆಮ್ಮದಿ ಕೆಡಿಸಿದೆ. ನಾವು ಎಡವಿದ್ದೇವೆ ಎಂದ ಸಚಿವರು, ಈ ತಪ್ಪನ್ನು ಸರಿಪಡಿಸಲಾಗುವುದೆಂದರು.

ರಾಜ್ಯದಲ್ಲಿ ಸುಮಾರು 140 ವರ್ಷಗಳ ಹಿಂದೆ ತಯಾರಿಸಿದ ಸರ್ವೆ ದಾಖಲೆಗಳು ಶಿಥಿಲವಾಗಿರುವ ಕಾರಣ ಅವುಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ 26 ತಾಲ್ಲೂಕುಗಳಲ್ಲಿ ಸ್ಕ್ಯಾನಿಂಗ್ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಉಳಿದ 150 ತಾಲ್ಲೂಕುಗಳಲ್ಲಿ ಈ ಕಾರ್ಯವನ್ನು ಮಾಡಲಾಗುವುದೆಂದು ಭೂ ಮಾಪನ ಇಲಾಖೆ ಆಯುಕ್ತ ಕೆ.ಎಸ್. ಪ್ರಭಾಕರ್ ಅವರು ತಿಳಿಸಿದರು.

12ನೇ ಹಣಕಾಸು ಆಯೋಗದ ಶಿಫಾರಸಿನನ್ವಯ ವಿವಿಧ ಗ್ರಾಮ/ಪಟ್ಟಣಗಳಲ್ಲಿ ನಗರ ಮಾಪನ ಕೆಲಸ ಜಾರಿಗೊಳಿಸಬೇಕೆಂಬ ಹಾಗೂ ತರಬೇತಿಯನ್ನು ಬಲಪಡಿಸಬೇಕೆಂಬ ಹಿನ್ನೆಲೆಯಲ್ಲಿ, ಸುಮಾರು 27 ಸ್ಥಳಗಳಲ್ಲಿ ನಗರ ಮಾಪನ ಕೆಲಸವನ್ನು ಕೈಗೊಂಡು ನಿರ್ವಹಣಾ ಕೆಲಸವನ್ನು ಅನುಷ್ಠಾನಕ್ಕೆ ತರಲಾಗಿದೆ. ಇದರ ಜೊತೆಗೆ ಸುಮಾರು 1000 ನೌಕರರಿಗೆ ತರಬೇತಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಪ್ರಾದೇಶಿಕ ಆಯುಕ್ತ ಜಿ.ಎಂ. ಧನಂಜಯ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ. ವಿಶ್ವನಾಥರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ, ಗೌರವಾಧ್ಯಕ್ಷ ಎಂ.ವಿ. ರಾಜಶೇಖರಯ್ಯ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X