ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ದೂರಿ ಬೀದರ್ ಉತ್ಸವಕ್ಕೆ ಭರದ ಸಿದ್ಧತೆ

By Shami
|
Google Oneindia Kannada News

Bidar DC Harsha Gupta
ಬೀದರ, ಏ.8: ಏಪ್ರಿಲ್ 10 ಶನಿವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ 'ಬೀದರ ಉತ್ಸವ'ವನ್ನು ಅದ್ದೂರಿಯಾಗಿ ಆಯೋಜಿಸಲು ಭರದ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ತಿಳಿಸಿದ್ದಾರೆ.

ಕೋಟೆ ಆವರಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉತ್ಸವಗಳನ್ನು ಆಚರಿಸುವ ಜಿಲ್ಲೆಗಳು ಕಡಿಮೆ. ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಉತ್ಸವ ಪರಂಪರೆ ಮುಂದುವರೆಯಬೇಕು ಎಂಬ ಉದ್ದೇಶದಿಂದ ಬೀದರ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳೆದ ಉತ್ಸವಗಳಿಂದ ಭಿನ್ನವಾಗಿ ಈ ಬಾರಿ ಎಲ್ಲಾ ಕಾರ್ಯಕ್ರಮಗಳನ್ನು ಸಂಜೆ ಬಳಿಕ ಆಯೋಜಿಸಲಾಗುತ್ತಿದೆ. ಉತ್ಸವದ ಆಯೋಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯತೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ, ರಾಜ್ಯ ಮಟ್ಟದ ಕಲಾವಿದರು ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಹರ್ಷಗುಪ್ತಾ ತಿಳಿಸಿದರು.

ಈ ಬಾರಿ ಮುಖ್ಯ ವೇದಿಕೆಯಲ್ಲಿಯೇ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮ್ಯಾಜಿಕ್ ಪ್ರದರ್ಶನ, ಲಾಫರ್ ಚಾಲೆಂಜ್ ಖ್ಯಾತಿಯ ಹಾಸ್ಯ ಕಲಾವಿದರು ಮನೋರಂಜನೆಯ ರಸದೌತಣ ನೀಡಲಿದ್ದಾರೆ. ಈ ಬಾರಿ ಮುಷಾಯಿರಾ ಕಾರ್ಯಕ್ರಮವನ್ನು ಮಹಮೂದ್ ಗಾವಾನ ಮದರಸಾದಲ್ಲಿ ನಡೆಸಲಾಗುವುದು. ಮದರಸಾದಲ್ಲಿ ಐದು ಸಾವಿರ ಕುರ್ಚಿಗಳನ್ನು ಹಾಕಲಾಗುವುದು. ಮುಷಾಯಿರಾದಲ್ಲಿ ರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವರು ಎಂದು ಹೇಳಿದರು.

ಡೈಮಂಡ್ ಗೋಲ್ಡ್ ಕಾರ್ಡ್: ಉತ್ಸವಕ್ಕೆ ಸಂಪನ್ಮೂಲವನ್ನು ಕ್ರೋಢೀಕರಿಸುವ ಉದ್ದೇಶದಿಂದ ಮಾತ್ರವಲ್ಲ, ಉತ್ಸವದಲ್ಲಿ ಸಮಾಜದ ಎಲ್ಲಾ ಸ್ತರಗಳ ಜನರು ಭಾಗವಹಿಸಲು ಅನುಕೂಲವಾಗುವಂತೆ ಗೋಲ್ಡ್, ಡೈಮಂಡ್ ಮತ್ತು ಪ್ಲಾಟಿನಂ ಕಾರ್ಡುಗಳನ್ನು ಹೊರತರಲಾಗಿದೆ. ಜನರಲ್ಲಿ ತಮ್ಮದೇ ಉತ್ಸವ ಎಂಬ ಭಾವನೆ ಬರಲು ಇದು ಪೂರಕವಾಗಿದೆ. ಮೂರು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನರಿಗೆ ಪೂರ್ಣ ಮನೋರಂಜನೆ ಒದಗಿಸುವ ಭರವಸೆ ತಮಗಿದೆ ಎಂದರು. ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಗಳನ್ನು ನೋಡಿ ಆನಂದಿಸಬೇಕೆಂದು ಅವರು ಆಹ್ವಾನ ಕೊಟ್ಟರು.

ತಾರಾ ಮೆರುಗು:
ಬೀದರ ಉತ್ಸವದಲ್ಲಿ ಕನ್ನಡದ ಖ್ಯಾತ ಚಿತ್ರನಟ ಸುದೀಪ್, ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ, ಹಾಸ್ಯ ನಟ ಸಾಧು ಕೋಕಿಲ ಕಾರ್ಯಕ್ರಮ, ಲಾಫರ್ ಚಾಲೆಂಜ್ ಖ್ಯಾತಿಯ ರಾಜು ಶ್ರೀವಾಸ್ತವ, ಲಲ್ಲಿ ಅವರ ಹಾಸ್ಯ ಸಂಜೆ, ಅನೂಪ್ ಜಲೋಟ್ ಅವರ ಗಜಲ್ ಭಕ್ತಿಗೀತೆ ಉತ್ಸವಕ್ಕೆ ಮೆರಗು ನೀಡಲಿವೆ.

ಕಾರ್ಯಕ್ರಮ ವೈವಿಧ್ಯ: ಬೀದರ ಉತ್ಸವದ ಅಂಗವಾಗಿ ಮಹಿಳಾ ಉತ್ಸವ, ಏರ್ ಶೋ, ಪಟಾಕಿ ಪ್ರದರ್ಶನ, ಹೊನಲು ಬೆಳಕಿನ ವಾಲಿಬಾಲ್, ಜಾತ್ರೆ, ಆರೋಗ್ಯ ಮೇಳ, ಕೃಷಿ ಮೇಳ, ಸಾಹಸ ಕ್ರೀಡೆಗಳು, ಚಿತ್ರಕಲಾ ಪ್ರದರ್ಶನ, ಮ್ಯಾರಥಾನ್, ವಸ್ತು ಪ್ರದರ್ಶನ, ಖಾದ್ಯ ಮೇಳ, ಚಲನಚಿತ್ರೋತ್ಸವ, ಕುಸ್ತಿ, ಚೌಬಾರಾದಿಂದ ಕೋಟೆಯವರೆಗೆ ಮೆರವಣಿಗೆ, ಫತೆಹ ದರವಾಜಾದಿಂದ ಕೋಟೆಯ ವರೆಗೆ ಹಿರಿಯ ನಾಗರಿಕರ ನಡಿಗೆ, ಮುಶಾಯಿರಾ ಸೇರಿದಂತೆ ಹತ್ತು ಹಲವು ವೈವಿಧ್ಯಮ ಕಾರ್ಯಕ್ರಮಗಳು ಉತ್ಸವದ ದಿನಗಳಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X