ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಐಟಿ ತಂತ್ರಾಂಶ ಬಗ್ಗೆ ಒಂದಿಷ್ಟು

By Mahesh
|
Google Oneindia Kannada News

DGP Ajai Kumar Singh, file photo
ಬೆಂಗಳೂರು, ಏ.7:2003ರಲ್ಲಿ ಪೊಲೀಸ್ ಐಟಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ತಂತ್ರಾಂಶವನ್ನು ವಿಪ್ರೋ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಪರಿಪೂರ್ಣ ತಂತ್ರಾಂಶವಾಗಿದ್ದು, ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಣಕೀಕರಣ ಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಒಳಗೊಂಡಿದ್ದು, ಇಲಾಖೆಯ ಪ್ರತಿಯೊಂದು ಘಟಕಕ್ಕೂ ವ್ಯಾಪಿಸಿದೆ.

ಈ ತಂತ್ರಾಂಶದ ಅನುಷ್ಠಾನಕ್ಕೆ ಬೇಕಾಗಿರುವ ದತ್ತಾಂಶ ಕೇಂದ್ರ (ಡಾಟಾ ಸೆಂಟರ್), ವ್ಯಾಪಕ ಸಂಪರ್ಕ ಜಾಲ, ಆಂಟಿ ವೈರಸ್, ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸೇವೆಗಳು, ಸಹಾಯವಾಣಿ ಮೊದಲಾದವು ಸಿದ್ಧಗೊಂಡಿವೆ. ಈ ಯೋಜನೆಯ ಅನುಷ್ಠಾನಕ್ಕಾಗಿ 700 ಕೆಲಸದ ದಿನಗಳ ಕ್ಷೇತ್ರ ಅಧ್ಯಯನ, 70 ವಿಮರ್ಶಾ ಸಭೆಗಳು, 30 ಸಾವಿರ ಪುಟಗಳ ದಾಖಲಾತಿಗಳು ಹಾಗೂ ತಂತ್ರಾಂಶ ಅಭಿವೃದ್ಧಿಗೆ 7000 ಕೆಲಸದ ದಿನಗಳನ್ನು ತೆಗೆದುಕೊಳ್ಳಲಾಗಿದೆ. ಈ ವರೆಗೆ ಸುಮಾರು 100ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 4 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ತಂತ್ರಾಂಶವನ್ನು ಸಂಪೂರ್ಣವಾಗಿ ಬಳಸಲು ಇನ್ನೂ 14 ಸಾವಿರ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಬೇಕಾಗಿದೆ ಎಂದು ಡಿಜಿಪಿ ಡಾ. ಅಜಯ್‌ಕುಮಾರ್ ಸಿಂಗ್ ಅವರು ತಿಳಿಸಿದರು.

ಪೊಲೀಸ್ ಐಟಿ ತಂತ್ರಾಂಶದಲ್ಲಿ ಒಟ್ಟು 12 ಮಾಡ್ಯೂಲ್‌ಗಳಿವೆ. ಅವುಗಳನ್ನು ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಆಡಳಿತ, ಹಣಕಾಸು, ಉಗ್ರಾಣ, ಸಶಸ್ತ್ರ ಮೀಸಲು, ಮೋಟಾರು ಸಾರಿಗೆ, ತರಬೇತಿ, ನಿಸ್ತಂತು, ಪ್ರಾಯೋಗಿಕ ವಿಧಿವಿಜ್ಞಾನ ಪ್ರಯೋಗಾಲಯ, ಕಾರ್ಯಾಧಾರಿತ ಮಾಹಿತಿ ವ್ಯವಸ್ಥೆ ಎಂದು ನಿಗದಿಪಡಿಸಲಾಗಿದೆ.

ಇಂದು ಈ ಮಾಡ್ಯೂಲ್‌ಗಳಲ್ಲಿ ನಿಸ್ತಂತು, ಮೋಟಾರು ಸಾರಿಗೆ ಮತ್ತು ಸಶಸ್ತ್ರ ಮೀಸಲು ಮಾಡ್ಯೂಲ್‌ಗಳಿಗೆ ಗೃಹ ಸಚಿವರು ಚಾಲನೆ ನೀಡಿದ್ದು, ಉಳಿದ ಮಾಡ್ಯೂಲ್‌ಗಳನ್ನು ಹಂತಹಂತವಾಗಿ ಈ ವರ್ಷಾಂತ್ಯದೊಳಗೆ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಲಾಯಿತು. ಭಾರತ ಸರ್ಕಾರವು ಕ್ರೈಂ, ಕ್ರಿಮಿನಲ್ ಟ್ರಾಕಿಂಗ್ ನೆಟ್‌ವರ್ಕ್ ಅಂಡ್ ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ಯೋಜನೆಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿರುವ ರಾಜ್ಯ ಎಂದು ಪರಿಗಣಿಸಿದೆ. ಈ ಸಿಸಿಟಿಎನ್‌ಎಸ್ ಯೋಜನೆಯು ದೇಶದ 14 ಸಾವಿರ ಪೊಲೀಸ್ ಠಾಣೆಗಳು ಮತ್ತು 6 ಸಾವಿರ ಉನ್ನತ ಪೊಲೀಸ್ ಕಚೇರಿಗಳನ್ನು ಸಂಪರ್ಕಗೊಳಿಸುವ ಗುರಿಯನ್ನು ಹೊಂದಿದೆ. ಹಾಗೂ ಮುಖ್ಯ ತಂತ್ರಾಂಶದ ಅಭಿವೃದ್ಧಿಯನ್ನು ಆಯಾ ರಾಜ್ಯಗಳಿಗನುಗುಣವಾಗಿ ಸಿದ್ಧಪಡಿಸಲಾಗುವುದು. ಕರ್ನಾಟಕ ರಾಜ್ಯ ಪೊಲೀಸ್‌ಗೆ ತನ್ನದೇ ಆದ ಪೊಲೀಸ್ ಐಟಿ ತಂತ್ರಾಂಶವನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೆಂದು ತಿಳಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X