ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ ಸಾರ್ಥಕ ಅದಕ್ಕೆ ಸಮಾಜ ಸೇವೆ ಪೂರಕ

By * ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

ಸವಣೂರ, ಏ.7 : 'ಗುಣ ಇಲ್ಲದ ಕೃತಕ ಹೂವಿನಂತೆ ನೂರುಕಾಲ ಬದುಕದೆ, ಪ್ರತಿನಿತ್ಯವೂ ಸಮರ್ಪಣಾ ಭಾವದಂದಲೇ ಅರಳುವ ನೈಜ ಪುಷ್ಪದಂತೆ ಜೀವನವನ್ನು ಸುವಾಸಿತಗೊಳಿಸಿಕೊಳ್ಳಿ. ಒಂದು ಕ್ಷಣವಾದರೂ ಸರಿ, ಲೇಸೆನಿಸುವ ಬಾಳನ್ನು ಕಂಡುಕೊಳ್ಳಿ ಎಂದು ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.

21 ದಿನಗಳ ಪರ್ಯಂತ ಕಡಕೋಳ ಗ್ರಾಮದಲ್ಲಿ ಜರುಗಿದ ಜೀವನ ದರ್ಶನ ಪ್ರವಚನ ಮಾಲಿಕೆಯ ಮಹಾಮಂಗಳದಲ್ಲಿ ಶುಭನುಡಿಗಳಾಡಿದ ಅವರು, ಸಾರ್ಥಕವಾದ ಜೀವನದ ನಡೆಸಿದ ವ್ಯಕ್ತಿಯಲ್ಲಿ ಮಾತ್ರ ಮರಣದ ಭಯ ಕಾಡುವುದಿಲ್ಲ ಎಂದರು.ಅಧಿಕಾರ, ಆಯುಷ್ಯ, ಸಂಪತ್ತುಗಳ ಅಶಾಶ್ವತೆ ನಿಮ್ಮ ಗಮನದಲ್ಲಿರಲಿ. ಪರೋಪಕಾರ ಬದುಕಿನ ಅಂಗವಾಗಿರಲಿ. ಸಮಯ ಪ್ರಜ್ಞೆಯನ್ನು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳಿ. ದುಡಿಯಲಾಗದ ದರಿದ್ರತನವನ್ನು, ದುಶ್ಚಟ ದುರ್ಗುಣವನ್ನು ತ್ಯಜಿಸುವ ಸಂಕಲ್ಪಹೊಂದಿ. ಅಲ್ಪವಾದರೂ ಸರಿ, ಸತ್ಕಾರ್ಯದೊಂದಿಗೆ ಉತ್ತಮರ ಗುಂಪಿನಲ್ಲಿ ಗುರ್ತಿಸಿಕೊಳ್ಳಿ ಎಂದರು.

ಆಧ್ಯಾತ್ಮ ಎಂಬ ಹಾಲನ್ನು ಹೃದಯದ ಬಟ್ಟಲಿನಲ್ಲಿ ತುಂಬಿಕೊಳ್ಳಿ ಎಂದು ಹಿತ ನುಡಿದ ಶ್ರೀಗಳು, ಆಧ್ಯಾತ್ಮದ ಕಡೆಗೆ ಒಲವು ತೋರುತ್ತಿರುವ ಯುವಕರ ಭಾವನೆಗಳನ್ನು ನಿರಾಸೆಗೊಳಿಸಿದಲ್ಲಿ ಅವರು ಧರ್ಮದಿಂದಲೇ ವಿಮುಖರಾಗುವ ಸಾದ್ಯತೆಗಳಿವೆ ಎಂದರು. ಸುದೀರ್ಘವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಕಲ್ಮೇಶ್ವರ ಸೇವಾ ಸಮೀತಿಯ ಕಾರ್ಯವನ್ನು ಶ್ಲಾಘಿಸಿದರು.

ಸುವರ್ಣ ಗ್ರಾಮೋದಯ ಯೋಜನೆಗೆ ಕಡಕೋಳ?:ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ನೆಹರೂ ಓಲೇಕಾರ, ಜನರ ಮನಸ್ಸುಗಳನ್ನು ಒಗ್ಗೂಡಿಸುವ, ಸದಾಚಾರದ ಕಡೆಗೆ ಪರಿವರ್ತಿಸುವ ಕಾರ್ಯ ಶ್ರೀಗಳಿಂದ ಜರುಗಿದೆ. ಜನರಿಗೆ ನಿಜಜೀವನ ದರ್ಶನ ಮಾಡಿಸಿರುವ ಗುರುಗಳ ನಡೆ ನುಡಿಗಳೂ ಅನುಕರಣೀಯವಾಗಿದ್ದು, ಪೂಜ್ಯರ ವಚನಗಳನ್ನು ಅನುಸರಿಸಿದಲ್ಲಿ ಉನ್ನತಿ ಸದ್ಗತಿಗಳು ನಿಶ್ಚಿತ ಎಂದರು. ಉತ್ತಮ ವಾಗ್ಮಿಗಳಾಗಿರುವ ದಿಂಗಾಲೇಶ್ವರ ಶ್ರೀಗಳಿಂದ ಭವಿಷ್ಯದಲ್ಲಿ ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ ಎಂದರು. ಕಡಕೋಳ ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಯ ಅಡಿ ಆಯ್ಕೆಗೊಳಿಸಲಾಗಿದೆ. ಗ್ರಾಮದ ಪ್ರತಿಯೊಂದು ರಸ್ತೆಗಳನ್ನೂ ಕಾಂಕ್ರೀಟಕರಣಗೊಳಿಸಲಾಗುತ್ತದೆ. ಹತ್ತಿಮತ್ತೂರ ಹೋಬಳಿಯ 32 ಗ್ರಾಮಗಳ ಅಭಿವೃದ್ದಿಗೆ 50 ಕೋಟಿ ರೂಗಳ ಅನುದಾನ ತರಲಾಗಿದೆ. ಕಾಯಕಯೋಗಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಕೈಗೊಳ್ಳುತ್ತೆನೆ ಎಂದರು.

ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು, ಪ್ರತಿಯೊಂದು ಭಾವದಲ್ಲಿಯೂ ದೈವತ್ವವನ್ನು ಕಾಣುವ ಭಾರತೀಯರು, ದೇವರಿಗಿಂತ ಹೆಚ್ಚು ದೇವರ ಕೊಡುಗೆಗಳನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ನಮ್ಮ ಸಂಸ್ಕೃತಿ ಧರ್ಮಾಚರಣೆಗಳು ವಿದೇಶಿಯರಿಗೂ ಆಪ್ತವಾಗಿದೆ. ಜೀವನ ಸಿದ್ದಾಂತಗಳು ಬದುಕನ್ನು ಹಸಿರಾಗಿಸಿ, ಉತ್ತಮ ಮಾರ್ಗವನ್ನು ತೋರುತ್ತದೆ ಎಂದರು.

ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಗಳು, ಮಠದೊಂದಿಗೆ ಭಕ್ತರ ಭಾವನೆಗಳನ್ನೂ ಕಟ್ಟುತ್ತಿರುವ ದಿಂಗಾಲೇಶ್ವರ ಶ್ರೀಗಳು ಎಲ್ಲರಿಗಿಂತ ಶ್ರೇಷ್ಠತಮರಾಗಿದ್ದು, ತಮ್ಮ ಉಪದೇಶ ಬೋಧನೆಗಳನ್ನು ಸ್ವತಃ ಆಚರಣೆಯಲ್ಲಿಯೂ ತಂದಿರುತ್ತಾರೆ ಎಂದರು. ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಹಳಸಿದ ಮನಸ್ಸು ಬದುಕನ್ನು ಬಂಗಾರಗೊಳಿಸಿರುವ ದಿಂಗಾಲೇಶ್ವರ ಶ್ರೀಗಳು, ಘಟದಿಂದ ಮಠವನ್ನು ಕಟ್ಟಿದವರು. ಮನಸ್ಸುಗಳು ಕಲುಷಿತಗೊಳ್ಳುತ್ತಿರುವ ಇಂದಿನ ದಿನಗಳಲ್ಲಿಯೂ ಕಲ್ಮಶಗಳನ್ನು ಅಳಿಸಿ, ಬದುಕನ್ನು ಬೆಳಗಿಸಿದವರು ಎಂದು ತಿಳಿಸಿ, ಜನರು ಪರಿವರ್ತನೆಗೊಂಡಲ್ಲಿ ಮಾತ್ರ ನಾಡು ಬೆಳೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮೂರುಸಾವಿರಮಠದ ಶ್ರೀಗಳಾದ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಬಿಜಕಲ್ಲಿನ ಶಿವಲಿಂಗ ಶ್ರೀಗಳು, ಜೀಗೇರಿಯ ಗುರುಬಸವ ಶ್ರೀಗಳು, ಯತ್ನಟ್ಟಿಯ ಪಂಚಾಕ್ಷರಿ ಶ್ರೀಗಳು, ಹಂದಿಗನೂರಿನ ಚನ್ನವೀರ ದೇವರು, ಬನವಾಸಿಯ ಶ್ರೀಗಳು, ಅಕ್ಕಿಆಲೂರಿನ ಶಿವಬಸವ ದೇವರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಪರಮಪ್ಪ ದೊಡ್ಮನಿ ಸೇರಿದಂತೆ ಕಡಕೋಳ ಹಾಗೂ ಸುತ್ತಮುತ್ತಲಿನ ಸಹಸ್ರಾರು ಗ್ರಾಮಸ್ಥರು, ಕಲ್ಮೇಶ್ವರ ಸೇವಾ ಸಮೀತಿ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಸತತ 21 ದಿನಗಳ ಕಾಲ ಜೀವನ ದರ್ಶನ ಕುರಿತು ಪ್ರವಚನ ಆಲಿಸಿದ 5 ಸಾವಿರಕ್ಕೂ ಹೆಚ್ಚು ಜನರಿಗೆ ಮಹಾಮಂಗಲ ದಿನದಂದು ಹೋಳಿಗೆಯ ದಾಸೋಹದೊಂದಿಗೆ ರುದ್ರಾಕ್ಷಿ ಧಾರಣೆಯನ್ನೂ ಕೈಗೊಳ್ಳಲಾಯಿತು. ಕಡಕೋಳ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಸಿದ್ದಪಡಿಸಲಾಗಿದ್ದ ಹೋಳಿಗೆ ಸೇರಿದಂತೆ ಎಲ್ಲ ಪದಾರ್ಥಗಳನ್ನೂ ಪಡೆದುಕೊಂಡು ಭಕ್ತರಿಗೆ ದಾಸೋಹ ಕೈಗೊಳ್ಳುವ ವಿಶಿಷ್ಟವಾದ ಪದ್ಧತಿಯನ್ನು ಕೈಗೊಳ್ಳಲಾಯಿತು. ಎಲ್ಲ ಸಮುದಾಯದ ಮನೆಗಳಿಂದಲೂ ಹರಿದುಬಂದಿದ್ದ ಪ್ರಸಾದವನ್ನು ಭಕ್ತ ಸಮೂಹ ಸ್ವೀಕರಿಸಿತು.

ಪ್ರವಚನ ಸೇವೆ ಕೈಗೊಂಡ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳಿಗೆ ಬಂಗಾರದಿಂದ ಕಟ್ಟಲಾಗಿದ್ದು ರುದ್ರಾಕ್ಷಿ ಮಾಲೆಯನ್ನು ತೊಡಿಸಿದ ಗ್ರಾಮಸ್ಥರು ಧನ್ಯತಾ ಭಾವವನ್ನು ಹೊಂದಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಮಠಾಧೀಶರಿಗೂ, ದಾನಿಗಳಿಗೂ ಸಂಘಟಕರಿಂದ ಗೌರವ ಸಲ್ಲಿಕೆ ಕೈಗೊಳ್ಳಲಾಯಿತು. ಮಕ್ಕಳಿಂದ ಭರತನಾಟ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಗುಲಬರ್ಗಾದ ಚನ್ನಮಲ್ಲದೇವರು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X