• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಲಿಕೆ ಲಾರಿಗೆ ಡೆಮಾಕ್ರಸಿ ಡೀಸಲ್

By Shami
|
ಬೆಂಗಳೂರು, ಏ. 5: ಮೂರುವರೆ ವರ್ಷಗಳಷ್ಟು ದೀರ್ಘ ಕಾಲದ ನೌಕರಶಾಯಿ ಆಡಳಿತ ಪರ್ವದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದು ಮೋಕ್ಷ ಸಿಕ್ಕಿತು. ಪಾಲಿಕೆಯ ಅಂಗಳಕ್ಕೆ ಡೆಮಾಕ್ರಸಿ ವಾಪಸ್ಸು ಬಂತು.

ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಕೊಂಡು ಬೆಂಗಳೂರನ್ನು ಆಳುತ್ತಲೇ ಇರುವ ಹುನ್ನಾರ ಮತ್ತು ಇಂದು ನಾಳೆ ಇಂದು ನಾಳೆ ಇಂದು ನಾಳೆ ಎಂದು ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದ ಭಾರತೀಯ ಜನತಾ ಪಕ್ಷಕ್ಕೆ ನ್ಯಾಯಾಲಯ ಕಪಾಳಮೋಕ್ಷ ಮಾಡಿದ ನಂತರವೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಚುನಾವಣೆ ನಡೆಸಲು ಒಪ್ಪಿದ್ದು. ಒಪ್ಪಲೇ ಬೇಕಾಗಿತ್ತು.

ಅಂತಿಮವಾಗಿ ಚುನಾವಣಾ ದಿನಾಂಕಗಳು ಪ್ರಕಟವಾಗಿ ಬೆಂಗಳೂರು ನಾಗರೀಕರು ಮತಗಟ್ಟೆಗಳತ್ತ ಹೆಜ್ಜೆ ಹಾಕುವ ಕಾಲವೂ ಕೂಡಿಬಂತು. 198 ವಾರ್ಡುಗಳಿಂದ ಸರಾಸರಿ ಮತದಾನ ಶೇ.44ರಷ್ಟು ದಾಖಲಾಯಿತು.

ಸೋಮವಾರ ನಡೆದ ಮತ ಎಣಿಕೆಯನಂತರ ಎಲ್ಲ ಮೂರು ಪಕ್ಷಗಳ ಬಂಡವಾಳ ಹೊರಬಿತ್ತು. ಬಿಜೆಪಿ ಸಫಾರಿ ಸೂಟ್ ನಲ್ಲಿ ಟ್ರಿಮ್ ಆದರೆ ಕಾಂಗ್ರೆಸ್ ಬರೀ ಪ್ಯಾಂಟು ಟೀ ಶರ್ಟ್ ನಲ್ಲಿ ಕಾಣಿಸಿಕೊಂಡಿತು. ಜಾತ್ಯತೀತ ಜನತಾದಳ ಲಂಗೋಟಿಯಾಯಿತು. ಕೆಲವು ಮಾಧ್ಯಮಗಳು ಭವಿಷ್ಯ ನುಡಿದಂತೆ ಪಕ್ಷೇತರರು ಅಪಾರ ಸಂಖ್ಯೆಯಲ್ಲಿ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ. ಜತೆಗೆ, ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿರುವುದರಿಂದ ಕುದುರೆ ವ್ಯಾಪಾರಕ್ಕಾಗಲೀ ಅಥವಾ ವಾರ್ಡ್ ಮಟ್ಟದಲ್ಲಿ ಆಪರೇಷನ್ ಕಮಲಕ್ಕಾಗಲೀ ಅವಕಾಶ ಏರ್ಪಡಲಿಲ್ಲ.

ಭಾಜಪ 112 ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಒಂದು ಕಾರಣವಂತೂ ಸ್ಪಷ್ಟವಾಗಿದೆ. ಹೆಚ್ಚೂ ಕಡಿಮೆ ಎಲ್ಲ ಬಡಾವಣೆಗಳಲ್ಲಿ ಸಂದಿಗೊಂದಿಗಳಲ್ಲಿ ಹಳೆ ರಸ್ತೆಗಳು ದುರಸ್ತಿಯಾಗಿವೆ. ಹೊಸ ರಸ್ತೆಗಳು ನಿರ್ಮಾಣವಾಗಿವೆ. ಇದರಿಂದಾಗಿ ಎರಡು, ಮೂರು, ನಾಲಕ್ಕು ಚಕ್ರದ ವಾಹನ ಚಾಲಕರು, ತಳ್ಳು ಗಾಡಿಯವರು ಹಾಗೂ ನಟರಾಜ ಎಕ್ಸ್ ಪ್ರೆಸ್ ನವರೂ ಸಂತುಷ್ಟರಾಗಿದ್ದಾರೆ. ಸಹಜವಾಗಿಯೇ ಕೆಲವು ಓಟುಗಳು ಒಲಿದಿವೆ. ಬೆಂಗಳೂರಿನಲ್ಲಿರುವ ಕೆಲವು ಶಾಸಕರಾದರೂ ಮನಸ್ಸಿಟ್ಟು ಕೆಲಸ ಮಾಡಿದ್ದಾರೆ.

ಇದೇ ಒಂದು ಕಾರಣವಾಗಿದ್ದರೆ ಬಿಜೆಪಿ 198 ಸ್ಥಾನಗಳಲ್ಲೂ ಗೆಲ್ಲಬೇಕಾಗಿತ್ತು. ಹಾಗಾಗಲು ಆಸ್ಪದವಿಲ್ಲ. ಬಿಬಿಎಂಪಿಯಲ್ಲಿ ಪ್ರಬಲ ಪ್ರತಿಪಕ್ಷ ಇರಬೇಕೆಂದು ಅರಿತ ಮತದಾರರು ಬಿಜೆಪಿ ವಿರೋಧಿಗಳಿಗೆ 79 ಸ್ಥಾನ ನೀಡಿರುವುದು ಔಚಿತ್ಯಪೂರ್ಣವಾಗಿದೆ. ರಚನಾತ್ಮಕ ಆಡಳಿತ ನಡೆಸುವುದಕ್ಕೆ ಮತ್ತು ಸರ್ವಾಧಿಕಾರಿಯಂತೆ ವರ್ತಿಸಲು ಆಡಳಿತ ಪಕ್ಷಕ್ಕೆ ಸಾಧ್ಯವಾಗದೇ ಇರಲಿ ಎನ್ನುವುದೇ ಮತದಾರನ ಅಭಿಮತ.

ಫಲಿತಾಂಶ ಸಾರಾಂಶ : ಕಮಲ - 112, ಕೈ - 64, ತೆನೆ ಹೊತ್ತ ಮಹಿಳೆ - 15, ಇತರ - 7

ಬೆಂಗಳೂರು ನಗರದ ರಾಜ್ಯಭಾರವನ್ನು ತಲತಲಾಂತರದಿಂದ ಕಾಂಗ್ರೆಸ್ ಪಕ್ಷವೇ ಎಂಜಾಯ್ ಮಾಡಿಕೊಂಡು ಬಂದಿತ್ತು. ಮೇ 2008ರ ವಿಧಾನಸಭಾ ಚುನಾವಣೆಗಳಂತೆ ಬೆಂಗಳೂರು ಮತದಾರರು ಬಿಬಿಎಂಪಿ ಚುನಾವಣೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಮಾಡಲಿಲ್ಲ. ಮತದಾನ ಮಾಡುವಾಗ ಆಲಸ್ಯತನ ತೋಸಿರಿದರೂ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಬಿಜೆಪಿಗೆ ಸ್ಪಷ್ಟ ಪ್ರೋತ್ಸಾಹ ನೀಡಿದ್ದು ಜನತೆ ತನ್ನಲ್ಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿರುವ ಸರದಿ ಮತ್ತು ವಚನ ಪಾಲನೆ ಈಗ ಭಾಜಪ ಪಕ್ಷದ ಹೆಗಲೇರಿದೆ.

ಬೃಹತ್ ಬೆಂಗಳೂರು ಭೂಪಟ ಮೂಡಿದ ನಂತರ ನಡೆದ ಮೊದಲ ಚುನಾವಣೆ ಇದಾಗಿರುವುದರಿಂದ ಪಾಲಿಕೆಯ ಆಡಳಿತದ ವರಸೆ ಹೇಗಿದ್ದೀತು ಎಂದು ಹೇಳುವುದಕ್ಕೆ ಕಾಲ ಪಕ್ವವಲ್ಲ. ಯಥಾಪ್ರಕಾರ ಪ್ರಬಲ ರಾಜಕೀಯ ನಾಯಕರ ಚೇಲಾಗಳ ಲಗ್ಗೆಯ ಜತೆಗೆ ನಾಗರೀಕ ಪ್ರಜ್ಞೆಯನ್ನು ಉಳಿಸಿ ಬೆಳೆಸಬೇಕು ಎಂದು ಬೆಂಗಳೂರಿನ ಬಗೆಗೆ ಮಮತೆಯಿಂದ, ಭಯದಿಂದ, ಕಳಕಳಿಯಿಂದ ಹಾಗೂ ಸ್ವಪ್ರೇರಣೆಯಿಂದ ಸ್ಪರ್ಧಿಸಿದ ಅನೇಕ ಪಕ್ಷಾತೀತ ಸ್ಪರ್ಧಿಗಳು ಸೋತಿದ್ದಾರೆ. ಕಾರಣ ಸರಳ: ಇಂಥವರಿಗೆ ಪ್ರಮುಖ ಪಕ್ಷಗಳ ಚುನಾವಣಾ ಚಿನ್ಹೆಯ ಬೆಂಬಲವಿಲ್ಲ ಮತ್ತು ಕಡುಕಪ್ಪು ಹಣದ ಬೆಂಬಲ ಇರಲಿಲ್ಲ.

ಕ್ಷಣಕ್ಷಣಕ್ಕೂ ಬೆಳೆಯುತ್ತಿರುವ ಮತ್ತು ಬೆಳೆದಂತೆಲ್ಲ ಸಂಕೀರ್ಣವಾಗುತ್ತಿರುವ ಬೃಹದಾಕಾರ ಬೆಂಗಳೂರಿನ ಮುಂದಿರುವ ಸವಾಲುಗಳು ಬೆಟ್ಟದಷ್ಟಿವೆ. ರಾಜಕೀಯ ಪಕ್ಷಗಳು ಸ್ವರ್ಗದ ಆಸೆ ತೋರಿಸಬಹುದು. ಚಂದ್ರನನ್ನು ಭುವಿಗೆ ಕರೆದು ತರಲಾಗುವುದೆಂದು ಕವನ ಬರೆಯಬಹುದು. ಅವೆಲ್ಲ ನಮಗೆ ಬೇಡ. ಆಳಕ್ಕೆ ಬಿಳಲು ಬಿಟ್ಟಿರುವ ರಿಯಲ್ ಎಸ್ಟೇಟ್ ಮಾಫಿಯಾವನ್ನು ಹೆಡೆಮುರಿಕಟ್ಟಿ ಮಣಿಸುವ ಇಚ್ಛೆ ನಗರಸಭಾ ಸದಸ್ಯರಿಗೆ ಇರತಕ್ಕದ್ದು. ಬೆಂಗಳೂರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯನ್ನು ಬೇಡುತ್ತಿದೆ. ಶಿಸ್ತು ಪಾಲಕರನ್ನು ಅಗತ್ಯ ಪ್ರಮಾಣದಲ್ಲಿ ನೇಮಿಸದೆ ಅಪರಾಧ ಸಂಖ್ಯೆ ಇಳಿಮುಖ ಆಗುವುದೆಂದು ಆಶಿಸುವುದು ತಪ್ಪಾಗುತ್ತದೆ.

ಕೆಲವು ವಾರ್ಡ್ ಗಳಲ್ಲಿ ತೋಳುಬಲ ಮತ್ತು ಹಣಬಲ ಇರುವವರ ಆಟ ಕಾಟ ಹೆಚ್ಚಾಗಿದೆ. ಅದನ್ನು ತಡೆಯುವುದು ಹೊಸ ಕಾರ್ಪೋರೇಟರುಗಳ ಕರ್ತವ್ಯದ ಒಂದು ಭಾಗವಾಗಬೇಕು. ಅಂತೆಯೇ, ಇಡೀ ವಾರ್ಡ್ ಅನ್ನು ನುಂಗಿ ಬೀರು ಕುಡಿಯುವ ಖದೀಮರೂ ಚುನಾಯಿತರಾಗಿ ಬಂದಿದ್ದಾರೆ. ಅವರನ್ನು ಹದ್ದು ಬಸ್ತಿನಲ್ಲಿ ಇಡುವ ಹೊಣೆಯನ್ನು ನಾಗರಿಕ ಗುಂಪುಗಳು ಪ್ರದರ್ಶಿಸಬೇಕು.

ಗೆಲುವಿನ ಮಾಲೆ ಧರಿಸಿದವರು : ವಾರ್ಡ್ 1ರಿಂದ 100

ಗೆಲುವಿನ ಮಾಲೆ ಧರಿಸಿದವರು : ವಾರ್ಡ್ 101ರಿಂದ 198

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more