ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳ್ಳಿನ ಹಾಸಿಗೆಯ ಮೇಲೆ ಭಕ್ತಿಯ ಭಾವಪರವಶತೆ

By * ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

ಸವಣೂರ, ಏ. 5 : ತುಂಡು ಪಂಜೆ, ಮೈಮೇಲೆ ಗುಲಾಲಿನ ಅಭಿಷೇಕದೊಂದಿಗೆ ಗ್ರಾಮದ ಹೊರವಲಯದಲ್ಲಿನ ಮುಳ್ಳಿನ ಗಿಡದ ಬಳಿಗೆ ಶರವೇಗದಲ್ಲಿ ಓಡಿದ ದಾಸಪ್ಪಗಳು, ಕೇವಲ ಕೈಗಳಿಂದಲೇ ಮಧ್ಯಮ ಗಾತ್ರದ ಕಾರಿ ಮುಳ್ಳಿನ ಗಿಡವನ್ನು ಬೇರು ಸಹಿತವಾಗಿ ಕೀಳಿದ್ದು ಮೈನವರೇಳಿಸುವಂತಿತ್ತು. ಕಲಿವಾಳ ಗ್ರಾಮದ ಆಂಜನೇಯ ಸ್ವಾಮಿಯ ಅಗ್ನಿ ಮಹೋತ್ಸವ ಭಕ್ತಿ ಪರಾಕಾಷ್ಠೆಯ ದ್ಯೋತಕವಾಗಿತ್ತು.

ಸವಣೂರ ತಾಲೂಕಿನ ಅಂಚಿನಲ್ಲಿರುವ, ಅಭಿವೃದ್ದಿಯಿಂದ ವಂಚಿತವಾಗಿರುವ ಕಲಿವಾಳ ಗ್ರಾಮದಲ್ಲಿ ಪ್ರತಿ ವರ್ಷ ಜರುಗುವ ಅಗ್ನಿ ಮಹೋತ್ಸವ ಕಾರ್ಯಕ್ರಮ ಈ ಬಾರಿಯೂ ತನ್ನೆಲ್ಲ ವಿಶೇಷತೆಗಳೊಂದಿಗೆ ಪೂರ್ಣಗೊಂಡಿತು. ಅತ್ಯಂತ ರುದ್ರಭೀಕರವಾದ ಹಲವಾರು ಪವಾಡಗಳನ್ನು ತೋರುವ ದಾಸಪ್ಪಗಳ ತಂಡ, ಉಕ್ಕಿ ಹರಿದ ಭಕ್ತಿಯ ಜಯಘೋಷಗಳ ನಡುವೆ ಮುಳ್ಳಿನ ಹಾಸಿಗೆಯ ಮೇಲೂ ಉರುಳಾಡಿತು.

ಗ್ರಾಮದ ಹೊರವಲಯದಲ್ಲಿನ ಮುಳ್ಳಿನ ಗಿಡವನ್ನು ಕೇವಲ ಕೈಗಳಿಂದಲೇ ಕಿತ್ತ ದಾಸಪ್ಪಗಳು, ದೇವರ ಪಲ್ಲಕ್ಕಿಯೊಂದಿಗೆ ಮುಳ್ಳಿನ ಗಿಡವನ್ನೂ ಮೆರವಣಿಗೆಯಲ್ಲಿ ಗ್ರಾಮಕ್ಕೆ ತಂದರು. ಹಾದಿಯುದ್ದಕ್ಕೂ ಡೊಳ್ಳಿನ ವಾದನ ಹಾಗೂ ಜಯಘೋಷಗಳೊಂದಿಗೆ ದೈವದ ಸ್ಮರಣೆಯನ್ನು ಕೈಗೊಂಡ ಸಹಸ್ರಾರು ಗ್ರಾಮಸ್ಥರು, ಆಂಜನೇಯ ಸ್ವಾಮಿಯ ದೇವಸ್ಥಾನದ ಸಮ್ಮುಖದಲ್ಲಿ ಮುಳ್ಳಿನ ಹಾಸಿಗೆಯನ್ನೇ ಸಿದ್ದಪಡಿಸಿದರು.

ಮುಳ್ಳಿನ ರಾಶಿಯನ್ನು ಆವೇಶ ಭರಿತರಾದ ಬರಿಮೈ ದಾಸಪ್ಪಗಳು ಏರುತ್ತಿದ್ದಂತೆ, ಪುನಃ ಜಯಘೋಷಣೆಗಳು ಮುಗಿಲು ಮುಟ್ಟಿದವು. ಕಬ್ಬಿಣದ ಸೂಜಿಯಂತಿದ್ದ ಕಾರಿ ಮುಳ್ಳಿನ ರಾಶಿಯನ್ನು ಏರಿ ತುಳಿದಾಡುವ, ಅವುಗಳ ಮೇಲೆ ಮೈಮರೆತು ಉರುಳಾಡುವ ದಾಸಪ್ಪಗಳಲ್ಲಿ ಕಂಡಿದ್ದು ಮಾತ್ರ ಭಕ್ತಿ ಸಮರ್ಪಣೆ ಕೈಗೊಂಡ ಧನ್ಯತಾಭಾವ. ಪವಾಡಕ್ಕೂ ಮುನ್ನ ಮುಳ್ಳಿನ ಗುಡ್ಡೆಯಾಗಿದ್ದ ಗಿಡದ ಟೊಂಗೆಗಳು, 40 ನಿಮಿಷಯಗಳ ಪರ್ಯಂತ ಜರುಗಿದ ಪವಾಡದ ಬಳಿಕ ಮುಳ್ಳಿನ ಹಾಸಿಗೆಯಾಗಿ ಸಮತಟ್ಟುಗೊಂಡಿತ್ತು.

ದೈವವನ್ನು ಮೆಚ್ಚಿಸುವ ಮುಂದಿನ ಹಾದಿ ಅಗ್ನಿ ಮಹೋತ್ಸವ. ದೇವಸ್ಥಾನದ ಆವರಣದಲ್ಲಿಯೇ ಆಳದ ಕಂದಕ ತೋಡಿದ್ದ ಗ್ರಾಮಸ್ಥರು, ಚಕ್ಕಡಿಯಲ್ಲಿ ಕಟ್ಟಿಗೆ ಸುರಿದು ನಿಗಿನಿಗಿಸುವ ಕೆಂಡದ ರಾಶಿಯನ್ನು ಸಿದ್ದಪಡಿಸಿದ್ದರು. ಪುನಃ ದಾಸಪ್ಪನ ನೇತೃತ್ವದಲ್ಲಿ ಅಗ್ನಿ ಮಹೋತ್ಸವ ಕೈಗೊಂಡು ಸತತ ಮೂರು ಬಾರಿ ಕೆಂಡ ಹಾಯಲಾಯಿತು.

ಗ್ರಾಮದ ಹಿರಿಯರಾದ ಚನ್ನಬಸಯ್ಯ ಮಲ್ಲಯ್ಯ ಹಿರೇಮಠ, ಕೆಲೂರಿನ ಶಿದ್ದಯ್ಯ ಕಪ್ಪತ್ತಯ್ಯ ಮುಳ್ಳಪ್ಪಯ್ಯಮಠ ಅವರ ಸಾನಿಧ್ಯದಲ್ಲಿ ಅಗ್ನಿ ಮಹೋತ್ಸವ ಕೈಗೊಳ್ಳಲಾಗಿದ್ದು, ಪವಾಡದ ದಾಸಪ್ಪ ಬಸಪ್ಪ ಬಿ. ಮರಳಿಹಳ್ಳಿ ಹಾಗೂ ದಾಸಪ್ಪಗಳಾದ ಮುದ್ದೆಪ್ಪ ಮರಳಿಹಳ್ಳಿ, ಬಸವಂತಪ್ಪ ಗೂಲಗುಂದಿ, ಯೋಗೇಶ ಮರಳಿಹಳ್ಳಿ, ಶಿವಾನಂದ ಮರಳಿಹಳ್ಳಿ, ಯಲ್ಲಪ್ಪ ಮರಳಿಹಳ್ಳಿ, ಆನಂದ ಮರಳಿಹಳ್ಳಿ, ಮಂಜುನಾಥ ಗುಲಗುಂದಿ, ಬಸವರಾಜ ಗುಲಗುಂದಿ, ನಾಗಪ್ಪ ಗಡ್ಡಿ, ಬಸವಣ್ಯೆಪ್ಪ ಗಡ್ಡಿ, ಬಿ.ಎಸ್. ಮರಳಿಹಳ್ಳಿ, ಮುರಾರೆಪ್ಪ ಕಲಿವಾಳ, ಬಿ.ಎನ್ ಮರಳಿಹಳ್ಳಿ ಸೇರಿದಂತೆ ೧೫ ದಾಸಪ್ಪಗಳು ತಮ್ಮ ಭಕ್ತಿ ಸೇವೆ ಸಲ್ಲಿಸಿದರು.

ಕಲಿವಾಳದ ಆಂಜನೇಯ ಸ್ವಾಮಿ ಗ್ರಾಮದಲ್ಲಿನ ವಾಲ್ಮೀಕಿ ಸಮಾಜಕ್ಕೆ ಕುಲದೈವ. ಅಂತೆಯೇ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದಲ್ಲಿನ ಪರಂಪರೆಯನ್ನೇ ತಮ್ಮ ಗ್ರಾಮಕ್ಕೂ ತಂದು ಅಗ್ನಿ ಮಹೋತ್ಸವ ಆಚರಣೆಗೆ ಮುಂದಾದ ಗ್ರಾಮಸ್ಥರು, ಇತ್ತಿಚಿನ ಹಲವಾರು ವರ್ಷಗಳಿಂದ ಅಗ್ನಿ ಮಹೋತ್ಸವ, ಮುಳ್ಳಿನ ಪವಾಡ ಆಚರಿಸುತ್ತಿದ್ದಾರೆ. ಆಂಜನೇಯನ ಎಲ್ಲ ಪವಾಡಗಳ ಅನುಕರಣೆಯನ್ನೂ ತೋರುತ್ತಾರೆ. ಗ್ರಾಮದ ಹಲವಾರು ಪ್ರಮುಖರು, ಮುಖಂಡರ ಸಂಪೂರ್ಣ ಸಹಕಾರದೊಂದಿಗೆ ಪ್ರತಿ ವರ್ಷವೂ ಈ ಅಗ್ನಿ ಮಹೋತ್ಸವ ಆಚರಿಸಲಾಗುತ್ತಿದ್ದು, ಸುತ್ತಲಿನ ಭೈರಾಪೂರ, ಇಚ್ಚಂಗಿ, ಕಡಕೋಳ, ಹೆಸರೂರ, ಸಿದ್ದಾಪೂರ ಗ್ರಾಮಸ್ಥರನ್ನೂ ತನ್ನತ್ತ ಸೆಳೆದುಕೊಂಡಿದೆ. ಐದು ದಿನಗಳ ಮುನ್ನ ಕಂಕಣ ಕಟ್ಟುವದರೊಂದಿಗೆ ಆರಂಭಗೊಳ್ಳುವ ಆಂಜನೇಯ ಸ್ವಾಮಿಯ ಅಗ್ನಿ ಮಹೋತ್ಸವ ಕಾರ್ಯಕ್ರಮ, ಅನ್ನ ಸಂತರ್ಪಣೆ ಓಕುಳಿಯೊಂದಿಗೆ ಪೂರ್ಣಗೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X