ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ಹುಂಡಿಗೆ ಕುಡುಕರ ದೇಣಿಗೆ

By Prasad
|
Google Oneindia Kannada News

Karnataka excise minister MP Renukacharya
ಗುಲಬರ್ಗಾ, ಏ.4 : ಕರ್ನಾಟಕ ರಾಜ್ಯದಲ್ಲಿ ಅಬಕಾರಿ ಇಲಾಖೆಯಿಂದ 2010-11ನೇ ಸಾಲಿನಲ್ಲಿ 7500 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಹೊಂದಿದ್ದು, 2009-10 ನೇ ಸಾಲಿನಲ್ಲಿ 6978 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಅಬಕಾರಿ ಖಾತೆಯನ್ನು ಪಡೆದ ಬಳಿಕ ಈಗಾಗಲೇ ಮಂಗಳೂರು, ಮೈಸೂರು, ಬೆಳಗಾವಿ, ಬೆಂಗಳೂರು ಮತ್ತು ಗುಲಬರ್ಗಾ ವಿಭಾಗ ಮಟ್ಟದ ಅಬಕಾರಿ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಹೊಸಪೇಟೆ ವಿಭಾಗಮಟ್ಟದ ಸಭೆ ಮಾತ್ರ ನಡೆಸಬೇಕಾಗಿದೆ ಎಂದು ಶನಿವಾರ ಗುಲಬರ್ಗಾದಲ್ಲಿ ಅವರು ಹೇಳಿದರು.

ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮತ್ತು ನಕಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಯುವಂತೆ ಹಾಗೂ ಅಪರಾಧಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಬೇಕಲ್ಲದೆ ಗುಂಡಾ ಕಾಯ್ದೆಯನ್ವಯ ಗಡಿಪಾರು ಸಹ ಮಾಡಲು ಹಿಂಜರಿಯಬಾರದು ಎಂದು ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಚಿವರು ಸೂಚಿಸಿದರು. ಕಳ್ಳಭಟ್ಟಿ ಸಾರಾಯಿ ತಯಾರಿಕೆ, ನಕಲು ಮದ್ಯ ಮಾರಾಟ ಮಾಡುವವರು ಸರ್ಕಾರದ ಬಿಪಿಎಲ್ ಕಾರ್ಡು, ಆಶ್ರಯ ಮನೆ ಮುಂತಾದ ಸೌಲಭ್ಯಗಳನ್ನು ಪಡೆದಿದ್ದರೆ ಅವುಗಳನ್ನು ಹಿಂದಕ್ಕೆ ಪಡೆಯಲಾಗುವುದು. ಈ ಕುರಿತು ಸರ್ಕಾರದ ಆದೇಶ ಹೊರಡಿಸಲಾಗುವುದು.

ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟ ಮಾಡುವುದನ್ನು ತಡೆಯಲು ಅಬಕಾರಿ ಇಲಾಖೆಯಿಂದಲೇ ಗ್ರಾಮ ಸಭೆಗಳನ್ನು ನಡೆಸಲು ಕ್ರಮ ಜರುಗಿಸಲಾಗಿದೆ. ಈ ಸಭೆಗಳಿಗೆ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು, ಚುನಾಯಿತ ಪ್ರತಿನಿಧಿ, ಯುವಕ ಸಂಘಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರನ್ನು ಆಹ್ವಾನಿಸಿ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದ ವಿಸ್ತೃತ ಮಾಹಿತಿ ಪಡೆಯಬೇಕು ಎಂದು ಅವರು ನುಡಿದರು.

ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಗ್ರಾಮ ಸಭೆಗಳ ಬಗ್ಗೆ ಮುಂಚಿತವಾಗಿಯೇ ಕರಪತ್ರಗಳನ್ನು ಹೊರಡಿಸಿ ಹೆಚ್ಚು ಪ್ರಚುರ ಪಡಿಸಬೇಕು. ಈ ಕಾರ್ಯದಲ್ಲಿ ಜನರ ಸಹಭಾಗಿತ್ವ ಅತೀ ಮುಖ್ಯವಾಗಿದೆ. ರಾಜ್ಯದಲ್ಲಿ 1500 ಹೊಸ ಮದ್ಯದ ಅಂಗಡಿ ತೆರೆಯಬಹುದೆಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಇಲಾಖೆಯಲ್ಲಿರುವ ಲೋಪದೋಷಗಳನ್ನು ಹಂತ ಹಂತವಾಗಿ ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಶಾಸಕರಾದ ಚಂದ್ರಶೇಖರ್ ಪಾಟೀಲ್ ರೇವೂರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X