ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ : ವದಂತಿಗಳಿಗೆ ಕಿವಿಗೊಡಬೇಡಿ

By Prasad
|
Google Oneindia Kannada News

SSLC students
ಬೆಂಗಳೂರು, ಮಾ. 30 : ಏಪ್ರಿಲ್ 1ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಮಂಡಳಿಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿರುವ ಪ್ರಶ್ನೆ ಪತ್ರಿಕೆ ಮಾದರಿ ಪ್ರಶ್ನೆಪತ್ರಿಕೆ ಮಾತ್ರವಾಗಿದ್ದು, ಈ ಕುರಿತಂತೆ ಊಹಾಪೋಹಗಳಿಗೆ ಮತ್ತು ವದಂತಿಗೆ ಕಿವಿಗೊಡಬಾರದೆಂದು ಮಂಡಳಿ ವಿದ್ಯಾರ್ಥಿಗಳಿಗೆ ಎಚ್ಚರಿಸಿದೆ.

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬರಬಹುದಾದ ಸಂಭವನೀಯ ಪ್ರಶ್ನೆಗಳನ್ನು ಊಹೆ ಮಾಡುತ್ತಾ ವದಂತಿಗಳನ್ನು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೇ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದು ಹೇಳಿದೆ.

ದುಡ್ಡು ಮಾಡಿಕೊಳ್ಳಬಯಸುವ ಕೆಲ ವ್ಯಕ್ತಿಗಳು ಪ್ರಶ್ನೆ ಪತ್ರಿಕೆಯ ಆಸೆ ತೋರಿಸಿ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಸಾಧ್ಯತೆಗಳೂ ಇವೆ. ಇಂಥ ಸುದ್ದಿಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬಾರದು.

ಈ ಶೈಕ್ಷಣಿಕ ಸಾಲಿನಲ್ಲಿ ಪ್ರಶ್ನೋತ್ತರ ಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಮಾಡಿರುವ ಪ್ರಯುಕ್ತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮಂಡಳಿಯ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಜಿಲ್ಲಾ ಹಂತದಲ್ಲಿ ಮಂಡಳಿಯ ವತಿಯಿಂದ ಬದಲಾವಣೆಯಾಗಿರುವ ಪ್ರಶ್ನೋತ್ತರ ಪತ್ರಿಕೆ ಮತ್ತು ನೀಲನಕಾಶೆ ಸಂಬಂಧವಾಗಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ತಾಲ್ಲೂಕು ಮಟ್ಟದಲ್ಲಿ ಸಹ ತರಬೇತಿಯನ್ನು ನೀಡಲಾಗಿದೆ.

ತರಗತಿಗೆ ನಿಗದಿಪಡಿಸಿರುವ ಪಠ್ಯ ವಸ್ತುವನ್ನು ಆಧರಿಸುತ್ತಾ ಎಲ್ಲಾ ಅಧ್ಯಾಯಗಳಿಗೆ, ಬೋಧನಾಂಶಗಳಿಗೆ ಅನುಗುಣವಾಗಿ ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಅದರಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಿರ್ದೇಶಕರು (ಪರೀಕ್ಷೆ) ಮನವಿ ಮಾಡಿಕೊಂಡಿದೆ.

ಬೆಂಗಳೂರು ಗ್ರಾಮಾಂತರ : 2010ರ ಏಪ್ರಿಲ್ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಏ.1 ರಿಂದ ಏ 8ರ ರವರೆಗೆ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಖಾಸಗಿ ಅಭ್ಯರ್ಥಿಗಳ ಒಂದು ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 55 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 14,426 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆ ತೆಗೆದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷಾ ಪ್ರವೇಶ ಪತ್ರ ನೀಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಆಸನದ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ಶಾಂತಿಯುತವಾಗಿ ಪರೀಕ್ಷೆ ನಡೆಸಲು ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಆರ್ ಕೆ ರಾಜು ತಿಳಿಸಿದ್ದಾರೆ.

ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X